ADVERTISEMENT

ಕೃಷ್ಣಾನದಿ ಪ್ರವಾಹ ಪ್ರಮಾಣ ಇಳಿಮುಖ

ನದಿತೀರಕ್ಕೆ ಜಿಲ್ಲಾಧಿಕಾರಿ ಡಾ.ಸತೀಶ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಭೇಟಿ, ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 26 ಜುಲೈ 2021, 3:54 IST
Last Updated 26 ಜುಲೈ 2021, 3:54 IST
ರಾಯಚೂರು ತಾಲ್ಲೂಕಿನ ಡೊಂಗಾರಾಂಪೂರ ಕೃಷ್ಣಾ ನದಿತೀರಕ್ಕೆ ಜಿಲ್ಲಾಧಿಕಾರಿ ಡಾ.ಸತೀಶ ನೇತೃತ್ವದಲ್ಲಿ ಅಧಿಕಾರಿಗಳ ತಂಡವು ಭಾನುವಾರ ಭೇಟಿ ನೀಡಿ ಪರಿಶೀಲಿಸಿತು
ರಾಯಚೂರು ತಾಲ್ಲೂಕಿನ ಡೊಂಗಾರಾಂಪೂರ ಕೃಷ್ಣಾ ನದಿತೀರಕ್ಕೆ ಜಿಲ್ಲಾಧಿಕಾರಿ ಡಾ.ಸತೀಶ ನೇತೃತ್ವದಲ್ಲಿ ಅಧಿಕಾರಿಗಳ ತಂಡವು ಭಾನುವಾರ ಭೇಟಿ ನೀಡಿ ಪರಿಶೀಲಿಸಿತು   

ರಾಯಚೂರು: ನಾರಾಯಣಪುರ ಜಲಾಶಯದಿಂದ ಕೃಷ್ಣಾನದಿಗೆ ಹೊರಬಿಡುತ್ತಿರುವ ನೀರಿನ ಪ್ರಮಾಣವು ಇಳಿಮುಖವಾಗುತ್ತಿದೆ.

ಭಾನುವಾರ ಸಂಜೆ 5 ಗಂಟೆಗೆ 2.88 ಲಕ್ಷ ಕ್ಯುಸೆಕ್ ಅಡಿ ಹೊರಹರಿವು ಇತ್ತು. ಜಿಲ್ಲೆಯ ಮೂರು ತಾಲ್ಲೂಕುಗಳ ನದಿತೀರಗಳಲ್ಲಿ ಕಟ್ಟೆಚ್ಚರ ಮುಂದುವರಿದಿದೆ. ರಾಯಚೂರು ತಾಲ್ಲೂಕಿನ ವ್ಯಾಪ್ತಿಯ ಗುರ್ಜಾಪುರ ಬ್ರಿಡ್ಜ್ ಕಂ ಬ್ಯಾರೇಜ್‌ಗೆ ಜಿಲ್ಲಾಧಿಕಾರಿ ಡಾ.ಸತೀಶ, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಆರ್ ದುರಗೇಶ, ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ, ತಹಶೀಲ್ದಾರ್ ಡಾ.ಹಂಪಣ್ಣ ಸಜ್ಜನ್ ಅವರು ಭೇಟಿ ನೀಡಿ ಪ್ರವಾಹ ಪರಿಸ್ಥಿತಿಯನ್ನು ಪರಿಶೀಲನೆ ನಡೆಸಿದರು.

ಆನಂತರ ಗುರ್ಜಾಪುರ ಗ್ರಾಮದ ಸ್ಥಳಾಂತರಿಸುವ ಉದ್ದೇಶಿತ ಮನೆಗಳ ಪರಿಶೀಲನೆ ನಡೆಸಿದರು. ಗ್ರಾಮಸ್ಥರು ವಾಸಿಸುವ ಮನೆಗಳಿಗೆ ಅಗತ್ಯ ಮೂಲ ಸೌಕರ್ಯಗಳ ಕುರಿತು ಪರಿಶೀಲನೆ ನಡೆಸಿದರು.

ADVERTISEMENT

ಕೃಷ್ಣಾನದಿ ತೀರದ ರಾಯಚೂರು ತಾಲ್ಲೂಕಿನ ಗ್ರಾಮಗಳಾದ ಡಿ.ರಾಂಪುರ, ಆತ್ಕೂರು ಭೇಟಿ ನೀಡಿದರು. ಅಲ್ಲದೇ ನಡುಗಡ್ಡೆಯಲ್ಲಿರುವ ಕುರ್ವಾಕುಲ, ಕುರ್ವಕುರ್ದಾ ಹಾಗೂ ಅಗ್ರಹಾರ ಪ್ರದೇಶದ ಜನರ ಸಮಸ್ಯೆಗಳ ಕುರಿತು ಗ್ರಾಮ ಪಂಚಾಯಿತಿ ವಿಪತ್ತು ನಿರ್ವಹಣಾ ಸಮಿತಿಯ ಸದಸ್ಯರೊಂದಿಗೆ ಚರ್ಚೆ ನಡೆಸಿದರು.

ಕೃಷ್ಣಾ ಪ್ರವಾಹದಿಂದ ನದಿ ತೀರದಲ್ಲಿರುವ ಜಮೀನುಗಳಿಗೆ ನೀರು ನುಗ್ಗಿದ ಪರಿಣಾಮ ಬೆಳೆ ಹಾನಿಯ ಬಗ್ಗೆ ಪರಿಶೀಲನೆ ನಡೆಸಿದ ಅವರು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಭೇಟಿ
ಡಿ.ರಾಂಪುರ (ಶಕ್ತಿನಗರ):
ಪ್ರವಾಹ ಪೀಡಿತ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಡಾ.ಸತೀಶ ಅವರು ಭಾನುವಾರ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸಿದರು. ನದಿ ಪಾತ್ರದ ಗ್ರಾಮಗಳಾದ ಗುರ್ಜಾಪುರ, ಡಿ.ರಾಂಪೂರ ಮತ್ತು ಆತ್ಕೂರ ಗ್ರಾಮಗಳಿಗೆ ಭೇಟಿ ಮಾಡಿ ಪ್ರವಾಹದ ಕುರಿತು ಜನರಿಂದ ಮಾಹಿತಿ ಪಡೆದರು.

ನಾರಾಯಣಪುರ ಜಲಾಶಯದಲ್ಲಿ ಒಳಹರಿವು 3 ಲಕ್ಷ ಕ್ಯುಸೆಕ್‌ ಇದೆ. 2.88 ಲಕ್ಷ ಕ್ಯುಸೆಕ್‌ ಹೊರ ಹರಿವು ಇದೆ. ಎರಡು ದಿನಗಳಿಂದ ಕೃಷ್ಣಾ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗಿದೆ.

ಇದೀಗ ನದಿ ಪ್ರವಾಹವು ಅಪಾಯದ ಮಟ್ಟದಲ್ಲಿ ಹರಿಯುತ್ತಿರು ವುದರಿಂದ ಕುರುವಾ ಕೂಲ ಮತ್ತು ಕುರುವಕೂರ್ದ ಗ್ರಾಮಗಳಿಗೆ ತೆಪ್ಪಗಳನ್ನು ಇಳಿಸುವುದಕ್ಕೆ ನಿರ್ಬಂಧಿಸಲಾಗಿದೆ. ಇದರಿಂದ ನಡುಗಡ್ಡೆ ಜನರ ಸಂಪರ್ಕ ಕಡಿತಗೊಂಡಿದೆ.

ಈ ಹಿಂದೆ ಕೃಷ್ಣಾ ಪ್ರವಾಹ ಮಟ್ಟ 9.5 ಲಕ್ಷ ಕ್ಯುಸೆಕ್‌ವರೆಗೂ ಏರಿಕೆ ಆಗಿದ್ದರೂ ಈ ನಡುಗಡ್ಡೆಗಳು ಜನವಸತಿಗಳು ಮುಳುಗಡೆ ಆಗಿರಲಿಲ್ಲ. ಜನರಿಗೆ ತೊಂದರೆ ಆಗದಂತೆ, ಅಗತ್ಯವಾದ ಆಹಾರ ಪೂರೈಕೆ ಮತ್ತು ಅನಾರೋಗ್ಯ ಸಮಸ್ಯೆ ಕಂಡು ಬಂದಲ್ಲಿ ತುರ್ತು ಚಿಕಿತ್ಸೆಗಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸ್ಥಳದಲ್ಲಿದ್ದ ಅಧಿಕಾರಿಗಳು, ಜಿಲ್ಲಾಧಿಕಾರಿ ಅವರ ಗಮನಕ್ಕೆ ತಂದರು.

ಗುರ್ಜಾಪುರ ಗ್ರಾಮ ಸ್ಥಳಾಂತರ ಕುರಿತು ಸದರಿ ವಿಷಯವನ್ನು ಜನರು, ಅಧಿಕಾರಿಗಳೊಂದಿಗೆ ಹಾಗೂ ಗ್ರಾ.ಪಂ. ವಿಪತ್ತು ನಿರ್ವಹಣಾ ಸಮಿತಿಯ ಸದಸ್ಯರೊಂದಿಗೆ ಚರ್ಚಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಆರ್.ದುರುಗೇಶ್, ಜಿಲ್ಲಾ ಉಪವಿಭಾಗಧಿಕಾರಿ ಸಂತೋಷಕಾಮಗೌಡ, ತಹಶೀಲ್ದಾರ ಡಾ.ಹಂಪಣ್ಣ ಸಜ್ಜನ್, ಕಾಡ್ಲೂರು ಗ್ರಾಮ ಪಂಚಾಯಿತಿ ಪಿಡಿಒ ಚನ್ನಮ್ಮ, ಕಂದಾಯ ನಿರೀಕ್ಷಕ ಭೂಪತಿ, ರಾಮು ಯಾದವ್, ಗ್ರಾಮಲೆಕ್ಕಾಧಿಕಾರಿ ಸುರೇಶ, ನಾರಾಯಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.