ಸಿರವಾರ: ತಾಲ್ಲೂಕಿನ ನವಲಕಲ್ಲು ಬೃಹನ್ಮಠದ ಲಿಂಗೈಕ್ಯ ಸೋಮಶೇಖರ ಶಿವಾಚಾರ್ಯರ 27ನೇ ಜಾತ್ರಾ ಮಹೋತ್ಸವ ಮತ್ತು ಮಯೂರ ಶಿಲೆ ನಾಡೋತ್ಸವದ ಅಂಗವಾಗಿ ಮಠದಲ್ಲಿ ಮಾರ್ಚ್ 15 ರಿಂದ ಮಾರ್ಚ್ 17 ರವರೆಗೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ ಎಂದು ನವಲಕಲ್ಲು ಬೃಹನ್ಮಠದ ಅಭಿನವಶ್ರೀ ಸೋಮನಾಥ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ನವಲಕಲ್ಲು ಬೃಹನ್ಮಠದ ಶಾಖಾಮಠದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು, ಮಾ15 ರಂದು ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ, ಸೇರಿದಂತೆ ವಿವಿಧ ಮನೋರಂಜನಾ ಕಾರ್ಯಕ್ರಮಗಳು, ಸಂಜೆ ರಾಜ್ಯ ಮಟ್ಟದ ಪುರುಷರ ಮುಕ್ತ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ನಡೆಯಲಿದೆ. ಮಾ.16 ರಂದು ಕಿಲಾರಿ ಎತ್ತುಗಳು ಮತ್ತು ಇತರೆ ತಳಿಯ ಎತ್ತುಗಳಿಂದ ಪ್ರತ್ಯೇಕವಾಗಿ ಭಾರ ಎಳೆಯುವ ಸ್ಪರ್ಧೆಗಳು ನಡೆಯಲಿವೆ. ಸ್ಥಳೀಯ ಖಾಸಗಿ ಆಯುಷ್ ವೈದ್ಯರಿಂದ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ, ರಕ್ತದಾನ ಶಿಬಿರ ನಡೆಯಲಿದೆ. ಸಂಜೆ 4 ಗಂಟೆಯಿಂದ ಕಾಶಿ ಪೀಠದ ನೂತನ ಜಗದ್ಗುರು ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಭಗವತ್ಪಾದಕರ ಅಡ್ಡಪಲ್ಲಕ್ಕಿ ಉತ್ಸವ ನಡೆಯಲಿದ್ದು, ಸಂಜೆ ಉಚ್ಛಾಯ ಮಹೋತ್ಸವ, ನಂತರ ಕಾಶಿ ಜಗದ್ಗುರು ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಭಗವತ್ಪಾದಕರ ಸಾನ್ನಿಧ್ಯದಲ್ಲಿ ಸಂಜೆ 7 ಗಂಟೆಯಿಂದ ಧರ್ಮ ಸಭೆ ನಡೆಯಲಿದೆ ಎಂದರು.
ನೀಲಗಲ್ ಬೃಹನ್ಮಠದ ಪಂಚಾಕ್ಷರಿ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಮಾ.17ಕ್ಕೆ ಬೆಳಿಗ್ಗೆ ಜಂಗಮ ವಟುಗಳಿಗೆ ಅಯ್ಯಾಚಾರ ದೀಕ್ಷೆ ಶಾಂಭವಿ ದೇವಿ ಮೂರ್ತಿ, ಲಿಂಗೈಕ್ಯ ಶ್ರೀಗಳ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ಸೇರಿದಂತೆ ವಿವಿಧ ಪೂಜಾ ಕಾರ್ಯಕ್ರಮಗಳು ನಡೆಯಲಿವೆ. ಮಧ್ಯಾಹ್ನ 65 ಜೋಡಿಗಳ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಹಾಗೂ ಧರ್ಮಸಭೆ ನಡೆಯಲಿದೆ. ಸಂಜೆ 7 ಕ್ಕೆ ಮಹಾರಥೋತ್ಸವ ನಡೆಯಲಿದ್ದು, ನಂತರ ಸಂಗೀತ ಸಂಜೆ ಕಾರ್ಯಕ್ರಮ ನಡೆಯಲಿದೆ. ಮಾ18 ಮತ್ತು 20 ರಂದು ವಾಲಿ ಸುಗ್ರೀವ ಎಂಬ ಬಯಲು ನಾಟಕ ನಡೆಯುತ್ತವೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.