ADVERTISEMENT

ಶಂಕರಾಚಾರ್ಯರ ಗ್ರಂಥಗಳ ಅಧ್ಯಯನದಿಂದ ಬದಲಾವಣೆ

ಶಂಕರಾಚಾರ್ಯರ ಜಯಂತಿ: ಧಾರವಾಡದ ವಾಚಸ್ಪತಿ ಶಾಸ್ತ್ರಿ ಜೋಷಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 9 ಮೇ 2019, 14:22 IST
Last Updated 9 ಮೇ 2019, 14:22 IST
ರಾಯಚೂರಿನಲ್ಲಿ ಗುರುವಾರ ಆಯೋಜಿಸಿದ್ದ ಆದಿಗುರು ಶಂಕರಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಧಾರವಾಡದ ವಾಚಸ್ಪತಿ ಶಾಸ್ತ್ರಿ ಜೋಷಿ ಮಾತನಾಡಿದರು
ರಾಯಚೂರಿನಲ್ಲಿ ಗುರುವಾರ ಆಯೋಜಿಸಿದ್ದ ಆದಿಗುರು ಶಂಕರಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಧಾರವಾಡದ ವಾಚಸ್ಪತಿ ಶಾಸ್ತ್ರಿ ಜೋಷಿ ಮಾತನಾಡಿದರು   

ರಾಯಚೂರು: ಆದಿಗುರು ಶಂಕರಾಚಾರ್ಯರ ಗ್ರಂಥಗಳ ಅಧ್ಯಯನದಿಂದ ಜೀವನದಲ್ಲಿ ಬದಲಾವಣೆ ಆಗಲಿದೆ ಎಂದು ಧಾರವಾಡದ ವಾಚಸ್ಪತಿ ಶಾಸ್ತ್ರಿ ಜೋಷಿ ಹೇಳಿದರು.

ನಗರದ ಪಂಡಿತ್‌ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಗುರುವಾರ ಹಮ್ಮಿಕೊಂಡಿದ್ದ ಆದಿಗುರು ಶಂಕರಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

‘ಜೀವನದಲ್ಲಿ ಯಾವುದೂ ಶಾಶ್ವತವಲ್ಲ ಎಂಬುದು ಶಂಕರಾಚಾರ್ಯರ ಸಿದ್ಧಾಂತವಾಗಿದ್ದು, ನಾನು ಎಂಬ ಅಹಂಕಾರ ಬಿಡಬೇಕು. ಎಲ್ಲಿ ಅರ್ಥವಿದೆಯೋ ಅಲ್ಲಿ ಅನರ್ಥವೂ ಇದೆ. ಆದ್ದರಿಂದ ಎಲ್ಲರೂ ಪ್ರಾಮಾಣಿಕತೆಯಿಂದ ಕೆಲಸ ಮಾಡಿ, ಇಂತಹ ಮಹನೀಯರ ಶ್ಲೋಕ ಹಾಗೂ ಗ್ರಂಥಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದರು.

ADVERTISEMENT

ಜೀವನದಲ್ಲಿ ಅಪಕಾರವನ್ನು ಬಯಸದೇ ಉಪಕಾರ ಮಾಡುವವನು ಸಜ್ಜನನಾಗಿದ್ದು, ಸಜ್ಜನರ ಸಹವಾಸದಿಂದ ಸದ್ಗುಣಿಯಾಗಲು ಸಾಧ್ಯ. ಆಸೆಯೆಂಬ ಮಾಯೆಗೆ ಸಿಲುಕದೇ ಮನುಷ್ಯರಾಗ ಬಾಳಬೇಕು ಎಂದು ತಿಳಿಸಿದರು.

ಯಾವುದೇ ಜಯಂತಿ ಆಚರಣೆಗೆ ಮಾತ್ರ ಸೀಮಿತವಾಗಬಾರದು. ಮಹನೀಯರ ಒಳ್ಳೆಯ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅಂದಾಗ ಜಯಂತಿ ಆಚರಣೆಗೆ ಅರ್ಥ ಬರಲಿದೆ. ಪ್ರತಿ ದಿನವೂ ಪ್ರಾಣಾಯಾಮ ಮಾಡಿ ದೇಹವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು.

ತಹಶೀಲ್ದಾರ ಹಂಪಣ್ಣ, ಶಂಕರಾಚಾರ್ಯ ಸಮಾಜದ ಕಾರ್ಯಕರ್ತರಾದ ವೆಂಕಟಕೃಷ್ಣ, ನಾರಾಯಣ ಶಾಸ್ತ್ರಿ, ಜಿ.ವಿ.ಕುಲಕರ್ಣಿ, ಮುರಳಿಧರ್ ಭಟ್, ವಸಂತರಾವ್, ಶ್ರೀಪಾದ ದೇಸಾಯಿ, ದಂಡಪ್ಪ ಬಿರಾದರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.