ADVERTISEMENT

ರಾಯಚೂರು| ಶಾಂತಿ, ಕಾನೂನು ಸುವ್ಯವಸ್ಥೆ ಬಲಗೊಳಿಸಲು ಕ್ರಮ: ಎಸ್‌ಪಿ

​ಪ್ರಜಾವಾಣಿ ವಾರ್ತೆ
Published 14 ಜನವರಿ 2026, 6:30 IST
Last Updated 14 ಜನವರಿ 2026, 6:30 IST
ಅರುಣಾಂಗ್ಷು ಗಿರಿ
ಅರುಣಾಂಗ್ಷು ಗಿರಿ   

ರಾಯಚೂರು: ‘ಪೊಲೀಸ್‌ ಸಿಬ್ಬಂದಿಯಲ್ಲಿ ಶಿಸ್ತು ಹೆಚ್ಚಿಸುವುದು. ಮಾದಕ ವಸ್ತುಗಳ ಮಾರಾಟಕ್ಕೆ ಸಂಪೂರ್ಣ ಕಡಿವಾಣ ಹಾಕುವುದು ಹಾಗೂ ಶಾಂತಿ, ಕಾನೂನು ಸುವ್ಯವಸ್ಥೆ ಬಲಗೊಳಿಸುವುದು ನಮ್ಮ ಆದ್ಯತೆಯಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ  ಅರುಣಾಂಗ್ಷು ಗಿರಿ ಹೇಳಿದರು.

‘ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಿಗೆ ಭೇಟಿಕೊಟ್ಟು ಪರಿಶೀಲಿಸಿದ್ದೇನೆ. ಕೆಲವು ಪೊಲೀಸ್‌ ಠಾಣೆಗಳಲ್ಲಿ ಶಿಸ್ತಿನ ಕೊರತೆ ಕಂಡು ಬಂದಿದ್ದು, ಅದನ್ನು ಸಹಿಸಿಕೊಳ್ಳಲಾಗದು. ನಿತ್ಯ ಕವಾಯತು ಮಾಡಬೇಕು. ಪಾರದರ್ಶಕತೆಯನ್ನೂ ಕಾಯ್ದುಕೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ’ ಎಂದು ನಗರದಲ್ಲಿ ಮಂಗಳವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

‘ಠಾಣೆ ವ್ಯಾಪ್ತಿಯ ಅಪರಾಧ ಪ್ರಕರಣಗಳು, ಶಿಕ್ಷೆ ಮತ್ತು ರೂಢಿಗತ ಅಪರಾಧಗಳ ಮಾಹಿತಿ ಪಡೆಯಲಾಗಿದೆ. ಅವರ ಮೊಬೈಲ್‌ಗಳನ್ನು ಪರಿಶೀಲಿಸಿ ಮನಸ್ಥಿತಿಯನ್ನು ಅರಿತುಕೊಳ್ಳಲು ಪ್ರಯತ್ನಿಸಲಾಗಿದೆ. ಕ್ರಿಮಿನಲ್‌ಗಳ ವಾಟ್ಸ್‌ಆ್ಯಪ್‌ಗಳ ಮೇಲೆ ನಿಗಾ ಇಡಲಾಗಿದೆ. ನಗರ ವ್ಯಾಪ್ತಿಯಲ್ಲಿ 8 ಸಾವಿರ ಸಿಸಿಟಿವಿ ಕ್ಯಾಮೆರಾಗಳು ಇವೆ. ಮಾಲ್‌, ವಾಣಿಜ್ಯ ಮಳಿಗೆಗಳ ಮಾಲೀಕರಿಗೆ ರಸ್ತೆಗೆ ಮುಖ ಮಾಡಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವಂತೆ ಸೂಚನೆ ನೀಡಲಾಗಿದೆ’ ಎಂದು ಹೇಳಿದರು.

ADVERTISEMENT

‘ಜಿಲ್ಲೆಯಲ್ಲಿ 1300 ಮಂಜೂರಾತಿ ಸಿಬ್ಬಂದಿಗಳಲ್ಲಿ 1100 ಜನರು ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿಬ್ಬಂದಿ ಕೊರತೆ ಮಧ್ಯೆಯೂ ಉತ್ತಮ ಸೇವೆ ಕೊಡುವಂತೆ ತಿಳಿವಳಿಕೆ ನೀಡಲಾಗಿದೆ. ವಿಶೇಷ ಜಾತ್ರೆ, ಜಯಂತಿ ಹಾಗೂ ಹಬ್ಬದ ಸಂದರ್ಭದಗಳಲ್ಲಿ ಶಾಂತಿಪಾಲನಾ ಸಭೆಗಳನ್ನು ನಡೆಸುವಂತೆ ಪೊಲೀಸ್‌ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಇದರಿಂದ ಅಪರಾಧ ಪ್ರಕರಣಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ’ ಎಂದು ತಿಳಿಸಿದರು.

‘ಸಿಎಚ್ ಪೌಡ‌ರ್ ಅಕ್ರಮ ಸಾಗಣೆ, ಮಟ್ಕಾ, ಇಸ್ಪೀಟ್ ಜೂಜಾಟಗಳ ಸೇರಿದಂತೆ ನಿಗಾವಹಿಸಲು ಕ್ರಮ ವಹಿಸಲಾಗುತ್ತದೆ. ಮಾದಕ ದ್ರವ್ಯ ಸಾಗಣೆ, ಶಾಂತಿ, ಕಾನೂನು ಸುವ್ಯವಸ್ಥೆಗೆ ಸಾರ್ವಜನಿಕರ ಸಹಕಾರವೂ ಅಗತ್ಯ’ ಎಂದು ಹೇಳಿದರು.

‘ರಾಯಚೂರಿನ ಕೇಂದ್ರ ಬಸ್‌ನಿಲ್ದಾಣ, ಸಿಂಧನೂರು ಹಾಗೂ ಲಿಂಗಸುಗೂರು ಬಸ್‌ ನಿಲ್ದಾಣಗಳಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚುತ್ತಿರುವ ದೂರುಗಳು ಬರುತ್ತಿವೆ. ಪೊಲೀಸ್‌ ಗಸ್ತು ಹೆಚ್ಚಿಸಲಾಗುವುದು. ನಗರದಲ್ಲಿ ಜನನಿಬಿಬಿಡ ಪ್ರದೇಶದಲ್ಲಿ ಸಂಚಾರ ಒತ್ತಡ ಕಡಿಮೆ ಮಾಡಲು ಮಹಾನಗರಪಾಲಿಕೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಒಂದು ದಿನ ಕಾರ್ಯಾಚರಣೆ ನಡೆಸಿ ಸರಿಪಡಿಸಲು ಪ್ರಯತ್ನಿಸಲಾಗುವುದು’ ಎಂದು ತಿಳಿಸಿದರು.