ADVERTISEMENT

ನಿರುದ್ಯೋಗಿ ಯುವಕರ ದುರ್ಬಳಕೆ: ಆರ್.ರುದ್ರಯ್ಯ

ಪರಿವರ್ತನಾ ರ‍್ಯಾಲಿಯಲ್ಲಿ ಕಾಂಗ್ರೆಸ್‌ ಮುಖಂಡ ಆರ್‌. ರುದ್ರಯ್ಯ ಆರೋಪ

​ಪ್ರಜಾವಾಣಿ ವಾರ್ತೆ
Published 18 ಜನವರಿ 2023, 6:39 IST
Last Updated 18 ಜನವರಿ 2023, 6:39 IST
ಲಿಂಗಸುಗೂರಲ್ಲಿ ಮಂಗಳವಾರ ಕಾಂಗ್ರೆಸ್ ಆಕಾಂಕ್ಷಿ ಅಭ್ಯರ್ಥಿ ಆರ್.ರುದ್ರಯ್ಯ ನೇತೃತ್ವದಲ್ಲಿ ಆಯೋಜಿಸಿದ್ದ ಪರಿವರ್ತನಾ ರ‍್ಯಾಲಿಯನ್ನು ಕಾಂಗ್ರೆಸ್ ಜಿಲ್ಲಾ ಮಹಿಳಾ ಘಟಕ ಅಧ್ಯಕ್ಷೆ ನಾಗವೇಣಿ ಪಾಟೀಲ ಉದ್ಘಾಟಿಸಿದರು
ಲಿಂಗಸುಗೂರಲ್ಲಿ ಮಂಗಳವಾರ ಕಾಂಗ್ರೆಸ್ ಆಕಾಂಕ್ಷಿ ಅಭ್ಯರ್ಥಿ ಆರ್.ರುದ್ರಯ್ಯ ನೇತೃತ್ವದಲ್ಲಿ ಆಯೋಜಿಸಿದ್ದ ಪರಿವರ್ತನಾ ರ‍್ಯಾಲಿಯನ್ನು ಕಾಂಗ್ರೆಸ್ ಜಿಲ್ಲಾ ಮಹಿಳಾ ಘಟಕ ಅಧ್ಯಕ್ಷೆ ನಾಗವೇಣಿ ಪಾಟೀಲ ಉದ್ಘಾಟಿಸಿದರು   

ಲಿಂಗಸುಗೂರು:‘ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ನಿರುದ್ಯೋಗಿಗಳಿಗೆ ಉದ್ಯೋಗ ಸೃಷ್ಟಿಸುವ ಕಾರ್ಯ ನಡೆದಿಲ್ಲ. ಬಹುತೇಕ ರಾಜಕಾರಣಿಗಳು ನಿರುದ್ಯೋಗಿಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ’ ಎಂದು ಕಾಂಗ್ರೆಸ್‍ ಆಕಾಂಕ್ಷಿ ಅಭ್ಯರ್ಥಿ ಆರ್.ರುದ್ರಯ್ಯ ಆರೋಪಿಸಿದರು.

ಮಂಗಳವಾರ ಪರಿವರ್ತನಾ ರ‍್ಯಾಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಕೌಶಲ ಮತ್ತು ವೃತ್ತಿ ತರಬೇತಿ ಶಿಕ್ಷಣಕ್ಕೆ ಆದ್ಯತೆ ನೀಡುವಲ್ಲಿ ಈ ಹಿಂದೆ ಆಡಳಿತ ನಡೆಸಿರುವ ಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಲಿಂಗಸುಗೂರು ಕ್ಷೇತ್ರದಲ್ಲಿ ಮತದಾರ ಬಾಂಧವರು ಆಶೀರ್ವಾದ ಮಾಡಬೇಕು. ಗೆಲವು ಸಾಧಿಸಿದರೆ, ಕ್ಷೇತ್ರದಲ್ಲಿ ಶೈಕ್ಷಣಿಕ, ನಿರುದ್ಯೋಗ ಮತ್ತು ಸಮಗ್ರ ನೀರಾವರಿ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸುವೆ’ ಎಂದು ಭರವಸೆ ನೀಡಿದರು.

‘ಸ್ವಾತಂತ್ರ್ಯ ನಂತರದಲ್ಲಿ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ್ದ ಭಾರತದ ಶ್ರೆಯೋಭಿವೃದ್ಧಿಗೆ ಭಾರತೀಯ ಕಾಂಗ್ರೆಸ್‍ ಮಹಾನ್‍ ಕೊಡುಗೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಂದಲೆ ರಾಷ್ಟ್ರದ ಅಭಿವೃದ್ಧಿ ಎಂದು ಬಿಂಬಿಸುತ್ತಿರುವ ಬಿಜೆಪಿ ಐತಿಹಾಸಿಕ ಪುಟಗಳನ್ನು ತಿರುವಿ ನೋಡಬೇಕು. ರಾಷ್ಟ್ರ ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ನಿರುದ್ಯೋಗ ನಿವಾರಣೆ, ಶೈಕ್ಷಣಿಕ ಅಭಿವೃದ್ಧಿ, ಬಡತನ ನಿವಾರಣೆಯಂತ ಮಹತ್ವಾಕಾಂಕ್ಷಿ ಯೋಜನೆಗಳಿಗೆ ಆದ್ಯತೆ ನೀಡಬೇಕು’ ಎಂದರು.

ADVERTISEMENT

ಮಹಿಳಾ ಕಾಂಗ್ರೆಸ್‍ ಜಿಲ್ಲಾ ಘಟಕ ಅಧ್ಯಕ್ಷೆ ನಾಗವೇಣಿ ಪಾಟೀಲ, ಮುಖಂಡರಾದ ಎಸ್‍.ಆರ್.ರಸೂಲ, ಸಂಗಣ್ಣ ಬಯ್ಯಾಪುರ, ಶರಣಪ್ಪ ಮೇಟಿ ಚಿಕ್ಕಹೆಸರೂರು, ರಮೇಸ ಗೋಸ್ಲೆ, ನಾಗನಗೌಡ ತುರಡಗಿ ಮಾತನಾಡಿ, ‘ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್‍ ಪಕ್ಷಗಳ ಆಡಳಿತದಿಂದ ಜನತೆ ರೋಸಿ ಹೋಗಿದ್ದಾರೆ. ಕಾಂಗ್ರೆಸ್‍ ಅನಿವಾರ್ಯ ಎಂಬ ವಾತಾವರಣ ಸೃಷ್ಟಿಗೊಂಡಿದ್ದು ಸ್ಥಳೀಯ ವಿಧಾನಸಭಾ ಕ್ಷೇತ್ರದಲ್ಲಿ ಆರ್‌.ರುದ್ರಯ್ಯ ಯಾತ್ರೆ ಪ್ರತಿಪಕ್ಷಗಳಲ್ಲಿ ನಡುಕು ಹುಟ್ಟಿಸಿದೆ’ ಎಂದು ಹೇಳಿದರು.

ಕಾಂಗ್ರೆಸ್‍ ಸೇರ್ಪಡೆ: ಸ್ಥಳೀಯ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ಪ್ರದೇಶದ ಯುವಕರು, ವಯೋವೃದ್ಧರು, ಮಹಿಳೆಯರು ಜೆಡಿಎಸ್‍ ಮತ್ತು ಬಿಜೆಪಿ ತೊರೆದು ತಂಡೋಪ ತಂಡವಾಗಿ ಕಾಂಗ್ರೆಸ್‍ ಪಕ್ಷಕ್ಕೆ ಸೇರ್ಪಡೆಗೊಂಡರು.

ಈ ಮುಂಚೆ ಗಡಿಯಾರ ವೃತ್ತ ದೊಡ್ಡಹನುಮಂತ ದೇವರಿಗೆ ಪೂಜೆ ಸಲ್ಲಿಸಿ ಪರಿವರ್ತನಾ ರ‍್ಯಾಲಿ ಆರಂಭಗೊಂಡಿತು. ಕಾರ್ಯಕ್ರಮದ ಆರಂಭದಲ್ಲಿ ಲಿಂಗೈಕ್ಯ ಸಿದ್ದೇಶ್ವರ ಸ್ವಾಮೀಜಿ ಅವರಿಗೆ ಮೌನಾಚರಣೆ ಮೂಲಕ ಗೌರವ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮಾಜಿ ಅಧ್ಯಕ್ಷ ಆರ್.ಎಸ್‍. ನಾಡಗೌಡ್ರ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಶಾಂತಮ್ಮ ಮುದಗಲ್ಲ, ಎನ್.ಬಸವರಾಜ, ಮಾಧವ ನೆಲೊಗಿ, ಬಸನಗೌಡ ಪಾಟೀಲ, ಜಂಬನಗೌಡ ಕಾಚಾಪುರ, ಲಕ್ಷ್ಮಣ ರಾಠೋಡ, ಅನೀಸ್‍ಪಾಷ, ಫಯಾಜಅಹ್ಮದ, ಕೇಶವರೆಡ್ಡಿ, ಲಿಂಗಪ್ಪ ಪರಂಗಿ, ಕಾಶಿಪತಿ ಆನ್ವರಿ, ಪ್ರಭು ಹವಾಲ್ದಾರ, ಬಸಲಿಂಗಪ್ಪ ಐದನಾಳ, ಶ್ರೀಶೈಲ ಅಂಗಡಿ, ಪಿಡ್ಡನಗೌಡ ಈಚನಾಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.