ADVERTISEMENT

ಚುನಾವಣೆ ಘೋಷಣೆ ಮೊದಲೇ ಮಸ್ಕಿ ‘ಬಿಸಿ’

ಅಖಾಡಕ್ಕೆ ಪ್ರವೇಶಿಸಿದ ರಾಜ್ಯಮಟ್ಟದ ರಾಜಕೀಯ ನಾಯಕರು

ನಾಗರಾಜ ಚಿನಗುಂಡಿ
Published 7 ಅಕ್ಟೋಬರ್ 2020, 20:00 IST
Last Updated 7 ಅಕ್ಟೋಬರ್ 2020, 20:00 IST
ಈಶ್ವರ ಖಂಡ್ರೆ, ಕೆಪಿಸಿಸಿ ಕಾರ್ಯಾಧ್ಯಕ್ಷ
ಈಶ್ವರ ಖಂಡ್ರೆ, ಕೆಪಿಸಿಸಿ ಕಾರ್ಯಾಧ್ಯಕ್ಷ   

ರಾಯಚೂರು: ಜಿಲ್ಲೆಯ ಮಸ್ಕಿ ವಿಧಾನಸಭೆ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆ ಆಗುವ ಮೊದಲೇ ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳು ಗೆಲುವಿಗಾಗಿ ಬಿರುಸಿನ ಚಟುವಟಿಕೆಗಳನ್ನು ಆರಂಭಿಸಿದ್ದು, ಕ್ಷೇತ್ರದಾದ್ಯಂತ ದಿನದಿಂದ ದಿನಕ್ಕೆ ಚುನಾವಣೆ ಕಾವು ಏರುತ್ತಿದೆ!

ಕಾಂಗ್ರೆಸ್‌ನಿಂದ ಎರಡು ಬಾರಿ ಗೆಲುವು ಸಾಧಿಸಿ ಶಾಸಕರಾಗಿದ್ದ ಪ್ರತಾಪಗೌಡ ಪಾಟೀಲ ಅವರು ಈಗ ಬಿಜೆಪಿ ಸೇರಿದ್ದಾರೆ. ಹೀಗಾಗಿ ಶತಾಯಗತಾಯ ಪ್ರತಾಪಗೌಡ ಅವರಿಗೆ ಪಾಠ ಕಲಿಸಬೇಕು ಎನ್ನುವ ಹಟದಿಂದ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರ ಪಡೆ ಸನ್ನದ್ಧವಾಗಿದೆ. ಈಗಾಗಲೇ ಗ್ರಾಮಗಳಿಗೆ ಸಂಚರಿಸುತ್ತಾ ಪಕ್ಷಕ್ಕೆ ಬೆಂಬಲವನ್ನು ಕೋರಲು ವ್ಯಾಪಕವಾಗಿ ಸಭೆಗಳನ್ನು ನಡೆಸುತ್ತಿದ್ದಾರೆ.

ಕಾಂಗ್ರೆಸ್‌ನಿಂದ ಹೊರಬರುವಾಗ ಕೆಲವು ಬೆಂಬಲಿಗರನ್ನು ಬಿಜೆಪಿಗೆ ಕರೆತಂದಿರುವ ಪ್ರತಾಪಗೌಡರು, ಈಗಾಗಲೇ ಚುನಾವಣೆ ಪೂರ್ವ ತಯಾರಿಗಾಗಿ ಸಭೆಗಳನ್ನು ಆಯೋಜಿಸುತ್ತಿದ್ದಾರೆ. ಮಸ್ಕಿ ಅಭಿವೃದ್ಧಿಗಾಗಿ ಮಾಡಿದ ಕೆಲಸಗಳನ್ನು ಮನವರಿಕೆ ಮಾಡುತ್ತಿದ್ದಾರೆ. ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದರೆ ಸಚಿವ ಸ್ಥಾನ ಸಿಗಲಿದ್ದು, ಮಸ್ಕಿ ಅಭಿವೃದ್ಧಿ ಮತ್ತಷ್ಟು ಯೋಜನೆಗಳನ್ನು ತರಲು ಸಾಧ್ಯವಾಗುತ್ತದೆ ಎಂಬುದನ್ನು ಬೆಂಬಲಿಗರ ಮೂಲಕ ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ.

ADVERTISEMENT

ಆದರೆ, ಮಸ್ಕಿ ಬಿಜೆಪಿಯಲ್ಲಿ ಎರಡು ಬಣಗಳು ನಿರ್ಮಾಣವಾಗಿರುವುದು ಗಮನಾರ್ಹ. ಬಿಜೆಪಿಯಲ್ಲಿ ಮೂಲದಿಂದ ಇರುವ ಟಿಎಲ್‌ಬಿಸಿ ಕಾಡಾ ಅಧ್ಯಕ್ಷ ಬಸನಗೌಡ ತುರ್ವಿಹಾಳ ಅವರನ್ನು ಬೆಂಬಲಿಸುವವರು ಪ್ರತಾಪಗೌಡರು ನಡೆಸುವ ಸಭೆಗಳಿಗೆ ಹಾಜರಾಗುತ್ತಿಲ್ಲ. ಈ ಒಡಕು ಏರ್ಪಡುತ್ತಿರುವುದು ಕಾಂಗ್ರೆಸ್‌ಗೆ ಬಂಡವಾಳವಾಗುವ ಲಕ್ಷಣಗಳು ತೋರುತ್ತಿವೆ. ಸ್ಪಷ್ಟನೆ ನೀಡಬೇಕಾಗಿರುವ ಬಸನಗೌಡ ತುರ್ವಿಹಾಳ ಅವರು ಚುನಾವಣೆ ಘೋಷಣೆ ಆಗುವುದನ್ನು ಎದುರು ನೋಡುತ್ತಿದ್ದಾರೆ.

ರಾಜ್ಯ ನಾಯಕರ ಪ್ರವೇಶ: ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ ಹಾಗೂ ಸತೀಶ ಜಾರಕಿಹೊಳಿ ಅವರು ಬುಧವಾರ ರಾಯಚೂರಿಗೆ ಬಂದಿದ್ದು, ಮಸ್ಕಿ ವಿಧಾನಸಭೆ ಚುನಾವಣೆಯ ತಯಾರಿಯನ್ನು ಪರಿಶೀಲಿಸಿದ್ದಾರೆ. ಉಪಚುನಾವಣೆಗಾಗಿ ಕಾರ್ಯಕರ್ತರಿಗೆ ಅಗತ್ಯ ಸಂದೇಶಗಳನ್ನು ನೀಡಿದ್ದಾರೆ.

ಶೀಘ್ರದಲ್ಲೇ ಮಸ್ಕಿ ವಿಧಾನಸಭೆ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆ ಆಗುವ ಸಾಧ್ಯತೆಗಳಿದ್ದು, ಕಾಂಗ್ರೆಸ್‌–ಬಿಜೆಪಿ ಮಧ್ಯೆ ಗೆಲುವಿಗಾಗಿ ತೀವ್ರ ಪೈಪೋಟಿ ಏರ್ಪಡಲಿದೆ. ರಾಜ್ಯದಲ್ಲಿ ಆಡಳಿತ ಪಕ್ಷವಾಗಿರುವ ಬಿಜೆಪಿಯಿಂದ ಸ್ಪರ್ಧಿಸಲಿರುವ ಪ್ರತಾಪಗೌಡ ಪಾಟೀಲ ಅವರಿಗೆ ಗೆಲುವು ಸುಲಭವೋ, ಕಠಿಣವೋ ಎಂಬುದು ಕಾಂಗ್ರೆಸ್‌ ಪಕ್ಷವು ತನ್ನ ಅಭ್ಯರ್ಥಿಯನ್ನು ಆಯ್ಕೆ ಮಾಡಿದ ಬಳಿಕ ತಿಳಿಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.