ADVERTISEMENT

ಮುದಗಲ್: ಕುಡಿಯುವ ನೀರಿಗಾಗಿ ಶಾಸಕರಿಗೆ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 10 ಮೇ 2025, 14:23 IST
Last Updated 10 ಮೇ 2025, 14:23 IST
ಕುಡಿಯುವ ನೀರಿಗಾಗಿ ಶಾಸಕ ಮಾನಪ್ಪ ವಜ್ಜಲಗೆ ಮುದಗಲ್ ಪಟ್ಟಣದ ನಾಗರಿಕರು ಮುತ್ತಿಗೆ ಹಾಕಿದರು
ಕುಡಿಯುವ ನೀರಿಗಾಗಿ ಶಾಸಕ ಮಾನಪ್ಪ ವಜ್ಜಲಗೆ ಮುದಗಲ್ ಪಟ್ಟಣದ ನಾಗರಿಕರು ಮುತ್ತಿಗೆ ಹಾಕಿದರು   

ಮುದಗಲ್: ಪಟ್ಟಣಕ್ಕೆ ನಿರಂತರ ಕುಡಿಯುವ ನೀರಿನ ಸೌಲಭ್ಯಕ್ಕಾಗಿ ಲಿಂಗಸುಗೂರು ಶಾಸಕ ಮಾನಪ್ಪ ವಜ್ಜಲ ಅವರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಪಟ್ಟಣದ ಪುರಸಭೆಯ 15ನೇ ಹಣಕಾಸು ಯೋಜನೆಯ ಅಡಿಯಲ್ಲಿ ಖರೀದಿಸಿದ 6 ಆಟೊ ಟಿಪ್ಪರ್ 1 ಟ್ರ್ಯಾಕ್ಟರ್ ಉದ್ಘಾಟನೆಗೆ ಆಗಮಿಸಿದ ವೇಳೆ ಡಿಎಸ್‌ಎಸ್ ಪದಾಧಿಕಾರಿಗಳು ಮುತ್ತಿಗೆ ಹಾಕಿ ಪ್ರತಿಭಟನೆ ಮಾಡುವ ವೇಳೆ ಮಾತಿನ ಚಕಮಕಿ ನಡೆಯಿತು.

ದಲಿತ ಸಂಘಟನೆ ಮುಖಂಡರಾದ ಶರಣಪ್ಪ ಕಟ್ಟಿಮನಿ, ಬಸವರಾಜ ಬಂಕದಮನಿ, ಕೃಷ್ಣಾ ಚಲುವಾದಿ ಅವರು ನೀರಿನ ಸಮಸ್ಯೆ ಪರಿಹಾರ ಮಾಡಿ ವಾಹನಗಳ ಉದ್ಘಾಟನೆ ಮಾಡಿ ಎಂದು ಪಟ್ಟು ಹಿಡಿದರು. ಶಾಸಕರಾಗಿ 2 ವರ್ಷ ಕಳೆಯಿತು. ನೀರಿನ ಸಮಸ್ಯೆ ಪರಿಹಾರ ಆಗಿಲ್ಲ. ಮುದಗಲ್ ಪಟ್ಟಣಕ್ಕೆ 16 ದಿನಗಳಿಗೊಮ್ಮೆ ನೀರು ಸರಬರಾಜುವಾಗುತ್ತಿದೆ. ನೀರಿನ ಸಮಸ್ಯೆಗೆ ಯಾವ ಕ್ರಮ ತೆಗೆದುಕೊಂಡಿರಿ ಎಂದು ಪ್ರಶ್ನಿಸಿದರು.

ADVERTISEMENT

ನೀರಿನ ಸಮಸ್ಯೆ ಪರಿಹಾರ ಮಾಡಿಕೊಡಿ ಎಂದು ಶಾಸಕರಿಗೆ ಕೇಳಿದರೆ ಶಾಸಕರ ಹಿಂಬಾಲಕರು ಹಾಗೂ ಸಂಘಟನೆಕಾರ ಮಧ್ಯೆ ಮಾತಿನ ಚಕಮಕಿ ನಡೆಯಿತು. ವಿಧಾನ ಪರಿಷತ್ ಸದಸ್ಯ ಶರಣಗೌಡ ಪಾಟೀಲ ಬಯ್ಯಾಪುರ ಮಧ್ಯೆಪ್ರವೇಶಿಸಿ ವಾತವರಣ ತಿಳಿಗೊಳಿಸಿದರು.

ಮಾತಿನ ಚಕಮಕಿ ನಡೆದರೂ ಪುರಸಭೆ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಮೂಕ ಪ್ರೇಕ್ಷಕರಾಗಿ ನಿಂತು ನೋಡುತ್ತಿದ್ದರು.

ನಂತರ ಕಸ ವಿಲೇವಾರಿ ವಾಹನಗಳಿಗೆ ಶಾಸಕ ಮಾನಪ್ಪ ಚಾಲನೆ ನೀಡಿ ಮಾತನಾಡಿದರು. 3 ತಿಂಗಳಲ್ಲಿ ಅಮೃತ ಯೋಜನೆಯಡಿಯಲ್ಲಿ ಮುದಗಲ್ ಪಟ್ಟಣಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಮಾಡುತ್ತೇನೆ ಎಂದರು.

ಗ್ಯಾರಂಟಿ ಯೋಜನೆಗಳ ಜಿಲ್ಲಾ ಘಟಕದ ಅಧ್ಯಕ್ಷ ಪಾಮಯ್ಯ ಮುರಾರಿ, ಪುರಸಭೆ ಸದಸ್ಯ ಮಹೆಬೂಬ್ ಕಡ್ಡಿಪುಡಿ, ಅಮೀನ ಬೇಗಂ ಬಾರಿಗಿಡದ್, ರಾಬೀಯಾ ಬೇಗಂ, ಮುಖಂಡ ಉದಯ ಕುಮಾರ ಕಮ್ಮಾರ, ಕರಿಯಪ್ಪ ಯಾದವ, ತಾಲ್ಲೂಕು ಪಂಚಾಯಿತಿ ಕೆಡಿಪಿ ಸದಸ್ಯ ರಾಘವೇಂದ್ರ ಕುದುರಿ, ತಮ್ಮಣ್ಣ ಗುತ್ತೇದಾರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.