ಮಾನ್ವಿ: ‘ಪಟ್ಟಣದ ಬಸವಶ್ರೀ ನೌಕರರ ಪತ್ತಿನ ಸಹಕಾರ ಸಂಘ 2024-25ನೇ ಸಾಲಿನಲ್ಲಿ ₹5.85ಕೋಟಿ ನಿವ್ವಳ ಲಾಭ ಗಳಿಸಿದೆ’ ಎಂದು ಸಂಘದ ಸಂಸ್ಥಾಪಕ ಅಧ್ಯಕ್ಷ ಡಾ.ಶಂಕರಗೌಡ ಎಸ್. ಪಾಟೀಲ ಹೇಳಿದರು.
ಭಾನುವಾರ ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ಬಸವಶ್ರೀ ನೌಕರರ ಪತ್ತಿನ ಸಹಕಾರ ಸಂಘದ 22 ನೇ ವಾರ್ಷಿಕ ಮಹಾಸಭೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘22 ವರ್ಷಗಳ ಹಿಂದೆ ಕೇವಲ ₹6.21 ಲಕ್ಷ ಬಂಡವಾಳದಿಂದ ಆರಂಭವಾದ ಬಸವಶ್ರೀ ಸಹಕಾರ ಸಂಘ ಎಲ್ಲರ ಸಹಕಾರ ಹಾಗೂ ಉತ್ತಮ ಸೇವೆಯಿಂದಾಗಿ ನಿರಂತರವಾಗಿ ಲಾಭ ಗಳಿಸಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಕೂಡ ಸಂಘದ ಸದಸ್ಯರಿಗೆ ಶೇ22 ರಷ್ಟು ಲಾಭಾಂಶ ನೀಡಲಾಗುವುದು’ ಎಂದು ತಿಳಿಸಿದರು.
ವಿಜಯಪುರದ ಚಾಣಕ್ಯ ಕರಿಯರ್ ಅಕಾಡೆಮಿ ಸಂಸ್ಥಾಪಕ ಎನ್.ಎಂ.ಬಿದಾರಾರ ಮಾತನಾಡಿ, ‘ಮನ, ಮನೆ ಹಾಗೂ ಮನಿ (ಹಣ) ಚೆನ್ನಾಗಿದ್ದರೆ ಸಮಾಜದಲ್ಲಿ ಉತ್ತಮ ಜೀವನ ನಡೆಸಲು ಸಾಧ್ಯ’ ಎಂದರು.
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೀರೇಶ ಎನ್. ಹೊಸೂರು ವಾರ್ಷಿಕ ವರದಿ ಮಂಡಿಸಿದರು.
ಸಂಘದ 143 ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ತಲಾ ₹5 ಸಾವಿರ ನಗದು ಹಾಗೂ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ಕಲ್ಮಠದ ವಿರೂಪಾಕ್ಷ ಪಂಡಿತಾರಾಧ್ಯ ಸ್ವಾಮೀಜಿ, ಚೀಕಲಪರ್ವಿಯ ರುದ್ರಮುನೀಶ್ವರ ಮಠದ ಸದಾಶಿವ ಸ್ಚಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಆರ್‌ಡಿಸಿಸಿ ಬ್ಯಾಂಕಿನ ಅಧ್ಯಕ್ಷ ವಿಶ್ವನಾಥ ಪಾಟೀಲ ತೋರಣದಿನ್ನಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಮಲ್ಲನಗೌಡ ನಕ್ಕುಂದಿ, ಬಸವಶ್ರೀ ನೌಕರರ ಪತ್ತಿನ ಸಹಕಾರ ಸಂಘದ ಎಲ್ಲಾ ಶಾಖೆಗಳ ಆಡಳಿತ ಮಂಡಳಿ ನಿರ್ದೇಶಕರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.