ಮಸ್ಕಿ: ಈ ವಿಧಾನಸಭಾ ಕ್ಷೇತ್ರದ ಜನರಿಗೆ ಕೃಷ್ಣಾ ನದಿಯಿಂದ ಕುಡಿಯುವ ನೀರು ಕೊಡುವ ಜಲಧಾರೆ ಯೋಜನೆಯ ಕಾಮಗಾರಿ ನಿಗದಿತ ಅವಧಿಯೊಳಗೆ ಮುಗಿಸುವಂತೆ ಶಾಸಕ ಆರ್.ಬಸನಗೌಡ ತುರ್ವಿಹಾಳ ಅಧಿಕಾರಿಗಳಿಗೆ ಸೂಚಿಸಿದರು.
ಸಿಂಧನೂರು ಪ್ರವಾಸಿ ಮಂದಿರದಲ್ಲಿ ಸೋಮವಾರ ನಡೆದ ಕ್ಷೇತ್ರದ ಜಲಧಾರೆ ಯೋಜನೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
‘ಇಷ್ಟೋತ್ತಿಗೆ ಯೋಜನೆ ಪೂರ್ಣಗೊಳಿಸಬೇಕಾಗಿತ್ತು. ಆದರೆ, ಕಾಮಗಾರಿ ಮುಗಿಸಲು ಇನ್ನೂ ಆರು ತಿಂಗಳ ಕಾಲಾವಕಾಶವನ್ನು ಗುತ್ತಿಗೆದಾರರು ಪಡೆದುಕೊಂಡಿದ್ದಾರೆ. ನೀಡಿದ ಕಾಲಾವಕಾಶದ ಒಳಗಾಗಿ ಯೋಜನೆಯ ಕಾಮಗಾರಿ ಮುಗಿಸಲು ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಕ್ರಮ ಕೈಗೊಳ್ಳಬೇಕು’ ಎಂದರು.
‘ಯೋಜನೆ ಪೂರ್ಣಗೊಳಿಸಲು ಏನಾದರೂ ಅಡ್ಡಿಗಳು ಬಂದರೆ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಬಗೆಹರಿಸಿ ಸಹಕರಿಸಬೇಕು’ ಎಂದು ಸೂಚಿಸಿದರು.
‘ಯೋಜನೆ ಪೂರ್ಣಗೊಂಡರೆ ಅಮೃತ ಯೋಜನೆ 2.0 ಮೂಲಕ ಮಸ್ಕಿ, ತುರ್ವಿಹಾಳ ಹಾಗೂ ಬಳಗಾನೂರು ಪಟ್ಟಣಗಳಿಗೆ ಹೊಸ ಪೈಪ್‌ಲೈನ್ ಮಾಡಿ ನೀರು ಕೊಡಲಾಗುವುದು’ ಎಂದರು.
‘ಕ್ಷೇತ್ರದ ಎಲ್ಲಾ ಗ್ರಾಮೀಣ ಪ್ರದೇಶದ ಜನರಿಗೆ ಕೃಷ್ಣಾ ನದಿಯಿಂದ ನೀರು ಕೊಡಲಾಗುವುದು’ ಎಂದು ತಿಳಿಸಿದರು.
ತಾಲ್ಲೂಕು ಪಂಚಾಯಿತಿ ಇಒಗಳಾದ ಅಮರೇಶ ಯಾದವ್, ಚಂದ್ರಶೇಖರ, ಯೋಜನೆಯ ಮುಖ್ಯ ಎಂಜನಿಯರ್ ಸೇರಿದಂತೆ ಸಿಂಧನೂರು, ಮಾನ್ವಿ, ಲಿಂಗಸುಗೂರು ತಾಲ್ಲೂಕಿನ ಅಧಿಕಾರಿಗಳು, ಗುತ್ತಿಗೆದಾರ ಕಂಪನಿಯ ವ್ಯವಸ್ಥಾಪಕರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.