ADVERTISEMENT

‘ಅಭಿವೃದ್ಧಿ ಮರೆತ ಕಾಂಗ್ರೆಸ್‌ನಿಂದ ಬರೀ ರಾಜಕಾರಣ’

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೀರನಗೌಡ ಲೆಕ್ಕಿಹಾಳ ಆರೋಪ

​ಪ್ರಜಾವಾಣಿ ವಾರ್ತೆ
Published 5 ಜೂನ್ 2025, 14:11 IST
Last Updated 5 ಜೂನ್ 2025, 14:11 IST
ವೀರನಗೌಡ ಲೆಕ್ಕಿಹಾಳ
ವೀರನಗೌಡ ಲೆಕ್ಕಿಹಾಳ    

ರಾಯಚೂರು: ‘ಕಾಂಗ್ರೆಸ್‌ನ ಜನವಿರೋಧಿ ಆಡಳಿತದಲ್ಲಿ ಅಗತ್ಯವಸ್ತುಗಳ ಬೆಲೆ ಗಗನಕ್ಕೇರಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೀರನಗೌಡ ಲೆಕ್ಕಿಹಾಳ ಆರೋಪಿಸಿದರು.

‘ರಾಜ್ಯ ಕಾಂಗ್ರೆಸ್ ಸರ್ಕಾರ ಕೇವಲ ಪೊಳ್ಳು ಭಾಷಣ ಮತ್ತು ಆರೋಪ-ಪ್ರತ್ಯಾರೋಪಗಳಲ್ಲಿ ಕಾಲಹರಣ ಮಾಡುತ್ತಿದೆ. ಜನರ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ. ಅಭಿವೃದ್ಧಿ ಮರೆತು, ಕೇವಲ ರಾಜಕೀಯ ಮಾಡುತ್ತಿದೆ. ಕಾಂಗ್ರೆಸ್ ಸರ್ಕಾರದ ಈ ವರ್ತನೆಯೇ ಅದರ ನಿಜವಾದ ಬಣ್ಣವನ್ನು ಬಯಲು ಮಾಡಿದೆ’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಟೀಕಿಸಿದರು. 

‘ಪ್ರತಿ ಜಿಲ್ಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ತುಘಲಕ್ ದರ್ಬಾರ್‌ ನಡೆಸುತ್ತಿದ್ದಾರೆ. ಕರ್ನಾಟಕದಲ್ಲಿ ಪೊಲೀಸ್ ಠಾಣೆಗಳು ಕಾಂಗ್ರೆಸ್ ಕಚೇರಿಗಳಾಗಿ ಮಾರ್ಪಟ್ಟಿವೆ. ಪೊಲೀಸರು ಕಾಂಗ್ರೆಸ್ ಪಕ್ಷದ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ. ಸರ್ಕಾರದ ವಿರುದ್ಧ ಧ್ವನಿ ಎತ್ತುವವರ ಮೇಲೆ ಎಫ್‌ಐಆರ್‌ಗಳ ಅಸ್ತ್ರ ಪ್ರಯೋಗಿಸಲಾಗುತ್ತಿದೆ. ಛಲವಾದಿ ನಾರಾಯಣಸ್ವಾಮಿ, ಸಿ.ಟಿ.ರವಿ, ಹರೀಶ್ ಪೂಂಜಾ ಸೇರಿದಂತೆ ವಿರೋಧ ಪಕ್ಷಗಳ ನಾಯಕರ ಮೇಲೆ ದಾಖಲಿಸಿದ ಪ್ರಕರಣಗಳೇ ಇದಕ್ಕೆ ಜೀವಂತ ಸಾಕ್ಷಿ’ ಎಂದರು.  

ADVERTISEMENT

‘ರಾಜ್ಯ ಕಾನೂನು ಸುವ್ಯವಸ್ಥೆ ಹಳ್ಳ ಹಿಡಿದು ಜನ ಭಯದಲ್ಲಿ ಬದುಕುತ್ತಿರುವಾಗ, ಅಪರಾಧ ನಡೆದಾಗ ‘ನನಗೇನೂ ಗೊತ್ತಿಲ್ಲ’ ಎಂದು  ರಾಜ್ಯದ ಗೃಹ ಸಚಿವರು ಜಾರಿಕೊಳ್ಳುತ್ತಾರೆ. ಇಂತಹ ಬೇಜವಾಬ್ದಾರಿ ಸಚಿವರಿಂದ ರಾಜ್ಯಕ್ಕೆ ರಕ್ಷಣೆ ಸಿಗುತ್ತದೆಂಬ ಯಾವ ಭರವಸೆಯೂ ಉಳಿದಿಲ್ಲ’ ಎಂದು ಟೀಕಿಸಿದರು. 

ಪತ್ರಿಕಾಗೋಷ್ಠಿಯಲ್ಲಿ ಜಿ. ಶಂಕರರೆಡ್ಡಿ, ರವೀಂದ್ರ ಜಾಲ್ದರ, ಮಲ್ಲಿಕಾರ್ಜುನ ಹಳ್ಕೂರು, ಜೆ.ಪಿ.ರೆಡ್ಡಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.