ADVERTISEMENT

‘ಸಮಾಜ ಸೇವೆ ತೋರಿಕೆ ಆಗದಿರಲಿ’

ಗೆಳೆಯರ ಬಳಗ ಉದ್ಘಾಟನೆ, ಸಾಧಕರಿಗೆ ಸನ್ಮಾನ, ಕಾನೂನು ಅರಿವು-ನೆರವು ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2021, 11:59 IST
Last Updated 9 ಅಕ್ಟೋಬರ್ 2021, 11:59 IST
ಸಿಂಧನೂರಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ಸಿಂಧನೂರು ಗೆಳೆಯರ ಬಳಗ ಸಂಘ ಉದ್ಘಾಟನೆ ಹಾಗೂ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು ಪ್ರಧಾನ ಸಿವಿಲ್ ನ್ಯಾಯಾಧೀಶ ಶ್ರೇಯಾಂಸ ದೊಡ್ಡಮನಿ, ಎರಡನೇ ಅಪರ ಸಿವಿಲ್ ನ್ಯಾಯಾಧೀಶ ಎಂ.ಆನಂದಪ್ಪ ಹಾಗೂ ಪ್ರಮುಖರು ಇದ್ದರು
ಸಿಂಧನೂರಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ಸಿಂಧನೂರು ಗೆಳೆಯರ ಬಳಗ ಸಂಘ ಉದ್ಘಾಟನೆ ಹಾಗೂ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು ಪ್ರಧಾನ ಸಿವಿಲ್ ನ್ಯಾಯಾಧೀಶ ಶ್ರೇಯಾಂಸ ದೊಡ್ಡಮನಿ, ಎರಡನೇ ಅಪರ ಸಿವಿಲ್ ನ್ಯಾಯಾಧೀಶ ಎಂ.ಆನಂದಪ್ಪ ಹಾಗೂ ಪ್ರಮುಖರು ಇದ್ದರು   

ಸಿಂಧನೂರು: ‘ಸಮಾಜ ಸೇವೆ ಕೇವಲ ತೋರಿಕೆಗೆ ಮಾತ್ರ ಸೀಮಿತವಾಗಬಾರದು. ಬಡವರಿಗೆ ಸರ್ಕಾರದ ಸೌಲಭ್ಯಗಳು ದೊರೆಯುವ ನಿಟ್ಟಿನಲ್ಲಿ ಪ‍್ರಾಮಾಣಿಕ ಸೇವೆ ಇರಬೇಕು‘ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಶ್ರೇಯಾಂಸ ದೊಡ್ಡಮನಿ ಅಭಿಪ್ರಾಯಪಟ್ಟರು.

ಸ್ಥಳೀಯ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ಸಿಂಧನೂರು ಗೆಳೆಯರ ಬಳಗ ಸಂಘ ಉದ್ಘಾಟನೆ, ಸಾಧಕರಿಗೆ ಸನ್ಮಾನ ಹಾಗೂ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ನಾವು ನನಗಾಗಿ ಬದುಕುವುದಕ್ಕಿಂತ ನಮಗಾಗಿ ಬದುಕಿದಾಗ ಸಮಾಜ ನಮ್ಮನ್ನು ಸದಾ ನೆನೆಯುತ್ತದೆ. ಈ ನಿಟ್ಟಿನಲ್ಲಿ ಸಾಮಾಜಿಕ ತುಡಿತ ಇರುವುದು ಅಗತ್ಯ. ಸಹಾಯದ ಅವಶ್ಯಕತೆ ಇರುವವರಿಗೆ ನೆರವಾಗುವುದೇ ಸಾಮಾಜಿಕ ಕಾರ್ಯಗಳ ಮೂಲ ಉದ್ದೇಶ. ಬಡತನ, ಶಿಕ್ಷಣ, ವಸತಿ, ನಿರುದ್ಯೋಗದಂತಹ ಸಮಸ್ಯೆಗಳ ವಿರುದ್ಧ ಕಾನೂನಿನ ಚೌಕಟ್ಟಿನಲ್ಲಿ ಹೋರಾಡುವ ಸ್ವಭಾವ ಬೆಳೆಸಿಕೊಳ್ಳಬೇಕು‘ ಎಂದರು.

ADVERTISEMENT

ಒಂದನೇ ಅಪರ ಸಿವಿಲ್ ನ್ಯಾಯಾಧೀಶ ಕೋಟೆಪ್ಪ ಕಾಂಬ್ಳೆ ಮಾತನಾಡಿ, ‘ಸಮಾಜದಲ್ಲಿರುವ ದೇವದಾಸಿ, ಬಾಲ್ಯವಿವಾಹದಂತಹ ಅನಿಷ್ಟ ಪದ್ಧತಿಗಳ ನಿರ್ಮೂಲನೆಗೆ ಸಂಘ ಮುಂದಾಗಬೇಕು‘ ಎಂದು ಹೇಳಿದರು.

ಎರಡನೇ ಅಪರ ಸಿವಿಲ್ ನ್ಯಾಯಾಧೀಶ ಆನಂದಪ್ಪ ಎಂ, ವಕೀಲರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಭೀಮನಗೌಡ, ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಅಶೋಕ ಬೆನ್ನೂರು, ಡಾ.ಚನ್ನನಗೌಡ ಪಾಟೀಲ್, ಪತ್ರಕರ್ತ ಪ್ರಹ್ಲಾದಗುಡಿ ವಕೀಲ ಮಾತನಾಡಿದರು.

ಕಾನೂನು ಸಲಹೆಗಾರ ಜೆ.ರಾಯಪ್ಪ ವಕೀಲ ಪ್ರಾಸ್ತಾವಿಕವಾಗಿ ಮಾತನಾಡಿದರು.

ಗೆಳೆಯರ ಬಳಗದ ಅಧ್ಯಕ್ಷ ಸೈಯ್ಯದ್ ಬಂದೇನವಾಜ್ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಪಂಚಾಯಿತಿ ವ್ಯವಸ್ಥಾಪಕಿ ಸರಳಾದೇವಿ ಇದ್ದರು. ಶಿಕ್ಷಕ ವೀರೇಶ ಗೋನವಾರ ನಿರೂಪಿಸಿದರು. ರಂಗಮ್ಮ ಗಲಗ ವಂದಿಸಿದರು.

ಸನ್ಮಾನ: ನಗರ ಆರೋಗ್ಯ ಕೇಂದ್ರದ ಡಾ.ವಿಜಯಶ್ರೀ, ನೇತ್ರತಜ್ಞ ಡಾ.ಚೆನ್ನನಗೌಡ ಪಾಟೀಲ್, ಪತ್ರಕರ್ತ ಪ್ರಹ್ಲಾದಗುಡಿ, ದುರುಗೇಶ, ನೋಬೆಲ್ ಹೆಲ್ತ್ ಕೇರ್ ಸೆಂಟರ್ ಡಾ.ವಸೀಮ್ ಅಹ್ಮದ್, ಕಿರಿಯ ಆರೋಗ್ಯ ಸಹಾಯಕಿಯರಾದ ಶಮೀನಾಬೇಗಂ, ತ್ರೇಜಾ, ನಿವೃತ್ತ ಶಿಕ್ಷಕ ಶಾಂತರಾಜ್, ನೀರಾವರಿ ಇಲಾಖೆ ನಿವೃತ್ತ ಅಧಿಕಾರಿ ವಿಠಲ್‍ರಾವ್, ಅಕ್ಷಯ ಆಹಾರ ಜೋಳಿಗೆ ಸೇವಾ ಟ್ರಸ್ಟ್ ಅಧ್ಯಕ್ಷ ಅಶೋಕ ನಲ್ಲಾ, ಚಿತ್ರಕಲಾವಿದ ಉಮೇಶ ಪತ್ತಾರ, ಶಿಕ್ಷಕ ಬಸವರಾಜ ಜಾಡರ್, ರಂಗಮ್ಮ ಗಲಗ, ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಕವನ ಎಚ್, ಅರುಣಕುಮಾರ, ಬಿ.ನಾಗರಾಜ ಅವರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.