ADVERTISEMENT

ಅಧಿಕಾರಿಗಳ ತಾತ್ಸಾರ ಮನೋಭಾವ ಸಲ್ಲ

ಲಿಂಗಸುಗೂರು ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸದಸ್ಯರ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2020, 2:30 IST
Last Updated 25 ಸೆಪ್ಟೆಂಬರ್ 2020, 2:30 IST
ಲಿಂಗಸುಗೂರಲ್ಲಿ ನಡೆದ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷೆ ಶ್ವೇತಾ ವೆಂಕನಗೌಡ ಪಾಟೀಲ ಮಾತನಾಡಿದರು
ಲಿಂಗಸುಗೂರಲ್ಲಿ ನಡೆದ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷೆ ಶ್ವೇತಾ ವೆಂಕನಗೌಡ ಪಾಟೀಲ ಮಾತನಾಡಿದರು   

ಲಿಂಗಸುಗೂರು: ತಾಲ್ಲೂಕು ಪಂಚಾಯಿತಿ ಸದಸ್ಯರಾಗಿ ಐದು ವರ್ಷಗಳ ಅವಧಿ ಮುಗಿಸುತ್ತ ಬಂದಿದ್ದೇವೆ. ಜನರಿಗೆ ನೀಡಿದ ಭರವಸೆಗಳು ಭರವಸೆಗಳಾಗಿ ಉಳಿದಿವೆ. ಅಧಿಕಾರಿಗಳು ಜನರ ಸಮಸ್ಯೆಗಳನ್ನು ಪರಿಹರಿಸುತ್ತಿಲ್ಲ ಎಂದು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.

ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆ ಆರಂಭಗೊಳ್ಳುತ್ತಿದ್ದಂತೆ ಕರ್ನಾಟಕ ಭೂ ಸೇನಾ ನಿಗಮದ ಪ್ರಗತಿಪರಿಶೀಲನೆ ನಡೆಯಿತು. ನಿಗಮದ ಅಧಿಕಾರಿಯೊಬ್ಬರು, ಬಹುತೇಕ ಕಾಮಗಾರಿಗಳು ಪ್ರಗತಿಯಲ್ಲಿವೆ. ಹಳೆಯ ಕಾಮಗಾರಿಗಳ ಮಾಹಿತಿ ಲಭ್ಯವಿಲ್ಲ ಎಂಬ ಉತ್ತರ ನೀಡಿದರು. ಇದಕ್ಕೆ ಕೆಲ ಸದಸ್ಯರು ಈ ಉತ್ತರ ನಿರೀಕ್ಷಿತವಾಗಿತ್ತು ಎಂದು ಹೇಳುತ್ತಿದ್ದಂತೆ ಅಧ್ಯಕ್ಷೆ ಶ್ವೇತಾ ವೆಂಕನಗೌಡ ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.

ಬಹುತೇಕ ಏಜೆನ್ಸಿಗಳು ಶಾಲಾ ಕಾಲೇಜುಗಳ ಕೊಠಡಿ, ಕಾಂಪೌಂಡ್‌ ತಡೆಗೋಡೆ, ಸಾಂಸ್ಕೃತಿಕ ಭವನ, ರಸ್ತೆ, ಚರಂಡಿ ಸೇರಿದಂತೆ ಇತರೆ ಕಾಮಗಾರಿಗಳು ಪೂರ್ಣಗೊಂಡಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ADVERTISEMENT

ತಾಲ್ಲೂಕು ಪಂಚಾಯಿತಿ ಆವರಣದಲ್ಲಿಯೆ ಐದು ವರ್ಷಗಳಿಂದ ಕಾಮಗಾರಿಯೊಂದು ನನೆಗಿದಿಗೆ ಬಿದ್ದಿದೆ. ಈಗಲಾದರೂ ಅದನ್ನು ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು.

ಕೊರೊನಾ ಸೋಂಕಿಗೆ ಸಂಬಂಧಿಸಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಅಮರೇಶ ಮಾಹಿತಿ ನೀಡುತ್ತಿದ್ದಂತೆ ಸದಸ್ಯೆ ಬಸಮ್ಮ ಯಾದವ ಮಾತನಾಡಿ, ಕೊರೊನಾ ಇತ್ತೀಚೆಗೆ ವ್ಯವಹಾರಿಕ ಸಂಬಂಧವಾಗುತ್ತಿದೆ ಎಂಬ ಆರೋಪಗಳಿವೆ. ಕೋವಿಡ್ ದೃಢ ಎಂದು ಕರೆದೊಯ್ದು ನಾಲ್ಕು ದಿನಗಳಲ್ಲಿ ನೆಗಟಿವ್ ಅಂತ ಹೇಳುತ್ತಾರೆ. ಕೊರೊನಾ ಕೇರ್ ಸೆಂಟರ್‌ಗಳಲ್ಲಿ ಸೌಲಭ್ಯಗಳ ಕೊರತೆ ಇದೆ. ಬಹುತೇಕ ರೋಗಿಗಳ ವಿಡಿಯೊ ಮೂಲಕ ಸಾರ್ವಜನಿಕ ಗಮನ ಸೆಳೆಯುತ್ತಿದ್ದಾರೆ ಎಂದು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಹೊಂಬಣ್ಣ ರಾಠೋಡ ಅವರು ಇಲಾಖೆ ಪಗ್ರತಿ ಸಾಧನೆ ಮಾಹಿತಿ ನೀಡುವಾಗ ಮಲ್ಲಾಪುರ ಶಾಲಾ ಕಟ್ಟಡ ಏನಾಯ್ತು ಎಂದು ಸದಸ್ಯೆ ಬಸಮ್ಮ ಧ್ವನಿ ಎತ್ತುತ್ತಿದ್ದಂತೆ ಅಧ್ಯಕ್ಷೆ ಶ್ವೇತಾ ವೆಂಕನಗೌಡ ಪಾಟೀಲ, ಸದಸ್ಯ ಲಿಂಗರಾಜ ಮಾತನಾಡಿ, ಅವಧಿ ಮುಗಿದರೂ ಕಾಮಗಾರಿ ಯಾವ ಹಂತದಲ್ಲಿದೆ ಎಂಬುದು ತಿಳಿಯದಾಗಿದೆ ಎಂದರು.

ಕೈಗಾರಿಕೆ ಇಲಾಖೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಬಂದಿರುವ ಯೋಜನೆಗಳೆಷ್ಟು, ಯಾವ ಹಂತದಲ್ಲಿವೆ. ಅವುಗಳಿಗೆ ಸಂಬಂಧಿಸಿ ಕ್ರಿಯಾಯೋಜನೆ, ಅನುಪಾಲನ ವರದಿಗಳನ್ನು ಸಭೆಯ ನಂತರ ಅಧ್ಯಕ್ಷರಿಗೆ ವಹಿಸಲು ಸದಸ್ಯರು ಸಮ್ಮತಿ ಸೂಚಿಸಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಶ್ವೇತಾ ವೆಂಕನಗೌಡ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಯಲ್ಲಮ್ಮ ಗದ್ದೆಪ್ಪ ಗೌಂಡಿ, ಸ್ಥಾಯಿ ಸಮಿತಿ ಅಧ್ಯಕ್ಷ ಬಸವರಾಜ ಪೂಜಾರಿ, ಕಾರ್ಯನಿರ್ವಾಹಕ ಅಧಿಕಾರಿ ಬಾಬು ರಾಠೋಡ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.