ADVERTISEMENT

ಮಾನ್ವಿ: ಯುವ ರೈತನಿಗೆ ನೆರವಾದ ನರೇಗಾ

4.20 ಎಕರೆ ಜಮೀನಿನಲ್ಲಿ 40ಟನ್ ಪಪ್ಪಾಯ ಬೆಳೆದ ರೈತ ರಮೇಶ ಹೂಗಾರ

ಬಸವರಾಜ ಬೋಗಾವತಿ
Published 8 ಜುಲೈ 2021, 19:30 IST
Last Updated 8 ಜುಲೈ 2021, 19:30 IST
ಮಾನ್ವಿ ತಾಲ್ಲೂಕಿನ ಕಾತರಕಿ ಗ್ರಾಮದ ರೈತ ರಮೇಶ ಬುಡ್ಡಪ್ಪ ಹೂಗಾರ
ಮಾನ್ವಿ ತಾಲ್ಲೂಕಿನ ಕಾತರಕಿ ಗ್ರಾಮದ ರೈತ ರಮೇಶ ಬುಡ್ಡಪ್ಪ ಹೂಗಾರ   

ಮಾನ್ವಿ: ತಾಲ್ಲೂಕಿನ ಮದ್ಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾತರಕಿ ಗ್ರಾಮದ ಯುವಕ ರಮೇಶ ಬುಡ್ಡಪ್ಪ ಹೂಗಾರ ನರೇಗಾ ಯೋಜನೆ ಸದ್ಬಳಕೆ ಮಾಡಿಕೊಂಡು ತೋಟಗಾರಿಕೆಯಲ್ಲಿ ಸಾಧನೆ ಮಾಡಿದ್ದಾರೆ. ಕಾತರಕಿ ಗ್ರಾಮದ ತಮ್ಮ 4.20ಎಕರೆ ತೋಟದಲ್ಲಿ ಸುಮಾರು 40 ಟನ್ ಪಪ್ಪಾಯ ಬೆಳೆಯುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಕಾತರಕಿ ಗ್ರಾಮವು ತುಂಗಭದ್ರಾ ನದಿಪಾತ್ರದಲ್ಲಿರುವ ಕಾರಣ ಇಲ್ಲಿನ ಬಹುತೇಕ ರೈತರು ಭತ್ತ ಹಾಗೂ ಹತ್ತಿ ಬೆಳೆಯುತ್ತಾರೆ. ಇತ್ತೀಚಿನ ದಿನಗಳಲ್ಲಿ ಬೆಳೆಗಳಿಗೆ ಸೂಕ್ತ ಬೆಲೆ ಸಮಸ್ಯೆ, ರಸಗೊಬ್ಬರ ದರ ಹೆಚ್ಚಳದಿಂದಾಗಿ ಕೃಷಿ ವೆಚ್ಚವೂ ಅಧಿಕವಾಗಿರುವ ಕಾರಣ ರಮೇಶ ಪರ್ಯಾಯ ಬೆಳೆಗಳ ಬಗ್ಗೆ ಆಲೋಚಿಸಿದ್ದರು.

ತೋಟಗಾರಿಕೆ ಇಲಾಖೆಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಬಳಸಿಕೊಂಡು ಪಪ್ಪಾಯ ಬೆಳೆಯತ್ತ ಗಮನಹರಿಸಿದ್ದು ಈಗ ಯಶ ಕಂಡಿದೆ.

ADVERTISEMENT

2020-21ನೇ ಸಾಲಿನ ನರೇಗಾ ಯೋಜನೆ ಅಡಿಯಲ್ಲಿ ಅವರು ಪ್ರತಿ ಎಕರೆಗೆ 1,060 ಸಸಿಗಳಂತೆ 4.20 ಎಕರೆ ಜಮೀನಿನಲ್ಲಿ ಒಟ್ಟು 4,452 ಪಪ್ಪಾಯ ಸಸಿಗಳನ್ನು ತಮ್ಮ ತೋಟದಲ್ಲಿ ನೆಟ್ಟಿದ್ದರು. ಪಪ್ಪಾಯ ಬೆಳೆಯಲು ನರೇಗಾ ಯೋಜನೆ ಮೂಲಕ ₹ 1.23 ಲಕ್ಷ ಕೂಲಿ ಹಣವನ್ನು ಪಡೆದಿದ್ದಾರೆ. ₹ 49 ಸಾವಿರ ಸಾಮಾಗ್ರಿ ವೆಚ್ಚ ಇನ್ನೂ ಪಾವತಿಯಾಗಬೇಕಿದೆ.

ಈಗ ಪಪ್ಪಾಯ ಬೆಳೆ ಫಲ ನೀಡಿದ್ದು ಮಾರ್ಚ್ ತಿಂಗಳಲ್ಲಿ ಪ್ರತಿ ಟನ್‍ಗೆ ₹ 16ಸಾವಿರ ದರದಲ್ಲಿ ಒಟ್ಟು ಸುಮಾರು 40ಟನ್ ಪಪ್ಪಾಯ ಹಣ್ಣುಗಳನ್ನು ಮಾರಾಟ ಮಾಡಿದ್ದಾರೆ. ಆದರೆ ಈಗ ಪಪ್ಪಾಯ ಮಾರಾಟದ ದರ ಕುಸಿದಿರುವುದು ಅವರಲ್ಲಿ ಆತಂಕ ಮೂಡಿಸಿದೆ.

ಈ ಕುರಿತು ಪ್ರತಿಕ್ರಿಯಿಸಿದ ರಮೇಶ ಹೂಗಾರ, ‘ ಸರ್ಕಾರ ತೋಟಗಾರಿಕೆ ಬೆಳೆಗಳಿಗೆ ಸ್ಥಳೀಯ ಮಟ್ಟದಲ್ಲಿ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಹಾಗೂ ದರ ನಿಗದಿ ಮಾಡಿ ಪ್ರೋತ್ಸಾಹಿಸಬೇಕು’ ಎಂದರು.

ಸರ್ಕಾರದ ಯೋಜನೆ ಸದ್ಬಳಕೆ ಮಾಡಿಕೊಂಡಿರುವ ರೈತ ರಮೇಶ ಹೂಗಾರ ಬಗ್ಗೆ ಅಧಿಕಾರಿಗಳು ಹಾಗೂ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

***

ಪಪ್ಪಾಯ ಬೆಳೆಗೆ ನರೇಗಾ ಯೋಜನೆಯ ಸೌಲಭ್ಯ ಪಡೆದಿರುವ ಯುವಕ ರಮೇಶ ಇತರರಿಗೆ ಮಾದರಿಯಾಗಿದ್ದಾರೆ.

-ಶರಣಬಸವ , ಕಾರ್ಯನಿರ್ವಾಹಕ ಅಧಿಕಾರಿ, ತಾ.ಪಂ ಮಾನ್ವಿ

***

ನರೇಗಾ ಯೋಜನೆ ಬಳಸಿಕೊಂಡು ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ಕುರಿತು ರೈತರಲ್ಲಿ ಇನ್ನೂ ಹೆಚ್ಚು ಜಾಗೃತಿ ಮೂಡಿಸಬೇಕು. ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕು.

-ಕೆ.ವೈ.ಬಸವರಾಜ ನಾಯಕ, ಅಧ್ಯಕ್ಷ, ಕರ್ನಾಟಕ ರಾಜ್ಯ ರೈತ ಸಂಘ, ಮಾನ್ವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.