ರಾಯಚೂರು: ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಮಂತ್ರಾಲಯದಲ್ಲಿ ಕರ್ನಾಟಕ ಸರ್ಕಾರವು 45 ವರ್ಷಗಳ ಹಿಂದೆ ನಿರ್ಮಿಸಿರುವ ಹಳೆಯ ಕರ್ನಾಟಕ ರಾಜ್ಯ ವಸತಿಗೃಹ ಮೂಲಸೌಕರ್ಯಗಳ ಕೊರತೆಯಿಂದ ಶಾಶ್ವತವಾಗಿ ಬಾಗಿಲು ಮುಚ್ಚಿದೆ.
ಮುಂತ್ರಾಲಯದ ಮುಖ್ಯ ರಸ್ತೆಯ ಪಕ್ಕದಲ್ಲಿಯೇ ನಿರ್ಮಿಸಲಾದ ಹಳೆಯ ಕಟ್ಟಡದಲ್ಲಿ 52 ಕೊಠಡಿಗಳಿವೆ. ಕಟ್ಟಡ ನೆಲಮಟ್ಟದಲ್ಲಿರುವ ಕಾರಣ ಬಾತರೂಮ್ ಹಾಗೂ ಶಾಚಾಲಯದ ನೀರು ಸುಲಭವಾಗಿ ಹರಿದು ಹೋಗುತ್ತಿಲ್ಲ. ನಿರತಂತ ನೀರಿನ ಸಮಸ್ಯೆ ಎದುರಿಸುತ್ತಿದೆ. ಕಳೆದ ವರ್ಷ ನೀರಿನ ಸಮಸ್ಯೆಯಿಂದಾಗಿ ಮುಚ್ಚಿದ ಬಾಗಿಲು ಮತ್ತೆ ತೆರೆದಿಲ್ಲ.
ಹಳೆಯ ಕಟ್ಟಡದಲ್ಲಿ ಒಂದು ಸಭಾಂಗಣವೂ ಇದೆ. ಕಟ್ಟಡ ಪ್ರವೇಶ ದ್ವಾರಕ್ಕೆ ಸರಿಯಾದ ಬಾಗಿಲು ಇಲ್ಲದ ಕಾರಣ ಬಿಡಾಡಿ ದನಗಳು ಒಳಗೆ ಬಂದು ಸಗಣಿ ಹಾಕಿವೆ. ಸಭಾಂಗಣವೂ ಕಟ್ಟಡ ಕಟ್ಟಿದಾಗಿನಿಂದಲೂ ಸುಣ್ಣಬಣ್ಣ ಕಂಡಿಲ್ಲ. ಕಟ್ಟಡದಲ್ಲಿ ಸಂಪೂರ್ಣ ಜೇಡು ಕಟ್ಟಿದೆ. ನಿರ್ವಹಣೆಯ ಸಮಸ್ಯೆಯಿಂದಾಗಿ ಕಟ್ಟಡ ಸಂಪೂರ್ಣ ಹಾಳಾಗಿದೆ.
ನಿತ್ಯ ನೂರಾರು ಸಂಖ್ಯೆಯಲ್ಲಿ ಮಂತ್ರಾಲಯಕ್ಕೆ ಬರುತ್ತಾರೆ. ಮಠದ ವಸತಿಗೃಹಗಳು ದಾನಿಗಳನ್ನು ಹೊರತು ಪಡಿಸಿ ಬೇರೆಯವರಿಗೆ ಸಿಗುವುದು ಬಹಳ ಅಪರೂಪ. ಸರ್ಕಾರಿ ವಸತಿಗೃಹಗಳಲ್ಲಿ ಸರಿಯಾದ ಸೌಲಭ್ಯಗಳಿಲ್ಲ. ದೂರದ ಊರುಗಳಿಂದ ಬರುವ ಭಕ್ತರು ಅನಿವಾರ್ಯವಾಗಿ ಖಾಸಗಿ ಲಾಡ್ಜ್‌ಗಳಿಗೆ ಹೇಳಿದಷ್ಟು ಹಣ ಕೊಟ್ಟು ಉಳಿದುಕೊಳ್ಳಬೇಕಾದ ಸ್ಥಿತಿ ಬಂದಿದೆ.
‘ಗುರುವಾರ, ಶನಿವಾರ ಹಾಗೂ ಭಾನುವಾರ ಭಕ್ತರ ಸಂಖ್ಯೆ ಅಧಿಕ ಇರುತ್ತದೆ. ಆರಾಧಾನೆ ಸಂದರ್ಭಲ್ಲಿ ಭಕ್ತರು ಸಂಖ್ಯೆ ಇನ್ನೂ ಹೆಚ್ಚಾಗುತ್ತದೆ. ಅಗತ್ಯ ಮೂಲಸೌಲರ್ಯ ಒದಗಿಸದೇ ಭಕ್ತರಿಗೆ ಕೊಠಡಿಗಳನ್ನು ಕೊಟ್ಟರೆ ಗಂಭೀರ ಸಮಸ್ಯೆ ಉಲ್ಬಣಗೊಳ್ಳುವ ಸಾಧ್ಯತೆ ಇದೆ. ತಾತ್ಕಾಲಿಕವಾಗಿ ಹಳೆಯ ವಸತಿ ಗೃಹ ಬಂದ್ ಮಾಡಲಾಗಿದೆ’ ಎಂದು ಕರ್ನಾಟಕ ರಾಜ್ಯ ವಸತಿ ಗೃಹದ ಛತ್ರದ ವ್ಯವಸ್ಥಾಪಕ ಆಂಜನೇಯ ಹೇಳುತ್ತಾರೆ.
ಕರ್ನಾಟಕ ರಾಜ್ಯ ವಸತಿ ಗೃಹ ಕಟ್ಟಡದಲ್ಲೂ ದೋಷ ಕಂಡು ಬಂದಿದೆ. ಉದ್ಘಾಟನೆಯಾದ ಎರಡು ವರ್ಷಗಳಲ್ಲೇ ಕಟ್ಟಡ ಸೋರಲು ಆರಂಭಿಸಿದೆ. ಕೊಠಡಿಗಳಲ್ಲಿನ ಏಸಿಗಳು ಹಾಳಾಗಿವೆ. ಬಿಸಿನೀರಿನ ಗೀಜರ್‌ಗಳು ಕೆಟ್ಟಿವೆ. ಆನ್ ಮಾಡಿದರೆ ಸಾಕು ನಲ್ಲಿಗಳಲ್ಲಿ ಶಾಕ್ ಹೊಡೆಯುತ್ತದೆ. ಕೊಠಡಿಗಳಲ್ಲೂ ಬೆಡ್‌ಗಳ ಕೊರತೆ ಇದೆ. ಇದೆಲ್ಲವನ್ನೂ ಸಚಿವರು ಮಂಗಳವಾರ ಭೇಟಿ ನೀಡಿ ಪರಿಶಿಲಿಸಿದ್ದಾರೆ.
‘ಹಿಂದೆ ಮೌಖಿಕ ಒಪ್ಪಿಗೆಯ ಮೇಲೆ ವಸತಿ ಗೃಹಗಳ ನಿರ್ಮಾಣ ಮಾಡಲಾಗಿದೆ. ಮೊದಲೇ ಲೀಸ್ ಕರಾರು ಒಪ್ಪಂದ ಮಾಡಿಕೊಳ್ಳಬೇಕಿತ್ತು. ಜಮೀನು ವಿವಾದ ಪ್ರಕರಣ ನ್ಯಾಯಾಲಯದಲ್ಲಿದೆ. ಹೀಗಾಗಿ ಕಟ್ಟಡದ ದುರಸ್ತಿಗೆ ತಾಂತ್ರಿಕ ಸಮಸ್ಯೆ ಎದುರಾಗಿದೆ‘ ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳುತ್ತಾರೆ.
ಕರ್ನಾಟಕ ರಾಜ್ಯ ವಸತಿ ಗೃಹದ ಹೊಸ ಕಟ್ಟಡದ ಕಳಪೆ ಕಾಮಗಾರಿಯ ಬಗ್ಗೆ ಲೋಕಾಯುಕ್ತಕ್ಕೆ ದೂರು ಸಲ್ಲಿಕೆಯಾಗಿದೆ. ತನಿಖೆಯನ್ನು ಆದಷ್ಟು ಬೇಗ ಮುಗಿಸಿ ವರದಿಕೊಡುವಂತೆ ಲೋಕಾಯುಕ್ತಕ್ಕೆ ಕೇಳಿಕೊಳ್ಳಲಾಗಿದೆ. ಗುತ್ತಿಗೆದಾರರಿಂದ ಲೋಪವಾಗಿದ್ದರೆ ಅವರಿಂದಲೇ ಹಣ ವಸೂಲಿ ಮಾಡಿಸಿ ಕಟ್ಟಡ ದುರಸ್ತಿಪಡಿಸಲಾಗುವುದು‘ ಎಂದು ಸಚಿವರು ತಿಳಿಸುತ್ತಾರೆ.
ಆನ್‌ಲೈನ್ ಮೂಲಕ ಕೊಠಡಿ ಬುಕ್ಕಿಂಗ್ ಶೀಘ್ರ ತ್ರಿಸ್ಟಾರ್ ಹೋಟೆಲ್ ಮಾದರಿ ಸಿಬ್ಬಂದಿ ನೇಮಕ ಹಳೆಯ ಕಟ್ಟಡ ಅವೈಜ್ಞಾನಿಕ ನಿರ್ಮಾಣ
ಮಂತ್ರಾಲಯದಲ್ಲಿರುವ ಕರ್ನಾಟಕ ವಸತಿ ಗೃಹಗಳ ಕಟ್ಟಡದ ನಿರ್ಹಹಣೆಯ ಉಸ್ತುವಾರಿಯನ್ನು ಪ್ರವಾಸೋದ್ಯಮ ಇಲಾಖೆಗೆ ವಹಿಸುವ ಕುರಿತು ಚಿಂತನೆ ನಡೆದಿದೆರಾಮಲಿಂಗಾರೆಡ್ಡಿ ಮುಜರಾಯಿ ಸಚಿವ
ವಸತಿಗೃಹದಲ್ಲಿ 50 ಕೊಠಡಿಗಳು ಕರ್ನಾಟಕ ರಾಜ್ಯದ ಹೊಸ ವಸತಿ ಗೃಹದಲ್ಲಿ 10 ಎಸಿ ಹಾಗೂ 40 ನಾನ್‌ಎಸಿ ಕೊಠಡಿಗಳು ಸೇರಿ ಒಟ್ಟು ಒಟ್ಟು 50 ಕೊಠಡಿಗಳಿವೆ. ತಲಾ ನಾಲ್ಕು ಜನರು 12 ಗಂಟೆ ಸಮಯ ವಾಸ್ತವ್ಯ ಮಾಡಲು ₹500 ಶುಲ್ಕ ನಿಗದಿಪಡಿಸಲಾಗಿದೆ. 12 ಗಂಟೆ ಮೀರಿದಾಗ ₹1000 ಶುಲ್ಕ ಪಡೆಯಲಾಗುತ್ತಿದೆ. ಒಟ್ಟು 50 ಕೊಠಡಿಗಳನ್ನು ಆನಲೈನ್ ಮೂಲಕ ಹಾಗೂ ಇನ್ನುಳಿದ 20 ಕೊಠಡಿಗಳನ್ನು ನೇರವಾಗಿ ಹಣ ಪಾವತಿಸಿ ಬುಕ್ಕಿಂಗ್ ಮಾಡುವ ವ್ಯವಸ್ಥೆಗೆ ಕ್ರಮಕೈಗೊಳ್ಳಲು ನಿರ್ಧರಿಸಲಾಗಿದೆ. ಮಂತ್ರಾಲಯದಲ್ಲಿ ಪೂರ್ಣಾವಧಿಯ ಅಧಿಕಾರಿಗಳೇ ಇಲ್ಲ. ಇಲ್ಲಿಯ ವ್ಯವಸ್ಥಾಪಕರೇ ಶ್ರೀಶೈಲದ ವಸತಿಗೃಹಗಳಿಗೂ ವ್ಯವಸ್ಥಾಪಕರಾಗಿದ್ದಾರೆ. ಅಲ್ಲಿಂದ ಬಂದು ಹೋಗಲು ಕನಿಷ್ಠ ಒಂದು ದಿನ ಬೇಕು. ಹೀಗಾಗಿ ಹೀಗಾಗಿ ಹೊಸ ಅಧಿಕಾರಿ ನೇಮಕ ಮಾಡುವ ದಿಸೆಯಲ್ಲಿಇಲಾಖೆ ಚಿಂತನೆ ನಡೆಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.