ಲಿಂಗಸುಗೂರು: ಪಟ್ಟಣದಲ್ಲಿ ಬ್ರಿಟಿಷರ ಆಡಳಿತದ ಅವಧಿಯಲ್ಲಿ ನಿರ್ಮಿಸಿದ ಅನೇಕ ಕಟ್ಟಡಗಳು ನಿರ್ವಹಣೆ ಕೊರತೆಯಿಂದ ಶಿಥಿಲಗೊಂಡು ಅವನತಿಯತ್ತ ಸಾಗುತ್ತಿವೆ.
1728ರಿಂದ 1948 ವರೆಗೆ ನಿಜಾಮರೊಂದಿಗೆ ಸಂಧಾನ ಮಾಡಿಕೊಂಡು ಬ್ರಿಟಿಷರು ಈ ಭಾಗದಲ್ಲಿ ಆಡಳಿತ ನಡೆಸಿದ್ದರು. ಪಟ್ಟಣವನ್ನು ಮಿಲಟರಿ ಏರಿಯವನ್ನಾಗಿ ಮಾಡಿಕೊಂಡು ಕ್ಯಾಪ್ಟನ್ ವಿಂಡೇಮ್ ಬ್ರಿಟಿಷ್ ಸೈನ್ಯಾಧಿಕಾರಿಯಾಗಿ ಸೇನೆ ಮುನ್ನೆಡಸುತ್ತಿದ್ದರು ಎನ್ನಲಾಗಿದೆ. ವಿಭಿನ್ನ ವಾಸ್ತುಶಿಲ್ಪ, ಕಲೆ ಒಳಗೊಂಡಿರುವ ಅದ್ಭುತ ಕಟ್ಟಡಗಳನ್ನು ನಿರ್ಮಿಸಿದ್ದಾರೆ. ಬ್ರಿಟಿಷರು ತಮ್ಮ ಅಧಿಕಾರಿಗಳಾಗಿ ಕಚೇರಿ, ವಸತಿ ಗೃಹ, ಪ್ರವಾಸಿ ಮಂದಿರ, ಅಧಿಕಾರಿಗಳ ಕ್ಲಬ್‌ಗಳನ್ನು ಇಂದೂ ಕಾಣಬಹುದು.
ಪಟ್ಟಣದಲ್ಲಿ ಬ್ರಿಟಿಷರ ಕಾಲದಲ್ಲಿ ಈಗಿನ ಉಪವಿಭಾಗಾಧಿಕಾರಿ ಕಚೇರಿ, ಡಿವೈಎಸ್ಪಿ, ಬಿಇಒ, ಸರ್ಕಾರಿ ಪ್ರಾಥಮಿಕ ಶಾಲೆ, ಹಳೆಯ ಜೈಲು, ಮದ್ದಿನ ಮನೆ, ಪ್ರವಾಸಿಮಂದಿರ, ಕೆರೆ ದಂಡೆ ಮೇಲೆ ಅಧಿಕಾರಿಗಳಿಗಾಗಿ ಮನೋರಂಜನೆ ಕ್ಲಬ್, ಪೊಲೀಸ್ ಸ್ಟೇಶನ್ ಸೇರಿ ಅನೇಕ ಕಟ್ಟಡಗಳ ನಿರ್ಮಾಣ ಮಾಡಲಾಗಿತ್ತು.
ನಿರ್ವಹಣೆ ಕೊರತೆಯಿಂದಾಗಿ ಡಿವೈಎಸ್ಪಿ ಕಚೇರಿ ಕಟ್ಟಡ ತೆರವುಗೊಳಿಸಿ ಹೊಸ ಕಟ್ಟಡ ನಿರ್ಮಾಣ ಮಾಡಲಾಗಿದೆ. ಸಾರಿಗೆ ಘಟಕದ ಎದುರು ನಿರ್ಮಿಸಿದ್ದ ಬೃಹತ್ ಕಟ್ಟಡ ಇಂದು ನೆಲಸಮಗೊಳಿಸಿ ನ್ಯಾಯಾಲಯದ ಸಂಕೀರ್ಣ ನಿರ್ಮಾಣ ಮಾಡಲಾಗಿದೆ.
ಪ್ರಾಥಮಿಕ ಶಾಲೆಯ ಹಳೆಯ ಕಟ್ಟಡ ತೆರವುಗೊಳಿಸಲಾಗಿದೆ. ಅಧಿಕಾರಿಗಳಿಗಾಗಿ ನಿರ್ಮಾಣ ಮಾಡಿದ ಮನೋರಂಜನೆ ಕ್ಲಬ್ ಹಳೆಯ ಕಟ್ಟಡ ತೆರವುಗೊಳಿಸಿ ಹೊಸ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ಈಗ ಉಳಿದಿರುವುದು ಉಪವಿಭಾಗಾಧಿಕಾರಿ ಕಚೇರಿ ಕಟ್ಟಡ ಅದು ಒಂದು ಭಾಗ ಕುಸಿದು ಬಿದ್ದಿದೆ. ಬ್ರಿಟಿಷರ ಆಡಳಿತದಲ್ಲಿನ ಪ್ರವಾಸಿಮಂದಿರ ಕಟ್ಟಡ ಶಿಥಿಲಗೊಂಡಿದ್ದರಿಂದ ಅದನ್ನು ತೆರವುಗೊಳಿಸಿ ಹೊಸ ಸರ್ಕಿಟ್ ಹೌಸ್ ನಿರ್ಮಾಣಕ್ಕೆ ₹4 ಕೋಟಿ ಅನುದಾನ ಬಿಡುಗಡೆಯಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಭೂಮಿಪೂಜೆ ಮಾಡಿದ್ದಾರೆ. ಕಾಮಗಾರಿ ಇನ್ನೂ ಆರಂಭವಾಗಿಲ್ಲ
‘ಬ್ರಿಟಿಷರ ಕಾಲದಲ್ಲಿ ನಿರ್ಮಾಣ ಮಾಡಿದ ಈ ಕಟ್ಟಡಗಳನ್ನು ಪ್ರಾಚ್ಯವಸ್ತು ಇಲಾಖೆ ವ್ಯಾಪ್ತಿಗೆ ಬರುತ್ತವೆ ಎನ್ನಲಾಗಿದೆ. ಯಾವುದೇ ಕಟ್ಟಡದ ಬಳಿ ಪ್ರಾಚ್ಯವಸ್ತು ಇಲಾಖೆಯ ನಾಮಫಲಕ ಇಲ್ಲ. ಪ್ರಾಚ್ಯವಸ್ತು ಇಲಾಖೆಗೆ ಸೇರಿದ್ದರೆ ಡಿವೈಎಸ್ಪಿ, ಸಾರಿಗೆ ಘಟಕದ ಎದುರು ಇದ್ದ ಬ್ರಿಟಿಷರ ಕಟ್ಟಡಗಳನ್ನು ನೆಲಸಮಗೊಳಿಸಿ ಹೊಸ ಕಟ್ಟಡ ನಿರ್ಮಾಣ ಮಾಡಲು ಅನುಮತಿ ನೀಡಿದ್ದು ಏಕೆ’ ಎಂದು ಹೋರಾಟಗಾರ ಶಿವರಾಜ ನಾಯಕ ಪ್ರಶ್ನಿಸಿದ್ದಾರೆ.
‘ಪಟ್ಟಣದಲ್ಲಿ ವಿಶಾಲವಾದ ಜಾಗೆಯಲ್ಲಿ ಬೃಹತ್ ಕಟ್ಟಡಗಳನ್ನು ಬ್ರಿಟಿಷರು ನಿರ್ಮಾಣ ಮಾಡಿದ್ದಾರೆ ಅವುಗಳನ್ನು ಸಂರಕ್ಷಣೆ ಮಾಡಬೇಕಾಗಿವುದು ಸರ್ಕಾರದ ಕರ್ತವ್ಯವಾಗಿದೆ. ಆದರೆ ಸಂರಕ್ಷಣೆ ಕೆಲಸವಾಗುತ್ತಿಲ್ಲ, ಇದರಿಂದ ಕಟ್ಟಡಗಳು ಪಾಳು ಬಿದ್ದು ಅವನತಿ ಅಂಚಿನಲ್ಲಿವೆ. ಅನೈತಿಕ ತಾಣವಾಗಿವೆ. ಬ್ರಿಟಿಷರ ಕಟ್ಟಡಗಳನ್ನು ಸಂರಕ್ಷಣೆಗೆ ಜಿಲ್ಲಾಡಳಿತ ಮುಂದಾಗಬೇಕು’ ಎಂದು ಉಪನ್ಯಾಸಕ ಖಾಜಾಮಹಿನುದ್ದೀನ್ ಆನಾಹೊಸೂರು ಒತ್ತಾಯಿಸಿದ್ದಾರೆ.
ಪ್ರವಾಸಿಮಂದಿರ ಹಳೆಯ ಕಟ್ಟಡ ಪುರಾತನ ಕಟ್ಟಡ. ಅದು ಶಿಥಿಲಗೊಂಡಿದ್ದರಿಂದ ನೆಲಸಮಗೊಳಿಸಿ ಹೊಸದಾಗಿ ಸರ್ಕಿಟ್ ಹೌಸ್ ನಿರ್ಮಾಣ ಮಾಡಲು ಅನುಮತಿ ಕೋರಿ ನಮ್ಮ ಇಲಾಖೆಯ ಮೇಲಧಿಕಾರಿಗಳು ಪ್ರಾಚ್ಯವಸ್ತು ಇಲಾಖೆಗೆ ಪತ್ರ ಬರೆದಿದ್ದಾರೆ ಪ್ರಕಾಶ ಎಇಇ ಪಿಡಬ್ಲೂಡಿ ಲಿಂಗಸುಗೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.