ADVERTISEMENT

ಶ್ರೀ ನಂದಿಯಲ್ಲಿ ವರ್ಷವಿಡೀ ಖವ್ವಾ ಲಸ್ಸಿ ಲಭ್ಯ

ನಾಗರಾಜ ಚಿನಗುಂಡಿ
Published 4 ಅಕ್ಟೋಬರ್ 2018, 12:21 IST
Last Updated 4 ಅಕ್ಟೋಬರ್ 2018, 12:21 IST
ಶ್ರೀ ನಂದಿ ಖವ್ವಾ ಲಸ್ಸಿ ಕೇಂದ್ರ
ಶ್ರೀ ನಂದಿ ಖವ್ವಾ ಲಸ್ಸಿ ಕೇಂದ್ರ   

ರಾಯಚೂರು: ನಗರದ ಸೂಪರ್‌ ಮಾರ್ಕೆಟ್‌ನಿಂದ ಜೈನ್‌ ಮಂದಿರ ಮಾರ್ಗದಲ್ಲಿರುವ ಶ್ರೀ ನಂದಿ ಖವ್ವಾ ಲಸ್ಸಿ ಕೇಂದ್ರವು ವರ್ಷವಿಡೀ ಜನದಟ್ಟಣೆಯಿಂದ ಗಮನ ಸೆಳೆಯುತ್ತದೆ.

ಬಿಸಿಲಿನಿಂದ ಬಸವಳಿದ ಜನರು, ಮಾರ್ಕೆಟ್‌ನಲ್ಲಿ ಸುತ್ತಾಡಿ ದಣಿದ ಗ್ರಾಮೀಣರು ಹಾಗೂ ಮತ್ತೆ ಮತ್ತೆ ಸ್ವಾದ ಸವಿಯುವ ಆಸೆಯಿಂದ ಬಂದವರು... ಹೀಗೆ ಶ್ರೀ ನಂದಿಯಲ್ಲಿ ಜನಜಂಗುಳಿಗೆ ಕೊನೆ ಇರುವುದಿಲ್ಲ. ಒಳಗೆ ಹೋಗುವವರ ಮುಖದಲ್ಲಿ ಲಸ್ಸಿ ಸವಿಯುವ ಅಧಮ್ಯ ಆಸೆ ಎದ್ದು ಕಾಣುತ್ತದೆ. ಹೊರ ಬರುವವರೆಲ್ಲ ಬಾಯಿ ಚಪ್ಪರಿಸುತ್ತಾ ಮುಖ ಅರಳಿಸುತ್ತಾರೆ.

ಸ್ವಾದಭರಿತ ಲಸ್ಸಿ ಹೇಗೆ ತಯಾರಿಸುತ್ತೀರಿ ಎನ್ನುವ ಪ್ರಶ್ನೆಗೆ ಶ್ರೀ ನಂದಿ ಕೇಂದ್ರದ ಮಾಲೀಕ ಎಸ್‌. ಚಂದ್ರಶೇಖರ್‌ ಅವರು ಉತ್ತರಿಸಿ, ‘ಸರ್ಕಾರವು ಸ್ವಚ್ಛ ಭಾರತ ಅಭಿಯಾನದ ಬಗ್ಗೆ ಪ್ರಚಾರ ಮಾಡುತ್ತಿದೆ. ನಾವು ಮೊದಲಿನಿಂದಲೂ ಲಸ್ಸಿ ತಯಾರಿಸುವ ಪ್ರತಿ ಹಂತದಲ್ಲೂ ಶುದ್ಧತೆ ಹಾಗೂ ಶುಚಿತ್ವಕ್ಕೆ ಮಹತ್ವ ಕೊಡುತ್ತಾ ಬಂದಿದ್ದೇವೆ. ಈ ಕಾರಣದಿಂದ ಸ್ವಾದ ಹಾಗೂ ಗುಣಮಟ್ಟದ ಲಸ್ಸಿ ಕೊಡುವುದಕ್ಕೆ ಸಾಧ್ಯವಾಗಿದೆ. ಜನರು ಸದಾಕಾಲ ನಮ್ಮ ಕೇಂದ್ರಕ್ಕೆ ಬರುತ್ತಾರೆ’ ಎಂದರು.

ADVERTISEMENT

ಲಸ್ಸಿ ತಯಾರಿಸಲು ಪ್ರತಿನಿತ್ಯವೂ ಎಮ್ಮೆ ಸಾಕಾಣಿಕೆ ಮಾಡಿದ ಜನರ ಮನೆಗಳಿಗೇ ಹೋಗಿ ಶುದ್ಧ ಹಾಲು ಸಂಗ್ರಹಿಸುತ್ತಾರೆ. ಹಾಲನ್ನು ಹದವಾಗಿ ಕಾಯಿಸಿ, ಆರಿಸಿ ಅದಕ್ಕೆ ಹೆಪ್ಪು ಹಾಕಿ ಮೊಸರು ತಯಾರಿಸುತ್ತಾರೆ. ಸಕ್ಕರೆಯನ್ನು ಪುಡಿ ಮಾಡಿಟ್ಟುಕೊಂಡು ಮೊಸರಿಗೆ ಬೆರೆಸುತ್ತಾರೆ. ಅದಕ್ಕೆ ಮಲಾಯಿ ಹಾಗೂ ಕವ್ವಾ ಮಿಶ್ರಣ ಲಸ್ಸಿ ಮಾಡುತ್ತಾರೆ. ಈ ಎಲ್ಲ ಪ್ರಕ್ರಿಯೆಯನ್ನು ಚಂದ್ರಶೇಖರ್‌ ಅವರು ತಮ್ಮ ಮನೆಯಲ್ಲಿ ಗಮನವಿಟ್ಟು ಮಾಡುತ್ತಾ ಬಂದಿದ್ದಾರೆ. 20 ವರ್ಷಗಳಿಂದ ಗುಣಮಟ್ಟದಲ್ಲಿ ರಾಜಿ ಮಾಡಿಕೊಂಡಿಲ್ಲ. ಈ ಕಾರಣಕ್ಕಾಗಿ ಶ್ರೀ ನಂದಿ ಲಸ್ಸಿ ತುಂಬಾ ರುಚಿಕಟ್ಟಾಗಿರುತ್ತದೆ. ಜನರು ಶ್ರೀನಂದಿ ಕೇಂದ್ರದಲ್ಲಿ ಸರದಿ ನಿಂತು ಲಸ್ಸಿ ಸವಿಯುತ್ತಾರೆ.

ಬೇಸಿಗೆಯಲ್ಲಿ ಮೂರು ಪಟ್ಟು!

ಸಾಮಾನ್ಯ ದಿನಗಳಲ್ಲಿ ಪ್ರತಿದಿನ 50 ರಿಂದ 60 ಲೀಟರ್‌ ಹಾಲಿನಿಂದ ತಯಾರಿಸಿದ ಖವ್ವಾ ಲಸ್ಸಿ ಮಾರಾಟವಾಗುತ್ತದೆ. ಬೇಸಿಗೆಯಲ್ಲಿ ಗ್ರಾಹಕರ ದಟ್ಟಣೆ ಹೆಚ್ಚಾಗುವುದರಿಂದ ವ್ಯಾಪಾರವು ಮೂರು ಪಟ್ಟು ಏರುತ್ತದೆ. ಬೇಡಿಕೆಯಂತೆ ಲಸ್ಸಿ ಪೂರೈಸಲು ಕನಿಷ್ಠ 150 ಲೀಟರ್‌ ಅಥವಾ ಅದಕ್ಕಿಂತ ಹೆಚ್ಚು ಹಾಲು ಬೇಕಾಗುತ್ತದೆ. ಒಂದು ಗ್ಲಾಸ್‌ ಖವ್ವಾ ಲಸ್ಸಿ ದರ ₨20.

ನಾಲ್ಕು ಬಗೆಯ ಲಸ್ಸಿ

ಬೇಸಿಗೆ ಹೊರತಾದ ದಿನಗಳಲ್ಲಿ ಶ್ರೀ ನಂದಿ ಕೇಂದ್ರದಲ್ಲಿ ಸಾಧಾರಣ ಖವ್ವಾ ಲಸ್ಸಿ ಹಾಗೂ ಐಸ್‌ಕ್ರೀಮ್‌ ಲಸ್ಸಿ ತಯಾರಿಸಿ ಗ್ರಾಹಕರಿಗೆ ನೀಡಲಾಗುತ್ತದೆ. ಬೇಸಿಗೆಯಲ್ಲಿ ಒಣಹಣ್ಣು (ಗೋಡಂಬಿ, ಒಣದ್ರಾಕ್ಷಿ, ಬಾದಾಮಿ) ಗಳ ಲಸ್ಸಿ, ಮಲಾಯಿ (ಬೆಣ್ಣೆ) ಲಸ್ಸಿಯನ್ನು ತಯಾರಿಸುವುದು ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.