ADVERTISEMENT

ಕಾರ್ಮಿಕ ವಿರೋಧಿ ಕಾನೂನು ಜಾರಿಗೆ ಖಂಡನೆ

ಕಾರ್ಮಿಕ ಸಂಘಗಳ ಜಂಟಿ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2019, 13:27 IST
Last Updated 2 ಆಗಸ್ಟ್ 2019, 13:27 IST
ರಾಯಚೂರಿನಲ್ಲಿ ಕಾರ್ಮಿಕ ಸಂಘಗಳ ಜಂಟಿ ಸಮಿತಿ ಸದಸ್ಯರು ಕೇಂದ್ರವು ಕಾರ್ಮಿಕ ವಿರೋಧಿ ಕಾನೂನು ಜಾರಿಗೊಳಿಸುತ್ತಿದೆ ಎಂದು ಆರೋಪಿಸಿ ಶುಕ್ರವಾರ ಪ್ರತಿಭಟನೆ ನಡೆಸಿದರು
ರಾಯಚೂರಿನಲ್ಲಿ ಕಾರ್ಮಿಕ ಸಂಘಗಳ ಜಂಟಿ ಸಮಿತಿ ಸದಸ್ಯರು ಕೇಂದ್ರವು ಕಾರ್ಮಿಕ ವಿರೋಧಿ ಕಾನೂನು ಜಾರಿಗೊಳಿಸುತ್ತಿದೆ ಎಂದು ಆರೋಪಿಸಿ ಶುಕ್ರವಾರ ಪ್ರತಿಭಟನೆ ನಡೆಸಿದರು   

ರಾಯಚೂರು: ಕೇಂದ್ರದ ಬಿಜೆಪಿ ಸರ್ಕಾರ ಕಾರ್ಮಿಕರ ವಿರೋಧಿ ಕಾನೂನು ಜಾರಿಗೊಳಿಸುತ್ತಿದೆ ಎಂದು ಆರೋಪಿಸಿ ಕಾರ್ಮಿಕ ಸಂಘಗಳ ಜಂಟಿ ಸಮಿತಿ(ಜೆಸಿಟಿಯು)ಯ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಕಾರ್ಮಿಕ ಸಂಘಟನೆಗಳ ಪ್ರತಿಭಟನೆಯ ನಡುವೆಯೂ ಕಾರ್ಮಿಕ ವಿರೋಧಿ ಕಾನೂನು ಜಾರಿಗೊಳಿಸಲಾಗಿದೆ. ಜುಲೈ 5 ರಂದು ಬಜೆಟ್ ಭಾಷಣದಲ್ಲಿ ಪ್ರಸ್ತಾಪ ಮಾಡುವ ಮೂಲಕ ನಿಯಮಗಳನ್ನು ಗಾಳಿಗೆ ತೂರಿ ಅಪ್ರಜಾತಾಂತ್ರಿಕವಾಗಿ ರಾಜ್ಯವ್ಯಾಪ್ತಿಯಲ್ಲಿ ಬರುವ ಸಹವರ್ತಿ ಪಟ್ಟಿ ಕಡೆಗಣಿಸಿ ಕೋಡಿಫಿಕೇಶನನ್ನು ಕಾರ್ಮಿಕರ ಮೇಲೆ ಹೇರಲಾಗಿದೆ ಎಂದು ಜಿಲ್ಲಾಧಿಕಾರಿ ಮೂಲಕ ಪ್ರಧಾನಮಂತ್ರಿಗೆ ಸಲ್ಲಿಸಿದ ಮನವಿಯಲ್ಲಿ ಆರೋಪಿಸಿದರು.

ಜುಲೈ 23ರಂದು ವೇತನ ಮಸೂದೆ 2019 ಮತ್ತು ಔದ್ಯೋಗಿಕ ರಕ್ಷಣೆ, ಆರೋಗ್ಯ ಮತ್ತು ಕಾರ್ಯಸ್ಥಳದ ಸ್ಥಿತಿಗತಿ 2019ನ್ನು ಲೋಕಸಭೆಯಲ್ಲಿ ಮಂಡಿಸಲಾಗಿದೆ. ಈ ಎರಡೂ ಮಸೂದೆಗಳಿಗೆ ವಿರೋಧ ಪಕ್ಷಗಳ ಆಕ್ಷೇಪವನ್ನು ಹಾಗೂ ಹಲವು ಕರಾರುಗಳನ್ನು ಕಡೆಗಣಿಸಿ ಕಾರ್ಮಿಕರ ಹಕ್ಕುಗಳನ್ನು ಕಡಿತಗೊಳಿಸಲಾಗಿದೆ. ಕಾರ್ಮಿಕರ ಹಿತಾಸಕ್ತಿ ಕುರಿತ ಕೇಂದ್ರ ಕಾರ್ಮಿಕ ಸಂಘಟನೆಗಳ ಆಕ್ಷೇಪಣೆಯನ್ನು ಪೂರ್ವಾಗ್ರಹ ಪೀಡಿತವಾಗಿ ನೋಡಲಾಗಿದೆ. ಕಂಪೆನಿಯಲ್ಲಿ ಇರಬೇಕಾದ ಕನಿಷ್ಠ ಕಾರ್ಮಿಕರ ಸಂಖ್ಯೆಯನ್ನು ಏರಿಸುವ ಮೂಲಕ ಬಹುತೇಕ ಕಾರ್ಮಿಕರು ಕಾನೂನುಗಳ ಪ್ರಯೋಜನ ಪಡೆಯದಂತೆಮಾಡಲಾಗಿದೆ ಎಂದು ದೂರಿದರು.

ADVERTISEMENT

15ನೇ ಭಾರತೀಯ ಕಾರ್ಮಿಕ ಸಮ್ಮೇಳನದಲ್ಲಿ ಅಂಗೀಕೃತವಾದ ವೇತನ ನಿರ್ಧಾರ ಪ್ರಕ್ರಿಯೆ, ರಾಷ್ಟಕೋಸ್‌ ಕೇಸಿನಲ್ಲಿ ಸುಪ್ರೀಂಕೋರ್ಟ್‌ ಆದೇಶ ಹಾಗೂ 45, 46ನೇ ಭಾರತೀಯ ಕಾರ್ಮಿಮ ಸಮ್ಮೇಳನದಲ್ಲಿ ಅಂಗೀಕಾರವಾದ ಶೇ 25ರಷ್ಟು ಹೆಚ್ಚುವರಿ ವೇತನವನ್ನು ವೇತನ ಮಸೂದೆ ನಿರಾಕರಿಸುತ್ತದೆ. ಟ್ರೇಡ್ ಯೂನಿಯನ್‌ಗಳಿಂದ ಒಬ್ಬ ಪ್ರತಿನಿಧಿಯನ್ನೂ ನೇಮಿಸಿಕೊಳ್ಳದೇ ರಾಷ್ಟ್ರೀಯ ಕನಿಷ್ಠ ವೇತನ ನಿಗದಿಪಡಿಸಲು ರೂಪಿಸಿದ್ದ ತಜ್ಞರ ಸಮಿತಿ ಸಹ ಕಾರ್ಮಿಕ ಸಮ್ಮೇಳನಗಳ ಶಿಫಾರಸುಗಳ ವಿರುದ್ಧವಾಗಿ ಮುಂದುವರೆದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

7ನೇ ವೇತನ ಆಯೋಗ 2016ರ ಜನವರಿ 1ರಿಂದ ಜಾರಿಗೆ ಬರುವಂತೆ ಕನಿಷ್ಠ ವೇತನ ₨18 ಸಾವಿರ ಘೋಷಿಸಿದರೂ, ಕೇಂದ್ರ ಕಾರ್ಮಿಕ ಸಚಿವರು ಜುಲೈ 10ರಂದು ರಾಷ್ಟ್ರೀಯ ಕನಿಷ್ಠ ವೇತನವನ್ನು ₨ 4628 ಘೋಷಿಸುವ ಮೂಲಕ ಕಾರ್ಮಿಕರ ಪರಿಶ್ರಮಕ್ಕೆ ಬೆಲೆ ಇಲ್ಲದಂತೆ ಮಾಡಿದ್ದಾರೆ. ಔದ್ಯೋಗಿಕ ರಕ್ಷಣೆ ಮತ್ತು ಕಾರ್ಯಸ್ಥಳದ ಸ್ಥಿತಿಗಳ ಮಸೂದೆ 13 ಪ್ರತ್ಯೇಕ ಕಾರ್ಮಿಕ ಕಾನೂನುಗಳ ಬದಲಿಗೆ ಜಾರಿಗೆ ತರಲಾಗಿದೆ. ಇದು 10 ಕ್ಕಿಂತ ಹೆಚ್ಚು ಕೆಲಸಗಾರರು ಇರುವ ಉದ್ಯಮಿಗಳಿಗೆ ಮಾತ್ರ ಅನ್ವಯವಾಗುತ್ತದೆ. ಅಸಂಘಟಿತ ವಲಯ, ಹೊರಗುತ್ತಿಗೆ ಮತ್ತು ಗುಡಿ ಕೈಗಾರಿಕೆಗಳಲ್ಲಿ ದುಡಿಯುವ ದೇಶದ ಶೇ 90ಕ್ಕೂ ಹೆಚ್ಚು ಕಾರ್ಮಿಕರು ಸೌಲಭ್ಯಗಳಿಂದ ವಂಚಿತರಾಗುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಸೂದೆಯಿಂದ ಮಾಲೀಕರಿಗೆ ಪ್ರಯೋಜನವಾಗುವ ಕಾನೂನುಗಳನ್ನು ಕಾರ್ಮಿಕರ ಮೇಲೆ ಪ್ರಯೋಗಿಸಿ ಕಾರ್ಮಿಕ ಹಕ್ಕುಗಳನ್ನು ಕಿತ್ತುಕೊಳ್ಳಲು ಅವಕಾಶ ನೀಡಲಾಗಿದೆ. ಆರೋಗ್ಯ ಮತ್ತು ಸುರಕ್ಷತೆಯ ವಿಷಯವನ್ನು ಕಡೆಗಣಿಸಲಾಗಿದ್ದು, ದುಡಿಯುವ ಸ್ಥಳಗಳಲ್ಲಿ ಸಾಮಾನ್ಯವಾದ ಆರೋಗ್ಯ ಸಮಸ್ಯೆಗಳು ಅಥವಾ ಅನಾಹುತಗಳ ನಡೆದಾಗ ಇದರ ಮಾಲೀಕರ ಜವಾಬ್ದಾರಿ ಪ್ರಶ್ನಿಸುವಂತಿಲ್ಲ. ಇದರಿಂದ ಕಾರ್ಮಿಕರ ಜೀವಕ್ಕೆ ರಕ್ಷಣೆ ಇಲ್ಲದಂತಾಗಿದೆ ಎಂದು ಆಪಾದಿಸಿದರು.

ಮೋಟರ್ ವಾಹನ ಮಸೂದೆಯನ್ನು ಸಂಸತ್‌ನಲ್ಲಿ ಮಂಡಿಸಿ, ಶಾಸನವನ್ನಾಗಿ ರೂಪಿಸಲಾಗಿದೆ. ಆದ್ದರಿಂದ ಅಂತರರಾಷ್ಟ್ರೀಯ ಕಾರ್ಮಿಕ ಮಾನದಂಡಗಳನ್ನು ಗಾಳಿಗೆ ತೂರಿರುವ ಈ ನೀತಿಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಜೆಸಿಟಿಯು ಸಂಚಾಲಕ ಡಿ.ಎಸ್.ಶರಣಬಸವ, ಎಐಯುಟಿಯುಸಿ ಸಂಚಾಲಕ ಎನ್.ಎಸ್.ವೀರೇಶ, ಸಿಐಟಿಯು ಅಧ್ಯಕ್ಷೆ ಎಚ್.ಪದ್ಮಾ, ಎಂ.ರವಿ, ಶರಣೇಗೌಡ, ಬಸವರಾಜ ಗಾರಲದಿನ್ನಿ, ಪ್ರವೀಣರೆಡ್ಡಿ, ಮಹೇಶ ಚೀಕಲಪರ್ವಿ, ಶರಣಪ್ಪ, ವೆಂಕೋಬ, ಗೋಕರಮ್ಮ, ರಾಮಣ್ಣ, ಗುರುರಾಜ ದೇಸಾಯಿ, ಪೀರಸಾಬ್, ಆನಂದ, ಆದಿಲಕ್ಷ್ಮೀ, ಚನ್ನಬಸವ ಜಾನೇಕಲ್, ರಾಜಶೇಖರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.