ADVERTISEMENT

ಸಿರವಾರ: ಭಕ್ತರ ಆರಾಧ್ಯ ದೈವ ಕಲ್ಲೂರಿನ ಮಹಾಲಕ್ಷ್ಮಿ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2025, 4:37 IST
Last Updated 22 ಆಗಸ್ಟ್ 2025, 4:37 IST
ಸಿರವಾರ ತಾಲ್ಲೂಕಿನ ಕಲ್ಲೂರು ಮಹಾಲಕ್ಷ್ಮಿ ದೇವಿ ಮೂರ್ತಿ ವಿಶೇಷ ಹೂವಿನ ಅಲಂಕಾರ
ಸಿರವಾರ ತಾಲ್ಲೂಕಿನ ಕಲ್ಲೂರು ಮಹಾಲಕ್ಷ್ಮಿ ದೇವಿ ಮೂರ್ತಿ ವಿಶೇಷ ಹೂವಿನ ಅಲಂಕಾರ   

ಸಿರವಾರ: ತಾಲ್ಲೂಕಿನ ಕಲ್ಲೂರು ಗ್ರಾಮದ ಮಹಾಲಕ್ಷ್ಮಿ ಸಹಿತ ಶ್ರೀನಿವಾಸ ದೇವಸ್ಥಾನ ಭಕ್ತರ ಮನದಾಸೆಗಳನ್ನು ಈಡೇರಿಸುವ ಪುಣ್ಯ ಕ್ಷೇತ್ರ ಎಂದು ಪ್ರಸಿದ್ಧಿ ಪಡೆದಿದೆ.

ಏಳು ಬೆಟ್ಟ, ಏಳು ಊರ ಅಗಸಿಗಳು ಒಂದೇ ಊರಿನಲ್ಲಿ ಲೀನವಾಗಿದ್ದಕ್ಕಾಗಿ ಕಲ್ಲೂರು ಗ್ರಾಮವನ್ನು ‘ಕಲಿತೂರು’ ಎಂದು ಕರೆಯಲಾಗುತ್ತಿತ್ತು ಎನ್ನಲಾಗಿದ್ದು. ಕೊಲ್ಲಾಪುರದ ಮಹಾಲಕ್ಷ್ಮಿ ಈ ಗ್ರಾಮದಲ್ಲಿ ಬಂದು ನೆಲೆಸಿದ್ದಾಳೆ ಎನ್ನುವ ಪ್ರತೀತಿ ಇದೆ.

16ನೇ ಶತಮಾನದಲ್ಲಿ ಮೂಲತಃ ವಿಜಯಪುರ ಜಿಲ್ಲೆಯ ಲಕ್ಷ್ಮೀಕಾಂತಾಚಾರ್ಯ ಎಂಬ ವಿಧ್ವಾಂಸರು ಆಧ್ಯಾತ್ಮಿಕ ಸಾಧನೆಗಾಗಿ ಕಲ್ಲೂರಿನಲ್ಲಿ ನೆಲೆಸಿದ್ದರು ಎನ್ನಲಾಗಿದೆ. ಆಚಾರ್ಯರ ಕುಲ ದೇವತೆ ಕೊಲ್ಲಾಪುರದ ಮಹಾಲಕ್ಷ್ಮಿ.

ADVERTISEMENT

ಆಚಾರ್ಯರು ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಸಂದರ್ಭದಲ್ಲಿ ‘ಕೊಲ್ಲಾಪುರಕ್ಕೆ ಬಂದು ನಿನ್ನ ದರ್ಶನ ಪಡೆಯುವ ಸ್ಥತಿಯಲ್ಲಿಲ್ಲ’ ಎಂದು ಬೇಡಿಕೊಂಡಾಗ ಒಂದು ದಿನ ಎಂದಿನಂತೆ ಬೆಳಗ್ಗೆ ಪೂಜೆ ಮಾಡಲು ಗಂಧ ತೆಯುವ ಸಾಣಿಕಲ್ಲಿನ ಹತ್ತಿರ ಬಂದು ಪೂಜೆ ಮಾಡುವ ಸಮಯದಲ್ಲಿ ಸಾಣೆಕಲ್ಲು ಐದು ಬಾರಿ ತಿರುಗಿ ದೀಪ ಪ್ರಜ್ವಲಿಸುವ ಮೂಲಕ ಆ ಕಲ್ಲಿನ ಮೇಲೆ ದೇವಿಯ ಮೂರ್ತಿ ಮೂಡಿ ಕೊಲ್ಲಾಪುರದ ಮಹಾಲಕ್ಷ್ಮಿ ದರ್ಶನ ನೀಡಿ ಇಲ್ಲಿಯೇ ನೆಲೆಸಿದ್ದಾಳೆ ಎನ್ನುವುದು ಇತಿಹಾಸ. 

ಗ್ರಾಮಸ್ಥರು ನೀರಿಗಾಗಿ ಪರಿತಪಿಸಿದ ಸಂದರ್ಭದಲ್ಲಿ ಲಕ್ಷ್ಮೀಕಾಂತಾಚಾರ್ಯರು ಮಹಾಲಕ್ಷ್ಮಿಯನ್ನು ಸ್ಮರಿಸಿ ಮಂತ್ರಾಕ್ಷತೆ ಹಾಕಿ ಗಂಗೆಯನ್ನು ಆಹ್ವಾನಿಸಿದ್ದುಅದೇ ಭಾವಿಯ ನೀರು ಸುಮಾರು 7 ಗ್ರಾಮದ ಜನರಿಗೆ ಜೀವನಾಡಿಯಾಯಿತು ಎಂಬ ಪ್ರತೀತಿ ಇದೆ.

ಕಲಿಯುಗದಲ್ಲಿ ಜನರ ಮನಸ್ಸಿನ ಇಷ್ಟಾರ್ಥಗಳನ್ನು ಈಡೇರಿಸುವ ಲಕ್ಷ್ಮೀ ಸಹಿತ ಶ್ರೀನಿವಾಸ ಇಷ್ಟಾರ್ಥಗಳ್ನು ಈಡೇರಿಸುತ್ತಾನೆ ಎಂಬುದು ಭಕ್ತರ ನಂಬಿಕೆ. ಪ್ರತಿ ಮಂಗಳವಾರ ಮತ್ತು ಶುಕ್ರವಾರ ದೇವಸ್ಥಾನಕ್ಕೆ ಬರುವ ಭಕ್ತರು ತೆಂಗಿನಕಾಯಿಗೆ ಪೂಜೆ ಮಾಡಿ ಅಲ್ಲೆ ಕಟ್ಟಿ ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳತ್ತಾರೆ.

ದೇವಸ್ಥಾನದಲ್ಲಿ ಶ್ರಾವಣ ಮಾಸ, ದಸರಾ ಮತ್ತು ಕಾರ್ತಿಕ ಮಾಸದಲ್ಲಿ ವಿವಿಧ ಪ್ರವಚನ ಕಾರ್ಯಕ್ರಮಗಳು ನಡೆಯುತ್ತವೆ.

ಮಹಾಲಕ್ಷ್ಮಿ ದರ್ಶನಕ್ಕೆ ಕೇಂದ್ರ ಸಚಿವರು, ರಾಜ್ಯ ಸಚಿವರು, ರಾಜಕೀಯ ನಾಯಕರು, ಸಿನಿಮಾ ನಟ ನಟಿಯರು ಸೇರಿದಂತೆ ವಿವಿಧ ಜಿಲ್ಲೆ, ಅನ್ಯ ರಾಜ್ಯ ಹಾಗು ವಿದೇಶಗಳಿಂದಲೂ ಸಹಸ್ರಾರು ಭಕ್ತರು ಬರುವುದು ಕಂಡು ಬರುತ್ತದೆ.

ಸಿರವಾರ ತಾಲ್ಲೂಕಿನ ಕಲ್ಲೂರು ಮಹಾಲಕ್ಷ್ಮಿ ದೇವಸ್ಥಾನಕ್ಕೆ ಆಗಾಗ ನಟಿ ಪ್ರೇಮಾ ಕುಟುಂಬ ಭೇಟಿ ನೀಡುತ್ತಾರೆ
ಸಿರವಾರ ತಾಲ್ಲೂಕಿನ ಕಲ್ಲೂರು ಮಹಾಲಕ್ಷ್ಮಿ ದೇವಸ್ಥಾನಕ್ಕೆ ರಾಯಚೂರಿಗೆ ಬಂದಾಗಲೆಲ್ಲ ಭೇಟಿ ನೀಡುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಸಿರವಾರ ತಾಲ್ಲೂಕಿನ ಕಲ್ಲೂರು ಮಹಾಲಕ್ಷ್ಮಿ ದೇವಸ್ಥಾನಕ್ಕೆ ವರ್ಷಕ್ಕೊಮ್ಮೆ ಭೇಟಿ ನೀಡುವ ನಟ ರಾಜ್ಯಸಭಾ ಸದಸ್ಯ ಜಗ್ಗೇಶ

‌ರಾಯಕೀಯ ಗಣ್ಯರು, ನಟರ ಭೇಟಿ ಶ್ರಾವಣ, ದಸರಾ ಮತ್ತು ಕಾರ್ತಿಕ ಮಾಸದಲ್ಲಿ ವಿಶೇಷ ಕಾರ್ಯಕ್ರಮ

ಮಹಾಲಕ್ಷ್ಮಿ ದೇವಸ್ಥಾನ ಐತಿಹಾಸಿಕವಾಗಿದೆ. ನನ್ನ ಕಷ್ಟ ಪರಿಹರಿಸು ಮಾತೆ ಎಂದು ಬಂದಂತಹ ಭಕ್ತರಿಗೆ ನಿರಾಶೆ ಆಗದೇ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡಿದ್ದಾರೆ
ನಾಗರಾಜ ಗುನ್ನಾಳ್ ವಿಎಸ್ಎಸ್ಎನ್ ಸದಸ್ಯ ಕಲ್ಲೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.