ರಾಯಚೂರು: ತಾಲ್ಲೂಕಿನ ಐತಿಹಾಸಿಕ ಮಲಿಯಾಬಾದ್ ಕೋಟೆ ಪರಿಸರದಲ್ಲಿ ನಾಯಿ ಹಾಗೂ ಕೋಳಿ ಸೇರಿಕೊಂಡು ಐದೂವರೆ ವರ್ಷದ ಬಲಿಷ್ಠ ಚಿರತೆಯೊಂದನ್ನು ಸೋಮವಾರ ಬೋನಿಗೆ ಕೆಡವಿವೆ.
ರಾಯಚೂರು ತಾಲ್ಲೂಕಿನ ಡಿ.ರಾಮಪುರ ಗ್ರಾಮದ ಪರಮೇಶ್ವರ ಬೆಟ್ಟದಲ್ಲಿ ಗಂಡು ಚಿರತೆಯನ್ನು ಬೋನಿಗೆ ಕೆಡವಿದ್ದ ನಾಯಿ ಹಾಗೂ ಕೋಳಿ ಜೋಡಿ, ಕೇವಲ ಎರಡು ವಾರಗಳ ಅಂತರದಲ್ಲೇ ಇನ್ನೊಂದು ಗಂಡು ಚಿರತೆಯನ್ನು ಬೋನಿಗೆ ಬೀಳಿಸಿವೆ. ನಾಯಿ, ಕೋಳಿ ಎರಡೂ ಸುರಕ್ಷಿತವಾಗಿವೆ.
ಎರಡು ತಿಂಗಳಿಂದ ರಾಯಚೂರು ತಾಲ್ಲೂಕಿನಲ್ಲಿ ಎರಡು ಚಿರತೆಗಳು ಓಡಾಡುತ್ತಲೇ ಇದ್ದವು. ಗ್ರಾಮದ ಪರಿಸರದಲ್ಲಿನ ನಾಯಿ, ನವಿಲು ಹಾಗೂ ಕುರಿಗಳನ್ನು ತಿಂದು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದ್ದವು. ಅರಣ್ಯ ಇಲಾಖೆಯ ಅಧಿಕಾರಿಗಳು ಟ್ರ್ಯಾಪ್ ಕ್ಯಾಮೆರಾಗಳನ್ನು ಅಳವಡಿಸಿದ್ದರೂ ಬೋನಿಗೆ ಬೀಳುತ್ತಿರಲಿಲ್ಲ. ಅಷ್ಟೇ ಅಲ್ಲದೇ ಒಂದೇ ಚಿರತೆ ಇದೆಯೇ ಅಥವಾ ಎರಡು ಚಿರತೆಗಳಿವೆಯೇ? ಎನ್ನುವುದು ಸಹ ಯಕ್ಷ ಪ್ರಶ್ನೆಯಾಗಿತ್ತು.
ಅರಣ್ಯ ಇಲಾಖೆಯ ಸಿಬ್ಬಂದಿ ರಾಯಚೂರು ತಾಲ್ಲೂಕಿನ ಡಿ.ರಾಮಪುರ ಗ್ರಾಮದ ಪರಮೇಶ್ವರ ಬೆಟ್ಟದಲ್ಲಿ ಬೋನು ಇಟ್ಟು ಅದರೊಳಗೆ ನಾಯಿ ಮತ್ತು ಕೋಳಿ ಇಟ್ಟು ಚಿರತೆ ಆಕರ್ಷಿಸಲು ತಂತ್ರ ರೂಪಿಸಿದ್ದರು. ಬೋನಿನ ಒಳಗಿಟ್ಟ ಕೋಳಿ ಮೇಲೆ ನಾಯಿ ದಾಳಿ ಮಾಡದಂತೆ ಚಿಕ್ಕ ಪಂಜರ ಮಾಡಿ ಕೋಳಿಗೂ ಭದ್ರತೆ ಒದಗಿಸಿದ್ದರು. ಮೇ 20ರಂದು ಕಾಣಿಸಿಕೊಂಡಿದ್ದ ಚಿರತೆ ಕೋಳಿ ಮಾಂಸದಾಸೆಗೆ ಜುಲೈ 13ರಂದು ಬೋನಿಗೆ ಬಿದ್ದಿತ್ತು.
ಇದಾದ ನಂತರವೂ ಮಲಿಯಾಬಾದ್ ಗೋಶಾಲೆ ಆವರಣ ಹಾಗೂ ಬೆಟ್ಟದಲ್ಲಿ ಚಿರತೆ ಓಡಾಡುತ್ತಿರುವುದು ದನಗಾಹಿಗಳಿಂದ ಮಾಹಿತಿ ದೊರೆಯಿತು. ಈ ಮೂಲಕ ಇನ್ನೊಂದು ಚಿರತೆ ಮಲಿಯಾಬಾದ್‌ನಲ್ಲಿ ಇರುವುದು ದೃಢಪಟ್ಟಿತ್ತು. ಚಿರತೆ ಒಂದು ಕರುವನ್ನು ಕೊಂದು ಹಾಕಿದ ನಂತರ ಅರಣ್ಯ ಇಲಾಖೆ ಸಿಬ್ಬಂದಿ ಗೋಶಾಲಾ ಪರಿಸರದಲ್ಲಿ ಒಂದು ಬೋನ್ ಇಟ್ಟು ನಾಲ್ಕು ಕಡೆ ಟ್ರ್ಯಾಪ್ ಕ್ಯಾಮೆರಾಗಳನ್ನು ಅಳವಡಿಸಿ ಅದರ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದರು.
ಡಿ.ರಾಮಪುರದಲ್ಲಿ ಬಳಸಿದ ತಂತ್ರವನ್ನೇ ಇಲ್ಲಿ ಅನುಸರಿಸಿದ್ದರಿಂದ ಜುಲೈ 21ರೊಂದು ಮೂರು ವರ್ಷದ ಗಂಡು ಚಿರತೆ ಸಹ ಕೋಳಿ ಆಸೆಗೆ ಬೋನಿಗೆ ಬಿದ್ದಿದೆ.
ರಾಯಚೂರು ವಲಯ ಅರಣ್ಯ ಅಧಿಕಾರಿಗಳಾದ ರಾಜೇಶ ನಾಯಕ ಇವರ ನೇತೃತ್ವದಲ್ಲಿ ಸಿಬ್ಬಂದಿ ಉಪ ವಲಯ ಅರಣ್ಯ ಅಧಿಕಾರಿ ಮೌನೇಶ, ಗಸ್ತು ಅರಣ್ಯ ಪಾಲಕರಾದ ಬಸವರಾಜ್, ಯಲ್ಲಪ್ಪ , ಭೀಮೇಶ, ವೀರೇಶ, ಅರಣ್ಯ ವೀಕ್ಷಕ ಕನಕಪ್ಪ, ವಾಹನ ಚಾಲಕ ವಿಜಯ, ಮೌನೇಶ್ ಆಚಾರಿ ಮತ್ತು ದಿನಗೂಲಿ ನೌಕರ, ನರಸಪ್ಪ, ರಮೇಶ, ಮಂಜು, ಶಿವು ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದರು.
ವಿಜಯನಗರ ಜಿಲ್ಲೆಯ ಕಮಲಾಪುರದಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನಕ್ಕೆ ಮೂರು ಚಿರತೆಗಳನ್ನು ಕಳುಹಿಸಿಕೊಡಲಾಗಿದೆರಾಜೇಶ ನಾಯಕ ರಾಯಚೂರು ವಲಯ ಅರಣ್ಯ ಅಧಿಕಾರಿ
ಮೊದಲ ಚಿರತೆಗೆ ಹನಿಟ್ರ್ಯಾಪ್
2024ರ ಸೆಪ್ಟೆಂಬರ್‌ನಲ್ಲಿ ಕಾಣಿಸಿಕೊಂಡಿದ್ದ ಗಂಡು ಚಿರತೆಗೆ ಹಸು ಕರುಗಳ ಮಾಂಸವೇ ರುಚಿಸಿತ್ತು. ಬೆಟ್ಟಕ್ಕೆ ನಿತ್ಯ ಮೇಯಲು ಬರುತ್ತಿದ್ದ ಕುರಿ ಮೇಕೆ ಮೇಲೆ ಚಿರತೆ ದಾಳಿ ಮಾಡಿರಲಿಲ್ಲ. ಆದರೆ ಒಟ್ಟು ಮೂರು ಹಸುಗಳನ್ನು ಕೊಂದು ಹಾಕಿತ್ತು. ಅರಣ್ಯ ಇಲಾಖೆ ಅಂತಹ ಮಾಂಸವನ್ನೇ ಬೋನಿನಲ್ಲಿ ಇರಿಸಿದ್ದರೂ ಬೋನಿಗೆ ಬಿದ್ದಿರಲಿಲ್ಲ. ಇಂತಹ ಯಾವ ತಂತ್ರವೂ ಫಲಿಸಿರಲಿಲ್ಲ. ಹೀಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಹನಿಟ್ರ್ಯಾಪ್ ವಿಧಾನ ಅನುಸರಿಸಿದ್ದರು. ಕಮಲಾಪುರದ ಅಟಲ್ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನದಲ್ಲಿನ ಹೆಣ್ಣು ಚಿರತೆಯ ಮಲ ಮೂತ್ರ ತರಿಸಲಾಯಿತು. ದಿನ ಬಿಟ್ಟು ದಿನ ಈ ಮಲ ಮೂತ್ರವನ್ನು ಬೋನಿನ ಸುತ್ತಮುತ್ತ ಸಿಂಪಡಿಸಲಾಯಿತು. ಬೋನಿನೊಳಗೆ ಹೆಣ್ಣು ಚಿರತೆ ಇದೆ ಎಂಬ ಭಾಸವಾಗುವಂತೆ ಮಾಡಲಾಯಿತು. ಮೂರು ದಿನ ಬೋನಿನ ಬಳಿ ಸುಳಿದಾಡಿದ ಗಂಡು ಚಿರತೆ ಕೊನೆಗೂ ಹೆಣ್ಣು ಚಿರತೆಯ ಮೋಹಕ್ಕೆ ಒಳಗಾಗಿ ಫೆಬ್ರುವರಿ 16ರಂದು ಬೋನಿನೊಳಗೆ ನುಗ್ಗಿತು. ಕ್ಷಣಾರ್ಧದಲ್ಲಿ ಬೋನಿನ ಬಾಗಿಲು ಮುಚ್ಚಿ ಚಿರತೆಗೆ ಮತ್ತೆ ಹೊರಗೆ ಬರಲಾಗಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.