ADVERTISEMENT

ಬಾಲಕರಿಂದ ಮೊಬೈಲ್ ಕಳ್ಳತನ: ಜಾಲ ಸೆರೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2020, 12:08 IST
Last Updated 2 ಮಾರ್ಚ್ 2020, 12:08 IST

ರಾಯಚೂರು: ಜಿಲ್ಲೆಯಲ್ಲಿ ಆರು ಬಾಲಕರ ಮೂಲಕ ನಿತ್ಯ ಮೊಬೈಲ್ ಕಳ್ಳತನ ಮಾಡಿಸುತ್ತಿದ್ದ ತೆಲಂಗಾಣ ರಾಜ್ಯದ ಕಳ್ಳರ ಜಾಲ ಭೇದಿಸಿರುವ ಮಾನ್ವಿ ವೃತ್ತದ ಪೊಲೀಸರು, ಆರು ಬಾಲಕರು ಸೇರಿ‌ ಎಂಟು ಆರೋಪಿಗಳನ್ನು ಬಂಧಿಸಿದ್ದಾರೆ.

ಹೈದರಾಬಾದ್ ಸಮೀಪ ಪೆದ್ದಪಲ್ಲಿಯ ಮುರಳಿ ಶ್ರೀನಿವಾಸ, ಲಿಂಗಂಪಲ್ಲಿಯ ಕಿರಣರಾಜು ಬಂಧಿತ ಪ್ರಮುಖ ಆರೋಪಿಗಳು. ಬಂಧಿತರಿಂದ ₹5.74 ಲಕ್ಷ ಮೌಲ್ಯದ 115 ಮೊಬೈಲ್ ಗಳು, ₹4 ಲಕ್ಷ ಮೌಲ್ಯದ ಕಾರು ಹಾಗೂ ₹55 ಸಾವಿರ ಮೌಲ್ಯದ ಮೂರು ಬೈಕ್ ಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ.

ಸಿರವಾರ ಬಸ್ ನಿಲ್ದಾಣದ ಹತ್ತಿರ ಹೂವಿನ ಅಂಗಡಿ‌ ಮುಂದೆ ನಿಂತುಕೊಂಡಿದ್ದಾಗ ₹22 ಸಾವಿರ ಮೌಲ್ಯದ ಮೊಬೈಲ್ ಕಳ್ಳತನವಾಗಿದೆ ಎಂದು ಪಟ್ಟಣದ ನಿವಾಸಿ ರಂಗಣ್ಣ ನಾಯಕ ಅವರು ಭಾನುವಾರ ಸ್ಥಳೀಯ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ದೂರು ಆದರಿಸಿ ಪೊಲೀಸರು ಸೋಮವಾರ ಬಸ್ ನಿಲ್ದಾಣ ಆವರಣದಲ್ಲಿ ನಿಗಾ ವಹಿಸಿದಾಗ, ಬಾಲಕನೊಬ್ಬ ಸಿಕ್ಕಿಬಿದ್ದ. ಆತನನ್ನು ವಿಚಾರಿಸಿದಾಗ ಮೊಬೈಲ್ ಕಳ್ಳರ ಜಾಲ ಬೆಳಕಿಗೆ ಬಂದಿದೆ.

ADVERTISEMENT

ಸಿರವಾರ, ನೀರಮಾನ್ವಿ, ಕವಿತಾಳ‌ ಹಾಗೂ ಅರಕೇರಾದಲ್ಲಿ ಒಟ್ಟು ಆರು ಬಾಲಕರು ಕಳ್ಳತನ ಮಾಡುತ್ತಿರುವುದಾಗಿ ಬಾಲಕ ಬಾಯ್ಬಿಟ್ಟಿದ್ದಾನೆ. ಈ ಕೆಲಸ ಮಾಡುವುದಕ್ಕೆ ಪ್ರಮುಖ ಆರೋಪಿಗಳಿಬ್ಬರು ಬಾಲಕರಿಗೆ ತಲಾ ದಿನಕ್ಕೆ ₹ 100 ಊಟಕ್ಕಾಗಿ ಕೊಡುತ್ತಿದ್ದರು.

ಬಾಲಕ ನೀಡಿದ ಸುಳಿವು ಆಧರಿಸಿ, ಲಿಂಗಸುಗೂರು ತಾಲ್ಲೂಕಿನ ಯರಗಲದಿನ್ನಿ ಗ್ರಾಮದಲ್ಲಿ ಬಾಡಿಗೆ ಮನೆಮಾಡಿಕೊಂಡಿದ್ದ ಆರೋಪಿಗಳೆಲ್ಲರನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ. ವೇದಮೂರ್ತಿ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.