ADVERTISEMENT

ನೀರಾವರಿ ತಾಲ್ಲೂಕಿನಲ್ಲೆ ಹೆಚ್ಚು ಆತ್ಮಹತ್ಯೆ

ರಾಯಚೂರು ತಾಲ್ಲೂಕಿನ ರೈತರ ಆತ್ಮಸ್ಥೈರ್ಯ ಮಾದರಿ

ನಾಗರಾಜ ಚಿನಗುಂಡಿ
Published 16 ಜನವರಿ 2019, 13:46 IST
Last Updated 16 ಜನವರಿ 2019, 13:46 IST
ಸಿಂಧನೂರು ತಾಲ್ಲೂಕಿನಲ್ಲಿ ಹರಿಯುವ ಟಿಎಲ್‌ಬಿಸಿ ಕಾಲುವೆಯ ಒಂದು ನೋಟ 
ಸಿಂಧನೂರು ತಾಲ್ಲೂಕಿನಲ್ಲಿ ಹರಿಯುವ ಟಿಎಲ್‌ಬಿಸಿ ಕಾಲುವೆಯ ಒಂದು ನೋಟ    

ರಾಯಚೂರು: ಸತತ ಬರಗಾಲ ಹಾಗೂ ಬೆಳೆಹಾನಿಯಿಂದ ಜಿಲ್ಲೆಯ ಬಹುತೇಕ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಸಾಲಬಾಧೆ ಸಹಿಸಲಾಗದೆ ಕಳೆದ ಒಂಭತ್ತು ತಿಂಗಳಲ್ಲಿ 24 ರೈತರು ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ.

ಗಮನಾರ್ಹ ಸಂಗತಿಯೆಂದರೆ, ತುಂಗಭದ್ರಾ ಎಡದಂಡೆ ಕಾಲುವೆ (ಟಿಎಲ್‌ಬಿಸಿ) ಅಚ್ಚುಕಟ್ಟಿನ ಪ್ರದೇಶವಿರುವ ಸಿಂಧನೂರು ಮತ್ತು ಮಾನ್ವಿ ತಾಲ್ಲೂಕುಗಳ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು. ಮಳೆಯಿಲ್ಲದೆ ಜಾನುವಾರುಗಳಿಗೂ ಮೇವು ಬೆಳೆಯದ ಪರಿಸ್ಥಿತಿ ಇರುವ ರಾಯಚೂರು ತಾಲ್ಲೂಕು ಮತ್ತು ಅತಿ ಹಿಂದುಳಿದ ತಾಲ್ಲೂಕು ದೇವದುರ್ಗದ ರೈತರು ಸಂಕಷ್ಟದ ಪರಿಸ್ಥಿತಿಯನ್ನು ಆತ್ಮಸ್ಥೈರ್ಯದಿಂದ ಎದುರಿಸುತ್ತಿರುವುದು ನಿಜಕ್ಕೂ ಮಾದರಿ.

ಜಿಲ್ಲೆಯ ತಾಲ್ಲೂಕುಗಳಿಗೆ ಹೋಲಿಕೆ ಮಾಡಿದರೆ; ಸಿಂಧನೂರು ತಾಲ್ಲೂಕಿನಲ್ಲಿ 30,378 ಅತಿಹೆಚ್ಚು ರೈತರು ಬೆಳೆಸಾಲ ಪಡೆದಿದ್ದಾರೆ. ಮಾನ್ವಿ ತಾಲ್ಲೂಕಿನಲ್ಲೂ 27,126 ರೈತರು ಬೆಳೆಸಾಲ ಪಡೆದಿದ್ದು, ರಾಯಚೂರು ತಾಲ್ಲೂಕಿಗಿಂತ 79 ರಷ್ಟು ಹೆಚ್ಚಿನ ಸಂಖ್ಯೆಯಲ್ಲಿ ರೈತರು ಸಾಲ ಪಡೆದಿದ್ದಾರೆ. ಲಿಂಗಸುಗೂರು ತಾಲ್ಲೂಕಿನಲ್ಲಿ ಬೆಳೆಸಾಲ ಪಡೆದಿರುವ ರೈತರು 18,297 ಅತಿ ಕಡಿಮೆ ಸಂಖ್ಯೆಯಲ್ಲಿದ್ದಾರೆ. ಆತ್ಮಹತ್ಯೆಗೆ ಮಾಡಿಕೊಂಡ ರೈತರ ಹೆಸರಿನಲ್ಲಿ ಬ್ಯಾಂಕ್‌ ಸಾಲ ಮತ್ತು ಲೇವಾದೇವಿ ಸಾಲ ಇತ್ತು.

ADVERTISEMENT

2018 ರ ಏಪ್ರಿಲ್‌ 1 ರಿಂದ ಡಿಸೆಂಬರ್‌ 31 ರವರೆಗೂ ಸಿಂಧನೂರು ಮತ್ತು ಮಾನ್ವಿ ತಾಲ್ಲೂಕುಗಳಲ್ಲಿ ತಲಾ ಒಂಭತ್ತು ರೈತರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳು ವರದಿಯಾಗಿವೆ. ಪ್ರತಿ ತಿಂಗಳು ಆಯಾ ತಾಲ್ಲೂಕಿನಲ್ಲಿ ಒಬ್ಬ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಲಿಂಗಸುಗೂರು ತಾಲ್ಲೂಕಿನಲ್ಲಿ ಮೂವರು ರೈತರು, ದೇವದುರ್ಗ ತಾಲ್ಲೂಕಿನಲ್ಲಿ ಇಬ್ಬರು ರೈತರು ಹಾಗೂ ರಾಯಚೂರು ತಾಲ್ಲೂಕಿನಲ್ಲಿ ಒಬ್ಬ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, 2019 ರ ಜನವರಿ ಎರಡೂ ವಾರಗಳಲ್ಲಿ ಜಿಲ್ಲೆಯಲ್ಲಿ ಮೂವರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್‌ ನಾಡಗೌಡ ಅವರ ತಾಲ್ಲೂಕು ಸಿಂಧನೂರಿನ ದೇವರಗುಡಿಯಲ್ಲಿ ಜನವರಿ 3 ರಂದು ಒಬ್ಬ ರೈತರು ಮತ್ತು ಜನವರಿ 14 ರಂದು ಜವಳಗೇರಾದಲ್ಲಿ ಒಬ್ಬ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಜಿಲ್ಲೆಯಲ್ಲಿ ನಡೆದ 24 ರೈತರ ಆತ್ಮಹತ್ಯೆ ಪ್ರಕರಣಗಳ ಪೈಕಿ, 13 ರೈತರ ಕುಟುಂಬಕ್ಕೆ ಈಗಾಗಲೇ ತಲಾ ₹5 ಲಕ್ಷ ಪರಿಹಾರ ನೀಡಲಾಗಿದೆ. ಎಂಟು ಪ್ರಕರಣಗಳನ್ನು ಇನ್ನೂ ಇತ್ಯರ್ಥ ಮಾಡಬೇಕಿದೆ. ಮೂರು ಪ್ರಕರಣಗಳು ತಿರಸ್ಕೃತ ಮಾಡಲಾಗಿದೆ ಎಂದು ಕೃಷಿ ಇಲಾಖೆಯು ನೀಡಿರುವ ವರದಿಯಲ್ಲಿ ತಿಳಿಸಲಾಗಿದೆ.

ಆತ್ಮಹತ್ಯೆ ಮಾಡಿಕೊಂಡ ರೈತರ ಮಕ್ಕಳಿಗೆ ಉಚಿತ ಶಿಕ್ಷಣ ಒದಗಿಸುವ ಕೆಲಸವನ್ನು ಮಾಡಲಾಗಿದೆ. ಒಟ್ಟು 18 ಮಕ್ಕಳು ಉಚಿತ ಶಿಕ್ಷಣ ಪಡೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.