ADVERTISEMENT

ಲಿಂಗಸುಗೂರು | ವಾಂತಿ ಭೇದಿ: ಬೆಚ್ಚಿಬಿದ್ದ ಆಡಳಿತ

ಯರಗುಂಟಿ: ರಾತ್ರೋರಾತ್ರಿ ಗ್ರಾಮಕ್ಕೆ ಭೇಟಿ ನೀಡಿದ ಅಧಿಕಾರಿಗಳು

ಪ್ರಜಾವಾಣಿ ವಿಶೇಷ
Published 3 ಜೂನ್ 2023, 14:09 IST
Last Updated 3 ಜೂನ್ 2023, 14:09 IST
ಲಿಂಗಸುಗೂರು ತಾಲ್ಲೂಕು ಯರಗುಂಟಿಗೆ ಶನಿವಾರ ಭೇಟಿ ನೀಡಿದ್ದ ಜಿ.ಪಂ ಸಿಇಒ ಶಶಿಧರ್ ಕುರೇರ ಸಾರ್ವಜನಿಕರಿಂದ ಮಾಹಿತಿ ಪಡೆದರು
ಲಿಂಗಸುಗೂರು ತಾಲ್ಲೂಕು ಯರಗುಂಟಿಗೆ ಶನಿವಾರ ಭೇಟಿ ನೀಡಿದ್ದ ಜಿ.ಪಂ ಸಿಇಒ ಶಶಿಧರ್ ಕುರೇರ ಸಾರ್ವಜನಿಕರಿಂದ ಮಾಹಿತಿ ಪಡೆದರು   

ಬಿ.ಎ ನಂದಿಕೋಲಮಠ

ಲಿಂಗಸುಗೂರು: ಯರಗುಂಟಿಯಲ್ಲಿ ಶುಕ್ರವಾರ 10 ವಾಂತಿ ಬೇಧಿ ಪ್ರಕರಣ ವರದಿ ಆಗಿದ್ದವು. ರಾತ್ರಿ 52 ಪ್ರಕರಣಗಳು ಪತ್ತೆಯಾದ ಘಟನೆಗೆ ಬೆಚ್ಚಿಬಿದ್ದ ಅಧಿಕಾರಿಗಳ ತಂಡ ರಾತ್ರೋ ರಾತ್ರಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

ನಿರಂತರ ವಾಂತಿ ಭೇದಿ ಪ್ರಕರಣಗಳು ವರದಿ ಆಗುತ್ತಿರುವ ಮಾಹಿತಿ ಲಭ್ಯವಾಗುತ್ತಿದ್ದಂತೆ ಜಿಲ್ಲಾ ಆರೋಗ್ಯಾಧಿಕಾರಿ ಸುರೇಂದ್ರ ಬಾಬು, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಅಮರೇಶ ಮಾಕಾಪುರ, ಸಾರ್ವಜನಿಕ ಆಸ್ಪತ್ರೆ ಮುಖ್ಯ ವೈದ್ಯ ಡಾ.ರುದ್ರಗೌಡ ಪಾಟೀಲ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಅಮರೇಶ ಹೆಚ್ಚುವರಿ ಸಿಬ್ಬಂದಿ ಸಮೇತ ಯರಗುಂಟಿ ಗ್ರಾಮಕ್ಕೆ ಭೇಟಿ ನೀಡಿ ಸೂಕ್ತ ಚಿಕಿತ್ಸೆ ಕೊಡಿಸಿದರು.

ADVERTISEMENT

ಶುಕ್ರವಾರ ಬೆಳಿಗ್ಗೆಯಿಂದ ಸಂಜೆವರೆಗೆ ಕೇವಲ 10 ಪ್ರಕರಣಗಳು ವರದಿ ಆಗಿದ್ದವು. ರಾತ್ರಿ ವೇಳೆ ಒಟ್ಟು 52 ಪ್ರಕರಣಗಳು ವರದಿ ಆಗುತ್ತಿರುವುದು ಕಂಡ ಆರೋಗ್ಯ ಇಲಾಖೆ ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಜಿಲ್ಲಾ ಆರೋಗ್ಯಾಧಿಕಾರಿಗಳು ಚಿಕಿತ್ಸೆ ನೀಡಲು ಮುಂದಾಗಿದ್ದು ಕಂಡು ಬಂತು.

ಯರಗುಂಟಿ ಗ್ರಾಮದ ಪ್ರಾಥಮಿಕ ಶಾಲಾ ಕೊಠಡಿಗಳಲ್ಲಿ ತಾತ್ಕಾಲಿಕ ಚಿಕಿತ್ಸೆ ನೀಡಲಾಗುತ್ತಿದೆ. ಹೆಚ್ಚುವರಿ ರೋಗಿಗಳನ್ನು ಈಚನಾಳ, ಲಿಂಗಸುಗೂರು ಸರ್ಕಾರಿ ಸೇರಿದಂತೆ ಖಾಸಗಿ ಆಸ್ಪತ್ರೆಗಳಲ್ಲಿ ಶಿಫಾರಸ್ಸು ಮಾಡಲಾಗಿದೆ. ಮಧ್ಯಾಹ್ನದಿಂದ ಸ್ವಲ್ಪ ಮಟ್ಟಿನ ನಿಯಂತ್ರಣ ಕಾಣಿಸಿಕೊಂಡಿದೆ. ಯಾವುದಕ್ಕೂ ಆರೋಗ್ಯ ಮತ್ತು ಪಂಚಾಯತ್‍ ರಾಜ್‍ ಇಲಾಖೆ ಸಿಬ್ಬಂದಿ ಗ್ರಾಮದಲ್ಲಿ ಸ್ವಚ್ಛತೆ, ಚಿಕಿತ್ಸೆ ಜಾಗೃತಿ ಸೇರಿದಂತೆ ಮುಂಜಾಗ್ರತ ಕ್ರಮಗಳ ಕುರಿತು ಅಭಿಯಾನ ನಡೆಸಿದ್ದಾರೆ.

ಒಂದೇ ದಿನದಲ್ಲಿ 62 ಪ್ರಕರಣಗಳು ವರದಿ ಆಗಿರುವ ಮಾಹಿತಿ ತಿಳಿಯುತ್ತಿದ್ದಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಯರಗುಂಟಿ ಗ್ರಾಮಕ್ಕೆ ಭೇಟಿ ನೀಡಿ ಸಾರ್ವಜನಿಕರೊಂದಿಗೆ ಸುದೀರ್ಘ ಚರ್ಚೆ ನಡೆಸಿದರು. ಕುಡಿಯುವ ನೀರು, ವಾರದಲ್ಲಿ ಗ್ರಾಮದಲ್ಲಿ ನಡೆದಿರುವ ಧಾರ್ಮಿಕ, ಕೌಟುಂಬಿಕ ಆಚರಣೆಗಳು, ಸಾಮೂಹಿಕ ಊಟ, ಉಪಚಾರ ಕುರಿತು ಮಾಹಿತಿ ಸಂಗ್ರಹಿಸಿದರು.

ಆರ್ಥಿಕವಾಗಿ ಬಲಿಷ್ಠರಾದವರು ಖಾಸಗಿ ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೂಲಿ ಮಾಡಿ ಬದುಕುವ ನಮಗೆ ಹಣಕಾಸಿನ ತೊಂದರೆಯಿಂದ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದೇವೆ. ಇಲ್ಲಿ ರಕ್ತ ಸೇರಿದಂತೆ ವಿವಿಧ ಪರೀಕ್ಷೆಗಳಿಗೆ ಹೊರಗಡೆ ಬರೆದುಕೊಡುತ್ತಿದ್ದಾರೆ. ಕೆಲ ಔಷಧಿ ಕೂಡ ಹೊರಗಡೆ ಬರೆದುಕೊಡುತ್ತಿದ್ದು ಆರ್ಥಿಕ ಸಂಕಷ್ಟದಲ್ಲಿನ ರೋಗಿಗಳ ಹಿಂಬಾಲಕರು ಪರದಾಡುವಂತಾಗಿದೆ ಎಂಬುದು ಸಾಮೂಹಿಕ ಆರೋಪ.

ಸಿಇಒ ಶಶಿಧರ ಕುರೇರ ಮಾತನಾಡಿ, ‘ಕೊಳವೆಬಾವಿ ನೀರು ಕುಡಿಯಲು ಯೋಗ್ಯವಾಗಿದೆ ಎಂದು ವರದಿ ಬಂದಿದೆ. ವಾಂತಿ ಭೇದಿ ಪ್ರಕರಣ ಸ್ಪೋಟಗೊಂಡಿದ್ದು ನೋಡಿದರೆ ವಿಷಯುಕ್ತ ಆಹಾರ ಸೇವನೆ ಶಂಕೆ ಮೂಡಿಸಿದೆ. ಈ ಕುರಿತು ಮದುವೆ ಅಥವಾ ಧಾರ್ಮಿಕ ಕಾರ್ಯಕ್ರಮ ನಡೆಸಿದವರ ಮನೆಯ ಆಹಾರ ಪದಾರ್ಥಗಳ ಸಂಗ್ರಹಣೆ ಹಾಗೂ ಮನೆಗಳಿಗೆ ಜೋಡಣೆ ಮಾಡಿದ ನಲ್ಲಿಗಳ ನೀರು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲು ಸೂಚಿಸಲಾಗಿದೆ’ ಎಂದರು.

ಉಪ ವಿಭಾಗಾಧಿಕಾರಿ ಶಿಂಧೆ ಅವಿನಾಶ ಸಂಜೀವನ್‍, ಡಾ. ರವಿಕಿರಣ್‍, ಡಾ. ಶಿವನಾಥ, ಡಾ. ಹನುಮಂತರಾಯ ತಳ್ಳೊಳ್ಳಿ, ಡಾ. ಅಭಿಜಿತ್‍ ನೈಕ್‍, ಡಾ. ಸಂಗನಗೌಡ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಂಗನಗೌಡ ಇದ್ದರು.

ಲಿಂಗಸುಗೂರು ತಾಲ್ಲೂಕು ಯರಗುಂಟಿಗೆ ಶುಕ್ರವಾರ ಮಧ್ಯರಾತ್ರಿ ಭೇಟಿ ನೀಡಿದ್ದ ಜಿಲ್ಲಾ ಆರೋಗ್ಯಾಧಿಕಾರಿ ಸುರೇಂದ್ರ ಬಾಬು ರೋಗಿಗಳಿಗೆ ಸ್ವತಃ ಚಿಕಿತ್ಸೆ ನೀಡಿ ಆತ್ಮಸ್ಥೈರ್ಯ ತುಂಬಿದರು
ಲಿಂಗಸುಗೂರು ತಾಲ್ಲೂಕು ಯರಗುಂಟಿಗೆ ಶನಿವಾರ ಭೇಟಿ ನೀಡಿದ್ದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ್ ಕುರೇರ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರಿಂದ ಮಾಹಿತಿ ಪಡೆದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.