ಕವಿತಾಳ: ಸಮೀಪದ ಮಲ್ಲದಗುಡ್ಡ ಗ್ರಾಮದ ಹಳೆ ಶಾಲೆ ಪಕ್ಕದಲ್ಲಿ ಹಾದು ಹೋಗುವ ರಸ್ತೆ ಸಂಪೂರ್ಣ ಹದಗೆಟ್ಟಿದೆ.
ಈಚೆಗೆ ಸುರಿದ ಸತತ ಮಳೆಯಿಂದ ರಸ್ತೆ ಸಂಪೂರ್ಣ ಕೆಸರು ಗದ್ದೆಯಂತಾಗಿದೆ. ಜಮೀನುಗಳಿಗೆ ಹೋಗುವ ರೈತರು, ಕೂಲಿ ಕಾರ್ಮಿಕರು ಮತ್ತು ನರೇಗಾ ಕೆಲಸಕ್ಕೆ ಹೋಗುವ ಕೆಲಸಗಾರರು ನಿತ್ಯ ಕೆಸರಿನಲ್ಲಿಯೇ ನಡೆದು ಹೋಗಬೇಕಾದ ಅನಿವಾರ್ಯತೆ ಉಂಟಾಗಿದೆ.
‘ಸ್ವಲ್ಪ ಮಳೆಯಾದರೂ ರಸ್ತೆ ಕೆಸರುಮಯವಾಗುತ್ತದೆ. ಹೊಲಗಳಿಗೆ ಹೋಗುವ ರೈತರು, ಕೂಲಿಕಾರರಿಗೆ ತೀವ್ರ ತೊಂದರೆಯಾಗುತ್ತಿದೆ. ರಸ್ತೆ ದುರಸ್ತಿ ಮಾಡಿಸುವಂತೆ ಪಂಚಾಯಿತಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ಗ್ರಾಮದ ಶರಣಬಸವ ಆರೋಪಿಸಿದರು.
‘ಮಳೆಗಾಲದಲ್ಲಿ ಎತ್ತು, ದನ–ಕರುಗಳ ಓಡಾಟ, ಎತ್ತಿನ ಬಂಡಿ, ಕೃಷಿ ಯಂತ್ರಗಳನ್ನು ಸಾಗಿಸಲು ಮತ್ತು ಬೆಳೆದ ಬೆಳೆಗಳನ್ನು ಮನೆಗೆ ತರಲು ಪರದಾಡುವ ಪರಿಸ್ಥಿತಿ ಇದೆ. ರಸ್ತೆ ದುರಸ್ತಿ ಮಾಡಬೇಕು. ಈ ಬಗ್ಗೆ ಹಿರಿಯ ಅಧಿಕಾರಿಗಳು ಗಮನಹರಿಸಬೇಕು’ ಎಂದು ಗ್ರಾಮದ ಬಸವರಾಜ ಒತ್ತಾಯಿಸಿದರು.
ಹದಗೆಟ್ಟ ರಸ್ತೆಯಿಂದ ರೈತರ ಪರದಾಟ ನರೇಗಾ ಕೆಲಸಕ್ಕೆ ಹೋಗುವ ಕೂಲಿಕಾರರಿಗೆ ಸಮಸ್ಯೆ ಹಲವು ವರ್ಷಗಳಿಂದ ಸಮಸ್ಯೆಗೆ ಸಿಗದ ಪರಿಹಾರ
ರಸ್ತೆಯಲ್ಲಿ ನೀರು ನಿಂತು ಕೆಸರಾದ ಪರಿಣಾಮ ಗಲೀಜು ಉಂಟಾಗಿದೆ. ಸುತ್ತಲಿನ ಓಣಿಗಳಲ್ಲಿ ಸೊಳ್ಳೆ ಕಾಟ ಹೆಚ್ಚಿ ರೋಗ ಹರಡುವ ಭೀತಿ ಕಾಡುತ್ತಿದೆ. ರಸ್ತೆಗೆ ಮುರಂ ಹಾಕಿ ತಾತ್ಕಾಲಿಕವಾಗಿ ದುರಸ್ತಿ ಮಾಡಬೇಕು
- ಯಲ್ಲಪ್ಪ ನಾಯಕ ಶರಣಬಸವ ಮಲ್ಲದಗುಡ್ಡ ಗ್ರಾಮಸ್ಥರು
ಈ ಬಗ್ಗೆ ಸಾರ್ವಜನಿಕರು ದೂರು ನೀಡಿಲ್ಲ. ಪಂಚಾಯಿತಿ ಅನುದಾನದಲ್ಲಿ ರಸ್ತೆ ದುರಸ್ತಿ ಮಾಡುವುದು ಕಷ್ಟ. ಹೀಗಾಗಿ ಜಿಲ್ಲಾ ಪಂಚಾಯಿತಿ ಅಧಿಕಾರಿಗಳಿಗೆ ಮಾಹಿತಿ ನೀಡಲಾಗುವುದು
-ಬಸಲಿಂಗಪ್ಪ ಪಿಡಿಒ ಮಲ್ಲದಗುಡ್ಡ ಗ್ರಾಮ ಪಂಚಾಯಿತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.