ADVERTISEMENT

ಲಿಂಗಸುಗೂರು | ಮನೆಗಳಿಗೆ ನುಗ್ಗಿದ ಚರಂಡಿ ನೀರು

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2025, 6:31 IST
Last Updated 29 ಆಗಸ್ಟ್ 2025, 6:31 IST
ಲಿಂಗಸುಗೂರು ತಾಲ್ಲೂಕಿನ ಭೂಪುರ(ರಾಂಪುರ) ಗ್ರಾಮದಲ್ಲಿ ಮನೆಯೊಳಗೆ ನುಗ್ಗಿದ ಚರಂಡಿ ನೀರು
ಲಿಂಗಸುಗೂರು ತಾಲ್ಲೂಕಿನ ಭೂಪುರ(ರಾಂಪುರ) ಗ್ರಾಮದಲ್ಲಿ ಮನೆಯೊಳಗೆ ನುಗ್ಗಿದ ಚರಂಡಿ ನೀರು   

ಲಿಂಗಸುಗೂರು: ತಾಲ್ಲೂಕಿನ ಭೂಪುರ(ರಾಂಪುರ) ಗ್ರಾಮದಲ್ಲಿ ಬುಧವಾರ ರಾತ್ರಿ ಸುರಿದ ಮಳೆಯಿಂದ ಚರಂಡಿ ನೀರು ಮನೆಗಳಿಗೆ ನುಗ್ಗಿ ಧಾನ್ಯಗಳು ಹಾಳಾಗಿವೆ.

ಚರಂಡಿಯನ್ನು ಹಳ್ಳಕ್ಕೆ ಹರಿಬೀಡಲಾಗಿತ್ತು. ಆದರೆ ಕೊಳಚೆ ನೀರು ತಮ್ಮ ಹೊಲದಲ್ಲಿ ನಿಲ್ಲುತ್ತದೆ ಎಂದು ಮಾಲೀಕರೊಬ್ಬರು ಚರಂಡಿ ನೀರು ಹರಿಯದಂತೆ ಮಣ್ಣಿನ ಒಡ್ಡು ನಿರ್ಮಿಸಿದ್ದರಿಂದ ಬುಧವಾರ ಅವಾಂತರವಾಗಿದೆ. ಭಾರಿ ಮಳೆಯಿಂದ ಚರಂಡಿ ಭರ್ತಿಯಾಗಿ ನೀರು ಮುಂದೆ ಹರಿದು ಹೋಗದೆ ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ನುಗ್ಗಿದ್ದರಿಂದ ನಿವಾಸಿಗಳು ರಾತ್ರಿ ಪರದಾಡಿದರು.

ಅಮರೇಶ ಚಲುವಾದಿ, ಬಾಳಮ್ಮ ಚಲುವಾದಿ ಅವರ ಮನೆಯಲ್ಲಿ ಅಪಾರ ಹಾನಿಯಾಗಿದೆ. ಒಟ್ಟು 10 ಮನೆಗಳಿಗೆ ನೀರು ನುಗ್ಗಿದ್ದರಿಂದ  ರಾತ್ರಿಪೂರ್ತಿ ನೀರು ಹೊರಹಾಕುವುದೇ ದೊಡ್ಡ ಸವಾಲಾಗಿತ್ತು.

ADVERTISEMENT

‘ಈ ಬಗ್ಗೆ ಪಿಡಿಒ ಗಮನಕ್ಕೆ ತಂದರೂ ಮುಂಚೆ ಸಮಸ್ಯೆ ಪರಿಹರಿಸುವಲ್ಲಿ ನಿರ್ಲಕ್ಷ್ಯವಹಿಸಿದ್ದರಿಂದ ನಾವು ಸಮಸ್ಯೆ ಎದುರಿಸುವಂತಾಗಿದೆ. ಇದರಿಂದಾಗಿ ಹಾನಿಯಾಗಿರುವುದಕ್ಕೆ ಸೂಕ್ತ ಪರಿಹಾರ ನೀಡಬೇಕು’ ಎಂದು ಗುರುಪ್ಪ ಚಲುವಾದಿ, ಅಮರೇಶ ಚಲುವಾದಿ ಆಗ್ರಹಿಸಿದ್ದಾರೆ.

ಅಧಿಕಾರಿ ಭೇಟಿ: ಸುದ್ದಿ ತಿಳಿದು ಭೂಪುರ ಗ್ರಾಮಕ್ಕೆ ಬೇಟಿ ನೀಡಿದ ತಾ.ಪಂ ಇಒ ಉಮೇಶ, ಚರಂಡಿ ನೀರಿಗೆ ಅಡ್ಡಲಾಗಿ ಹಾಕಿರುವ ಒಡ್ಡನ್ನು ತೆರವುಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ಕ್ರಮಕೈಗೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.