ADVERTISEMENT

ಮಸ್ಕಿ: ರಂಗೇರುತ್ತಿರುವ ಪುರಸಭೆ ಚುನಾವಣೆ ಕಣ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2021, 12:02 IST
Last Updated 17 ಡಿಸೆಂಬರ್ 2021, 12:02 IST
ಮಸ್ಕಿಯಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್ ಸಭೆಯಲ್ಲಿ ಶಾಸಕ ಆರ್. ಬಸನಗೌಡ ಮಾತನಾಡಿದರು
ಮಸ್ಕಿಯಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್ ಸಭೆಯಲ್ಲಿ ಶಾಸಕ ಆರ್. ಬಸನಗೌಡ ಮಾತನಾಡಿದರು   

ಮಸ್ಕಿ: 27 ರಂದು ನಡೆಯುವ ಪುರಸಭೆ ಚುನಾವಣೆ ಪಟ್ಟಣದಲ್ಲಿ ರಂಗೇರುತ್ತಿದ್ದು ಸ್ಥಳೀಯ ಪುರಸಭೆ ಅಧಿಕಾರ ಹಿಡಿಯಲು ಕಾಂಗ್ರೆಸ್ ಹಾಗೂ ಬಿಜೆಪಿ ಕಸರತ್ತು ನಡೆಸಿವೆ. ನಾಮಪತ್ರ ಹಿಂಪಡೆಯಲು ಶನಿವಾರ ಕೊನೆ ದಿನವಾಗಿದ್ದು ಎರಡು ಪಕ್ಷಗಳ ಮುಖಂಡರು ಅಭ್ಯರ್ಥಿಗಳ ಹಾಗೂ ಮುಖಂಡರ ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ.

ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿ: ‘ಪುರಸಭೆಯ ಎಲ್ಲಾ ವಾರ್ಡ್‌ಗಳಿಗೆ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಮುಖಂಡರು ಹಾಗೂ ಕಾರ್ಯಕರ್ತರು ಶ್ರಮಿಸಬೇಕು‘ ಎಂದು ಶಾಸಕ ಆರ್. ಬಸನಗೌಡ ಕರೆ ನೀಡಿದರು.

ಪಟ್ಟಣದ ಬಸವೇಶ್ವರ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಕರೆಯಲಾಗಿದ್ದ ಅಭ್ಯರ್ಥಿಗಳ ಹಾಗೂ ಮುಖಂಡರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಬಡಾವಣೆಗಳ ಎಲ್ಲಾ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮನೆ ಮನೆಗೆ ಹೋಗಿ ಮತ ಕೇಳುವ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲುವ ಮೂಲಕ ಪುರಸಭೆ ಅಧಿಕಾರ ಹಿಡಿಯಲು ಶ್ರಮಿಸಬೇಕು ಎಂದರು.

ADVERTISEMENT

ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ ಯದ್ದಲದಿನ್ನಿ ಮಾತನಾಡಿ, ‘ಈ ಭಾರಿ ಪುರಸಭೆ ಅಧಿಕಾರ ಕಾಂಗ್ರೆಸ್ ವಶಕ್ಕೆ ಪಡೆಯಲು ಎಲ್ಲರೂ ಒಗ್ಗಟ್ಟಾಗಿ ಪ್ರಚಾರ ನಡೆಸಬೇಕು ಹಾಗೂ ಪ್ರತಿ ಮತದಾರರ ಮನೆ ಮನೆಗೆ ಹೋಗಿ ಮತ ಪಡೆಯಬೇಕು’ ಎಂದು ಸೂಚಿಸಿದರು.

ಗ್ರಾಮೀಣ ಬ್ಲಾಕ್ ಅಧ್ಯಕ್ಷ ಹನುಮಂತಪ್ಪ ಮುದ್ದಾಪೂರ, ಮುಖಂಡ ಸಿದ್ದಣ್ಣ ಹೂವಿನಭಾವಿ, ಕೆಪಿಸಿಸಿ ಕಾರ್ಯದರ್ಶಿ ಎಚ್. ಬಿ. ಮುರಾರಿ, ಶ್ರೀಶೈಲಪ್ಪ ಬ್ಯಾಳಿ, ಮೈಬೂಸಾಬ ಮುದ್ದಾಪೂರ. ನಿರುಪಾದೆಪ್ಪ ವಕೀಲ್, ಮಲ್ಲಯ್ಯ ಬಳ್ಳಾ, ಪಕ್ಷದ ಪ್ರಧಾನ ಕಾರ್ಯದರ್ಶಿ ಕೃಷ್ಣ ಡಿ. ಚಿಗರಿ, ವೆಂಕಟರೆಡ್ಡಿ ಹಾಲಾಪೂರ ಸೇರಿದಂತೆ ಪದಾಧಿಕಾರಿಗಳು, ಮುಖಂಡರು, ಅಭ್ಯರ್ಥಿಗಳು ಇದ್ದರು.

ಉಪ ಚುನಾವಣೆ ಕಹಿ ಮರೆಯಿರಿ: ಕಾರ್ಯಕರ್ತರು ಹಾಗೂ ಮುಖಂಡರು ಕಳೆದ ಉಪ ಚುನಾವಣೆಯ ಕಹಿ ಮರೆತು ಪುರಸಭೆ ಅಧಿಕಾರ ಹಿಡಿಯಲು ಶ್ರಮಿಸಬೇಕು‘ ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಕರೆ ನೀಡಿದರು.

ಪಟ್ಟಣದ ಬಸವೇಶ್ವರ ನಗರದ ಬಿಜೆಪಿ ಕಚೇರಿಯಲ್ಲಿ ಗುರುವಾರ ನಡೆದ ಮುಖಂಡರ ಹಾಗೂ ಅಭ್ಯರ್ಥಿಗಳ ಪೂರ್ವಭಾವಿ ಸಭೆ ಉದ್ದೇಶಿಸಿ ಮಾತನಾಡಿದ ಅವರು, ‘ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ಮಸ್ಕಿ ಪುರಸಭೆ ಹಾಗೂ ತುರ್ವಿಹಾಳ ಹಾಗೂ ಬಳಗಾನೂರಿಗೆ ಪಟ್ಟಣ ಪಂಚಾಯಿತಿ ತರಲಾಗಿದೆ. ಅದರ ಜೊತೆಗೆ ಸರ್ಕಾರದಿಂದ ಸಾಕಷ್ಟು ಅನುದಾನ ತಂದು ಈ ಮೂರು ಪಟ್ಟಣಗಳ ಅಭಿವೃದ್ಧಿಗೆ ಶ್ರಮಿಸಲಾಗಿದೆ’ ಎಂದರು.

ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದು ಪುರಸಭೆಯಲ್ಲಿಯೂ ಬಿಜೆಪಿ ಅಧಿಕಾರಕ್ಕೆ ಬಂದರೆ ಇನ್ನೂ ಸಾಕಷ್ಟು ಅನುದಾನ ತಂದು ಅಭಿವೃದ್ಧಿ ಕೆಲಸಗಳನ್ನು ಮಾಡಬಹುದು ಎಂದರು.

ಕಾರ್ಯಕರ್ತರು ಹಾಗೂ ಮುಖಂಡರು ಎಲ್ಲಾ ವಾರ್ಡ್‌ಗಳಲ್ಲಿ ಸ್ಪರ್ಧಿಸಿರುವ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಪುರಸಭೆ ಅಧಿಕಾರ ಹಿಡಿಯಬೇಕು ಎಂದರು.

ಮುಖಂಡ ಡಾ. ಶಿವಶರಣಪ್ಪ ಇತ್ಲಿ, ಡಾ, ಬಿ.ಎಚ್.ದಿವಟರ್, ಅಂದಾನಪ್ಪ ಗುಂಡಳ್ಳಿ, ಬಸವಂತರಾಯ ಕುರಿ, ದೊಡ್ಡಪ್ಪ ಕಡಬೂರು, ಶಿವಶಂಕ್ರಪ್ಪ ಹಳ್ಳಿ, ಡಾ. ಪಂಚಾಕ್ಷರಯ್ಯ ಕಂಬಾಳಿಮಠ, ಪಕ್ಷದ ಪ್ರಧಾನ ಕಾರ್ಯದರ್ಶಿ ಶರಣಯ್ಯ ಸೊಪ್ಪಿಮಠ ಸೇರಿದಂತೆ ಅಭ್ಯರ್ಥಿಗಳು ಹಾಗೂ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.