ADVERTISEMENT

ಮಸ್ಕಿ ಪುರಸಭೆಯ ತೆರಿಗೆ ಪರಿಷ್ಕರಣೆ‌: ಮುಖ್ಯಾಧಿಕಾರಿ

ಬಜೆಟ್ ಪೂರ್ವಭಾವಿ ಸಭೆ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2022, 11:59 IST
Last Updated 19 ಮಾರ್ಚ್ 2022, 11:59 IST
ಮಸ್ಕಿಯಲ್ಲಿ ಶನಿವಾರ ನಡೆದ ಪುರಸಭೆಯ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಮಾಜಿ ಸದಸ್ಯ ಎಂ.‌ಅಮರೇಶ ಮಾತನಾಡಿದರು
ಮಸ್ಕಿಯಲ್ಲಿ ಶನಿವಾರ ನಡೆದ ಪುರಸಭೆಯ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಮಾಜಿ ಸದಸ್ಯ ಎಂ.‌ಅಮರೇಶ ಮಾತನಾಡಿದರು   

ಮಸ್ಕಿ: ಪುರಸಭೆಯ ತೆರಿಗೆ ಹೆಚ್ಚಿದೆ ಎನ್ನುವ ದೂರುಗಳ ಹಿನ್ನೆಲೆಯಲ್ಲಿ ತೆರಿಗೆ ಪರಿಷ್ಕರಣೆ ಮಾಡಲಾಗಿದ್ದು, ಏಪ್ರಿಲ್‍ನಿಂದಲೇ ಹೊಸ ತೆರಿಗೆ ಜಾರಿಗೆ ಬರಲಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಹನುಮಂತಮ್ಮ ನಾಯಕ ಹೇಳಿದರು.

ಪಟ್ಟಣದ ಎಪಿಎಂಸಿ ಆವರಣದಲ್ಲಿ ಶನಿವಾರ ಕರೆಯಲಾಗಿದ್ದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಖಾಲಿ ನಿವೇಶನ, ಮನೆ ಮುಂದಿನ ಖಾಲಿ ಜಾಗ ಸೇರಿ ಇತರೆ ಆಸ್ತಿಗಳ ಮೇಲೆ ವಿಧಿಸುತ್ತಿದ್ದ ತೆರಿಗೆ ಮೊತ್ತ ಹೆಚ್ಚಿದೆ. ಇದನ್ನು ಕಡಿತ ಮಾಡುವಂತೆ ಸಾರ್ವಜನಿಕರು, ಸದಸ್ಯರ ಒತ್ತಾಯವಾಗಿತ್ತು. ಇದಕ್ಕಾಗಿ ತೆರಿಗೆ ಪರಿಷ್ಕರಣೆ ಮಾಡಲಾಗಿದೆ ಎಂದರು.

ಪಟ್ಟಣದ 23 ವಾರ್ಡ್‌ಗಳ ಪೈಕಿ ಬಸವೇಶ್ವರ ನಗರ ಸೇರಿ ಇತರೆ ಪ್ರದೇಶಗಳಲ್ಲಿ ಒಂದು ದರ ಹಾಗೂ ಸ್ಲಂ ಪ್ರದೇಶಗಳು ಎಂದು ಗುರುತಿಸಿಕೊಂಡ ವಾರ್ಡ್‌ ಗಳಲ್ಲಿ ಮತ್ತೊಂದು ದರ ನಿಗದಿ ಮಾಡಲಾಗಿದೆ ಎಂದರು.

ADVERTISEMENT

ಈಗಲಾದರೂ ಸಾರ್ವಜನಿಕರು ನಿಗಧಿತ ಅವಧಿಯಲ್ಲಿ ತೆರಿಗೆ ಪಾವತಿ ಮಾಡಬೇಕು ಎಂದು ಮನವಿ ಮಾಡಿದರು.

ನೀರಿನ ಕರ ಬಾಕಿ: ನೀರಿನ ಕರ ನಿರೀಕ್ಷಿತ ಪ್ರಮಾಣದಲ್ಲಿ ಸಂದಾಯವಾಗುತ್ತಿಲ್ಲ. ನೋಟಿಸ್ ನೀಡಿದ ಬಳಿಕವೂ ಜನ ತೆರಿಗೆ ಕಟ್ಟುತ್ತಿಲ್ಲ ಎಂದು ಪುರಸಭೆ ಮುಖ್ಯಾಧಿಕಾರಿ ಸಭೆಯಲ್ಲಿ ಅಸಹಾಯಕತೆ ವ್ಯಕ್ತಪಡಿಸಿದರು.

ಮುಖಂಡ ಯಮನಪ್ಪ ಭೋವಿ ಮಾತನಾಡಿ, ‘ನಳವೊಂದಕ್ಕೆ ₹ 920‌ ದರ ನಿಗದಿ ಮಾಡಲಾಗಿದೆ. ಪಟ್ಟಣದಲ್ಲಿರುವ ಎರಡು ಸಾವಿರ ನಳಗಳಿಗೆ ಪ್ರತಿ ವರ್ಷ ₹ 23 ಲಕ್ಷ ಕರ ವಸೂಲಿಯಾಗಬೇಕು. ಆದರೆ ಕೇವಲ ₹ 1 ಲಕ್ಷ ತೆರಿಗೆ ಬಂದಿದೆ ಎಂದು ದಾಖಲೆಯಲ್ಲಿ ತೋರಿಸಲಾಗಿದೆ.‌ ಯಾಕೆ ಕಡಿಮೆ ಪ್ರಮಾಣದಲ್ಲಿ ತೆರಿಗೆ ವಸೂಲಿಯಾಗುತ್ತಿದೆ? ಎಂದು ಪ್ರಶ್ನಿಸಿದರು.

ಇದಕ್ಕೆ ಧ್ಪನಿಗೂಡಿಸಿದ ಪುರಸಭೆ ಸದಸ್ಯ ಮೌನೇಶ ಮುರಾರಿ ಅನಧಿಕೃತವಾಗಿ ನಲ್ಲಿ ಹಾಕಿಕೊಂಡವರು, ತೆರಿಗೆ ಕಟ್ಟದೇ ಇರುವವರ ನಳಗಳನ್ನು ಕಟ್ ಮಾಡಬೇಕು. ಗಂಭೀರವಾಗಿ ಕ್ರಮ ಕೈಗೊಂಡರೆ ತೆರಿಗೆ ವಸೂಲಿಯಾಗಲಿದೆ ಎಂದರು.
ಪಟ್ಟಣದ ಹಳ್ಳದಲ್ಲಿ ಚರಂಡಿ ನೀರು, ತ್ಯಾಜ್ಯವೆಲ್ಲ ಬಿಡಲಾಗುತ್ತಿದೆ.

ಪುರಸಭೆ ಹಳ್ಳದ ಸ್ವಚ್ಛತೆಗೆ ಕ್ರಮ ಕೈಗೊಳ್ಳಬೇಕು ಮಾಜಿ ಸದಸ್ಯ ಎಂ.ಅಮರೇಶ ಒತ್ತಾಯಿಸಿದರು.

ಪುರಸಭೆ ಸದಸ್ಯರು, ಮುಖಂಡರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.