ADVERTISEMENT

ಮಸ್ಕಿ | ಅಡ್ಡಾದಿಡ್ಡಿ ವಾಹನ ನಿಲುಗಡೆ

ಸಾರ್ವಜನಿಕರು, ವಿದ್ಯಾರ್ಥಿಗಳ ಪರದಾಟ: ಕ್ರಮಕ್ಕೆ ಒತ್ತಾಯ

ಪ್ರಕಾಶ ಮಸ್ಕಿ
Published 20 ಜೂನ್ 2025, 6:11 IST
Last Updated 20 ಜೂನ್ 2025, 6:11 IST
ಮಸ್ಕಿ ಪಟ್ಟಣದಲ್ಲಿ ಸರ್ವಿಸ್ ರಸ್ತೆ ಹಾಗೂ ಪಾದಾಚಾರಿ ಮಾರ್ಗದ ಬಂಡಿ ಹಾಗೂ ಅಂಗಡಿಗಳನ್ನು ಇಟ್ಟುಕೊಂಡಿರುವುದು
ಮಸ್ಕಿ ಪಟ್ಟಣದಲ್ಲಿ ಸರ್ವಿಸ್ ರಸ್ತೆ ಹಾಗೂ ಪಾದಾಚಾರಿ ಮಾರ್ಗದ ಬಂಡಿ ಹಾಗೂ ಅಂಗಡಿಗಳನ್ನು ಇಟ್ಟುಕೊಂಡಿರುವುದು   

ಮಸ್ಕಿ: ಪಟ್ಟಣದ ಅಶೋಕ ವೃತ್ತದಿಂದ ಬಸವೇಶ್ವರ ವೃತ್ತದವರೆಗೆ ನಿರ್ಮಿಸಿದ ಹೆದ್ದಾರಿ ಪಕ್ಕದ ಸರ್ವಿಸ್ ರಸ್ತೆಯ ಎರಡೂ ಕಡೆ ಅಡ್ಡಾದಿಡ್ಡಿಯಾಗಿ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪರದಾಡುವಂತಾಗಿದೆ.

ಹೆದ್ದಾರಿ ಹಾಗೂ ಸರ್ವಿಸ್ ರಸ್ತೆಯ ನಡುವೆ ನಿರ್ಮಿಸಿದ ಪಾದಾಚಾರಿ ಮಾರ್ಗದ ಮೇಲೆ ಹಲವಾರು ಡಬ್ಬಾ ಅಂಗಡಿಗಳು ಹಾಗೂ ಬಂಡಿಗಳು ತಲೆ ಎತ್ತಿದ ಕಾರಣ ಪಾದಾಚಾರಿಗಳು ಮುಖ್ಯ ರಸ್ತೆಯ ಮೇಲೆ ತಿರುಗಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಹಳೆ ಬಸ್ ನಿಲ್ದಾಣಕ್ಕೆ ಹೊಂದಿಕೊಂಡು ಅನೇಕ ಶಾಲಾ–ಕಾಲೇಜುಗಳಿವೆ. ವಿದ್ಯಾರ್ಥಿಗಳು ಜೀವ ಕೈಯಲ್ಲಿ ಹಿಡಿದುಕೊಂಡು ರಸ್ತೆ ದಾಟಬೇಕಾದ ಪರಿಸ್ಥಿತಿ ಇದೆ.

ADVERTISEMENT

ಸರ್ವಿಸ್ ರಸ್ತೆಯಲ್ಲಿ ಎಲ್ಲೆಂದರಲ್ಲಿ ದ್ವಿಚಕ್ರ ವಾಹನ ಮತ್ತು ಬಂಡಿಗಳನ್ನು ನಿಲ್ಲಿಸುವ ಕಾರಣ ಈ ಮಾರ್ಗದಲ್ಲಿ ಸಂಚರಿಸುವ ಇತರೆ ವಾಹನ ಸವಾರರು ರಸ್ತೆ ದಾಟಲು ಹರಸಾಹಸ ಪಡಬೇಕಾಗಿದೆ.

ಕೆನರಾ ಬ್ಯಾಂಕ್, ಎಸ್‌ಬಿಐ, ಹಳೆಯ ಬಸ್ ನಿಲ್ದಾಣದಲ್ಲಿ ಬೈಕ್‌ಗಳನ್ನು ಗ್ರಾಹಕರು ಸರ್ವಿಸ್ ರಸ್ತೆಯ ನಡುವೆಯೇ ಬಿಟ್ಟು ಹೋಗುತ್ತಾರೆ. ಇದರಿಂದ ಸಾರ್ವಜನಿಕರು, ವ್ಯಾಪಾರಸ್ಥರಿಗೆ ಕಿರಿ ಕಿರಿ ಉಂಟಾಗಿದೆ.

ಭಾರತೀಯ ಹೆದ್ದಾರಿ ಪ್ರಾಧಿಕಾರ, ಪುರಸಭೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಸರ್ವಿಸ್ ರಸ್ತೆ ಹಾಗೂ ಪಾದಚಾರಿ ಮಾರ್ಗವನ್ನು ಸಾರ್ವಜನಿಕರ ತಿರುಗಾಟಕ್ಕೆ ಮುಕ್ತ ಮಾಡಿಕೊಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ನಿಯಮ ಬಾಹಿರವಾಗಿ ಬ್ಯಾನರ್ ಅಳವಡಿಕೆ ಪುರಸಭೆ ವರಮಾನಕ್ಕೆ ಕತ್ತರಿ ಪಾದಚಾರಿ ಮಾರ್ಗದ ಮೇಲೆ ವ್ಯಾಪಾರ

ಸರ್ವಿಸ್ ರಸ್ತೆ ಹಾಗೂ ಪಾದಚಾರಿ ಮಾರ್ಗದ ಮೇಲಿನ ಡಬ್ಬಿ ಅಂಗಡಿಗಳನ್ನು ತೆರವುಗೊಳಿಸುವ ಸಂಬಂಧ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ನೋಟಿಸ್ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ

- ಮಲ್ಲಯ್ಯ ಅಂಬಾಡಿ ಅಧ್ಯಕ್ಷ ಪುರಸಭೆ ಮಸ್ಕಿ

ಅನಧಿಕೃತ ಬ್ಯಾನರ್ ಅಳವಡಿಕೆ ಹಳೆ ಬಸ್ ನಿಲ್ದಾಣ ಸೇರಿದಂತೆ ವಿವಿಧೆಡೆ ನಿಯಮ ಬಾಹಿರವಾಗಿ ರಸ್ತೆಯ ಗ್ರಿಲ್‌ಗಳಿಗೆ ಬ್ಯಾನರ್ ಕಟ್ಟಲಾಗುತ್ತಿದೆ. ಆದ್ದರಿಂದ ಅಲ್ಲಲ್ಲಿ ಗ್ರಿಲ್‌ಗಳು ಬಾಗಿಕೊಂಡಿವೆ. ಪುರಸಭೆಯಿಂದ ಪರವಾನಗಿ ಪಡೆಯದೆ ಹೆದ್ದಾರಿ ಹಾಗೂ ಪ್ರಮುಖ ವೃತ್ತಗಳ ಅಕ್ಕಪಕ್ಕದಲ್ಲಿ ಅನಧಿಕೃತವಾಗಿ ಬ್ಯಾನರ್ ಅಳವಡಿಕೆ ಮಾಡುತ್ತಿರುವ ಕಾರಣ ಪುರಸಭೆಗೆ ಬರಬೇಕಾದ ಆದಾಯಕ್ಕೆ ಕತ್ತರಿ ಬಿದ್ದಿದೆ. 2024-25ರಲ್ಲಿ ಬ್ಯಾನರ್ ಪರವಾನಗಿಯಿಂದ ಕೇವಲ ₹6 ಸಾವಿರ ಸಂದಾಯವಾಗಿದೆ ಎಂದು ಪುರಸಭೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಭಾರತೀಯ ಹೆದ್ದಾರಿ ಪ್ರಾಧಿಕಾರ ಪುರಸಭೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಅದಕ್ಕೆ ಕಡಿವಾಣ ಹಾಕಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.