ಮಸ್ಕಿ: ಇಲ್ಲಿನ ಪುರಸಭೆ ಬಾಕಿ ತೆರಿಗೆ ವಸೂಲಿ ಕಾರ್ಯ ಚುರುಕುಗೊಳಿಸಿದೆ.
ಪುರಸಭೆ ಮುಖ್ಯಾಧಿಕಾರಿ ಆಗಿ ಅಧಿಕಾರ ವಹಿಸಿಕೊಂಡಿರುವ ಪ್ರೊಬೇಷನರಿ ಐಎಎಸ್ ಅಧಿಕಾರಿ ಪುರುರಾಜಸಿಂಗ್ ಸೋಲಂಕಿ ಬಾಕಿ ತೆರಿಗೆ ವಸೂಲಿಗೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದರು. ಈ ಹಿನ್ನೆಲೆಯಲ್ಲಿ ಪುರಸಭೆ ಸಿಬ್ಬಂದಿ ಮನೆ ಮನೆಗೆ ತೆರಳಿ ತೆರಿಗೆ ಸಂಗ್ರಹ ಮಾಡುತ್ತಿದ್ದಾರೆ.
ಪುರಸಭೆ ಮುಖ್ಯಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಪುರುರಾಜಸಿಂಗ್ ಸೋಲಂಕಿ ತಿಂಗಳಲ್ಲಿ ₹51.50 ಲಕ್ಷ ತೆರಿಗೆ ವಸೂಲಿ ಮಾಡಿಸಿದ್ದಾರೆ. ಇದರಲ್ಲಿ ₹ 46 ಲಕ್ಷ ಆಸ್ತಿ ಹಾಗೂ ₹ 5.50 ಲಕ್ಷ ನಳದ ಕರ ಸೇರಿದೆ.
ಹತ್ತಾರು ವರ್ಷಗಳಿಂದ ತೆರಿಗೆ ಪಾವತಿ ಮಾಡದೇ ಇದ್ದ ಕೆಲವರು ಪುರಸಭೆಯಿಂದ ನೋಟಿಸ್ ಬರುತ್ತದೆ ಎಂದು ಹೆದರಿ ಸ್ವ–ಇಚ್ಚೆಯಿಂದ ಬಾಕಿ ತೆರಿಗೆ ಪಾವತಿ ಮಾಡುತ್ತಿರುವುದು ಕಂಡು ಬಂದಿದೆ. ಉದ್ಯಮಿಯೊಬ್ಬರು ₹ 13 ಲಕ್ಷ ತೆರಿಗೆ ಪಾವತಿ ಮಾಡಿದ್ದು ಇದಕ್ಕೆ ಸಾಕ್ಷಿಯಂತಿದೆ.
ಪುರಸಭೆ ಸಿಬ್ಬಂದಿಯೊಂದಿಗೆ ಸ್ವತಃ ಪುರುರಾಜಸಿಂಗ್ ಸೋಲಂಕಿ ಅವರೂ ಮನೆ ಮನೆಗೆ ತೆರಳಿ ತೆರಿಗೆ ಸಂಗ್ರಹ ಮಾಡುತ್ತಿದ್ದು ಕಂಡು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪುರಸಭೆಗೆ ತೆರಿಗೆ ಕಟ್ಟದಿರುವವರಿಗೆ ನೋಟಿಸ್ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಒಂದೆರಡು ದಿನಗಳಲ್ಲಿ ಸಂಬಂಧಪಟ್ಟವರಿಗೆ ನೋಟಿಸ್ ತಲುಪಲಿದೆ ಎಂದು ಪುರಸಭೆ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.
ಪಾದಚಾರಿ ಮಾರ್ಗ ಒತ್ತುವರಿ ತೆರವು
ಪಟ್ಟಣದ ಅಶೋಕ ವೃತ್ತದಿಂದ ಬಸವೇಶ್ವರ ವೃತ್ತದವರೆಗೆ ಪಾದಚಾರಿ ಮಾರ್ಗದ ಮೇಲೆ ಇಡಲಾಗಿದ್ದ ಡಬ್ಬಾ ಅಂಗಡಿಗಳನ್ನು ತೆರವುಗೊಳಿಸುವಲ್ಲಿ ಪುರುರಾಜಸಿಂಗ್ ಸೋಲಂಕಿ ಅವರು ಯಶಸ್ವಿಯಾಗಿದ್ದಾರೆ. ರಸ್ತೆಯ ಎರಡೂ ಬದಿಯ ಗ್ರಿಲ್ ಸೇರಿದಂತೆ ಎಲ್ಲೆಂದರಲ್ಲಿ ಅನಧಿಕೃತವಾಗಿ ಬ್ಯಾನರ್ ಕಟೌಟ್‌ಗಳನ್ನು ಕಟ್ಟಿ ಪಟ್ಟಣದ ಸೌಂದರ್ಯ ಹಾಳು ಮಾಡುತ್ತಿರುವುದಕ್ಕೆ ಇದೀಗ ಕಡಿವಾಣ ಬಿದ್ದಿದೆ. ಹಳೆ ಬಸ್ ನಿಲ್ದಾಣದಿಂದ ವಾಹನ ನಿಲುಗಡೆಯನ್ನು ಅಶೋಕ ವೃತ್ತಕ್ಕೆ ಸ್ಥಳಾಂತರಿಸುವ ಮೂಲಕ ವಾಹನ ದಟ್ಟಣೆಗೆ ಕಡಿವಾಣ ಹಾಕಲಾಗಿದೆ. ಬೀದಿಬದಿ ವ್ಯಾಪಾರಿಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ಇದರಿಂದ ಅನುಕೂಲವಾಗಿದೆ ಎನ್ನುತ್ತಾರೆ ಸಾರ್ವಜನಿಕರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.