ಮಸ್ಕಿ: ಎರಡು ವರ್ಷಗಳ ಹಿಂದೆ ಆರಂಭವಾದ ಪಟ್ಟಣದ ತಾಲ್ಲೂಕು ಸಿವಿಲ್ ಮತ್ತು ಜೆಎಂಎಪ್‌ಸಿ ನ್ಯಾಯಾಲಯದ ಸಂಚಾರಿ ಪೀಠ ಇದುವರೆಗೂ ಕಾಯಂ ಪೀಠವಾಗದ ಕಾರಣ ಪ್ರಕರಣ ಒತ್ತಡ ಹೆಚ್ಚಿದೆ.
ಕಾಯಂ (ಪೂರ್ಣ) ಪೀಠ ಆರಂಭಿಸುವಂತೆ ತಾಲ್ಲೂಕಿನ ನ್ಯಾಯವಾದಿಗಳು ಹಾಗೂ ವಕೀಲರ ಸಂಘದ ಪದಾಧಿಕಾರಿಗಳು ಹಲವಾರು ಬಾರಿ ಸರ್ಕಾರಕ್ಕೆ ಹಾಗೂ ಹೈಕೋರ್ಟ್ ನ್ಯಾಯಾಧೀಶರಿಗೆ ಮನವಿ ಸಲ್ಲಿಸಿದ್ದರೂ ಸಹ ಕಾಯಂ ಪೀಠ ಸ್ಥಾಪನೆ ನನೆಗುದಿಗೆ ಬಿದ್ದಿದೆ.
ಬಸವೇಶ್ವರ ವೃತ್ತದಲ್ಲಿ ಎಪಿಎಂಸಿ ಕಚೇರಿಯನ್ನು ಸಂಚಾರಿ ಪೀಠವನ್ನಾಗಿ ಪರಿವರ್ತನೆ ಮಾಡಲಾಗಿದೆ. ವಾರದಲ್ಲಿ ಎರಡು ದಿನ ಅಂದರೆ ಗುರುವಾರ ಮತ್ತು ಶುಕ್ರವಾರ ಮಾತ್ರ ಎರಡು ದಿನ ಸಂಚಾರಿ ಪೀಠದಲ್ಲಿ ಕಲಾಪಗಳು ನಡೆಯುತ್ತಿದ್ದು ಪ್ರತಿದಿನ 200 ರಿಂದ 300 ಕ್ಕೂ ಹೆಚ್ಚು ಪ್ರಕರಣಗಳು ನ್ಯಾಯದೀಶರ ಪೀಠದ ಮುಂದೆ ಬರುತ್ತಿದ್ದರಿಂದ ಸಂಚಾರಿ ಪೀಠಕ್ಕೆ ಒತ್ತಡ ಹೆಚ್ಚಿದೆ. ಪ್ರಕರಣಗಳು ನೆನೆಗುದಿಗೆ ಬಿಳತೋಡಗಿದ್ದು ಸಾರ್ವಜನಿಕರು ಪರದಾಡಬೇಕಾದ ಪರಿಸ್ಥಿತಿ ಬಂದಿದೆ.
ಮೂಲ ಸೌಕರ್ಯಗಳ ಕೊರತೆ: ಎಪಿಎಂಸಿಯಲ್ಲಿನ ಸಂಚಾರಿ ನ್ಯಾಯಾಲಯಕ್ಕೆ ಬರುವ ಸಾರ್ವಜನಿಕರಿಗೆ ಸರಿಯಾದ ಶೌಚಾಲಯದ ವ್ಯವಸ್ಥೆ ಇಲ್ಲದ ಕಾರಣ ಬಯಲಿನಲ್ಲಿ ಮೂತ್ರ ವಿಸರ್ಜನೆ ಮಾಡಬೇಕಾದ ಪರಿಸ್ಥಿತಿ ಇದೆ. ಮಹಿಳೆಯರಿಗೆ ಎಪಿಎಂಸಿಯಲ್ಲಿನ ಹಳೆಯ ಶೌಚಾಲಯವನ್ನು ಬಳಕೆ ಮಾಡಿಕೊಂಡಿದೆ.
ಶೆಡ್‌ನಲ್ಲಿ ವಕೀಲರ ಸಂಘ: ಸಂಚಾರಿ ಪೀಠದಲ್ಲಿ 80ಕ್ಕೂ ಹೆಚ್ಚು ವಕೀಲರು ಇದ್ದು ಅವರಿಗೆ ಸುಸಜ್ಜಿತ ಭವನ ಇಲ್ಲದ ಕಾರಣ ಎಪಿಎಂಸಿಯ ಶೆಡ್‌ವೊಂದರಲ್ಲಿಯೇ ತಾತ್ಕಾಲಿಕ ಸಂಘದ ಕಚೇರಿ ಆರಂಭಿಸಲಾಗಿದೆ.
ಮಳೆ ಬಂದರೆ ಶೆಡ್ ಸಂಪೂರ್ಣ ಸೂರುತ್ತದೆ. ವಕೀಲರ ಸಂಘದ ಕಚೇರಿ ಬೇಡಿಕೆ ಕಾಗದಲ್ಲಿಯೇ ಉಳಿದುಕೊಂಡಿದೆ.
ತಾಲ್ಲೂಕು ಕೇಂದ್ರವಾದ ಮಸ್ಕಿ ಪಟ್ಟಣದಲ್ಲಿ ಸಂಚಾರಿ ನ್ಯಾಯಪೀಠದ ಬದಲಾಗಿ ಪೂರ್ಣ ಪೀಠ ಸ್ಥಾಪಿಸಲು ಸರ್ಕಾರ ಹಾಗೂ ಹೈಕೋರ್ಟ್ ಗಮನ ಹರಿಸಲಿ. ಇದರಿಂದ ಪ್ರಕರಣಗಳು ಬೇಗ ಇತ್ಯರ್ಥವಾಗುತ್ತವೆಈಶಪ್ಪ ದೇಸಾಯಿ ವಕೀಲ
ಪಟ್ಟಣದಲ್ಲಿ ಕಾಯಂ ಪೀಠಕ್ಕಾಗಿ ಬೇಕಾದ 10 ಎಕರೆ ಭೂಮಿಯನ್ನು ನೀರಾವರಿ ನಿಗಮ ನ್ಯಾಯಾಲಯಕ್ಕೆ ನೀಡಲು ಮುಂದೆ ಬಂದಿದೆ. ಈಗಾಗಲೇ ಭೂಮಿ ಹಸ್ತಾಂತರ ಪ್ರಕ್ರಿಯೆ ಸರ್ಕಾರದ ಮಟ್ಟದಲ್ಲಿದ್ದು ವೇಗ ಪಡೆಯಬೇಕಾಗಿದೆರಾಮಣ್ಣ ದೀನಸಮುದ್ರ ವಕೀಲ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.