ಮುದಗಲ್: ಸಮೀಪದ ನಾಗರಾಳ ಗ್ರಾಮ ಎಲ್ಲ ರಂಗದಲ್ಲೂ ಶರವೇಗದಲ್ಲಿ ಬೆಳೆಯುತ್ತಿದೆ. ಜನದಟ್ಟಣೆ ಅಧಿಕವಾಗುತ್ತಿದೆ. ಅಪರಾಧ ಪ್ರಕರಣ, ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿವೆ. ಇವುಗಳ ನಿಯಂತ್ರಣಕ್ಕಾಗಿ ಪೊಲೀಸ್ ಠಾಣೆ ಅಗತ್ಯವಾಗಿದೆ.
ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ಮುಳುಗಿದ ಗ್ರಾಮಗಳಾದ ಅಂಕನಾಳ, ತೊಂಡಿಹಾಳ, ಹಲ್ಕಾವಟಗಿ, ಪಲಗಲದಿನ್ನಿ, ರಾಂಪುರ, ನವಲಿ, ಕಮಲದಿನ್ನಿ, ತುಂಬಲಗಡ್ಡಿ ಸೇರಿದಂತೆ ಇನ್ನಿತರ ಗ್ರಾಮಗಳಿಗೆ 20 ಕಿ.ಮೀ ವ್ಯಾಪ್ತಿಯಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ.
ಪ್ರತ್ಯೇಕ ಗ್ರಾಮಗಳಾಗಿದ್ದರೂ ನಾಗರಾಳ ಗ್ರಾಮದ ವ್ಯಾಪ್ತಿಯಲ್ಲಿವೆ. ಅನೇಕ ಬಡಾವಣೆಗಳು ತಲೆಯತ್ತಿ ನಿಂತಿವೆ. ಇಲ್ಲಿ ಸರ್ಕಾರಿ ಹಾಗೂ ಖಾಸಗಿ ಸೇರಿದಂತೆ ಎರಡು ಪದವಿ ಪೂರ್ವ ಕಾಲೇಜು, ಎರಡು ಪದವಿ ಕಾಲೇಜು, 5 ಕ್ಕೂ ಹೆಚ್ಚು ಪ್ರಾಥಮಿಕ ಶಾಲೆಗಳು, ಪ್ರಾಥಮಿಕ ರೋಗ್ಯ ಕೇಂದ್ರ, ವಸತಿ ನಿಲಯಗಳು ಸೇರಿದಂತೆ ಶಿಕ್ಷಣ ಸಂಸ್ಥೆಗಳು, ವಿವಿಧ ರೀತಿಯ ಸಂಘ, ಸಂಸ್ಥೆಗಳು ಕ್ರಿಯಾಶೀಲವಾಗಿವೆ.
ಗ್ರಾಮದಿಂದ ವಿಜಯಪುರ, ಯಾದಗಿರಿ, ಬಾಗಲಕೋಟೆ ಹಾಗೂ ರಾಯಚೂರಗೆ ಸಂಪರ್ಕ ಕಲ್ಪಿಸುವ ಹೆದ್ದಾರಿಗಳಿವೆ. ಕೃಷ್ಣಾ ನದಿಗೆ ನಿರ್ಮಿಸಿರುವ ಬಸವಸಾಗರ ಜಲಾಶಯವೂ ಹತ್ತಿರ ಇದೆ. 20 ಹಳ್ಳಿಗಳಿಗೆ ಕೇಂದ್ರ ಸ್ಥಾನವಾಗಿದೆ.
ನಾಗರಾಳ ಗ್ರಾಮದಲ್ಲಿ ಪೊಲೀಸ್ ಠಾಣೆ ಇಲ್ಲದರಿಂದಾಗಿ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಪರೀಕ್ಷೆ ಕೇಂದ್ರಗಳನ್ನು ನೀಡಲು ಇಲಾಖೆ ಮುಂದಾಗುತ್ತಿಲ್ಲ. ಇಲ್ಲಿನ ವಿದ್ಯಾರ್ಥಿಗಳು ದೂರದ ಮುದಗಲ್ ಪರೀಕ್ಷೆ ಕೇಂದ್ರಗಳಿಗೆ ಹೋಗಿ ಪರೀಕ್ಷೆ ಬರೆಯಬೇಕಾಗಿದೆ. ಇಲ್ಲಿನ ಅನೇಕ ಸಮಸ್ಯೆಗಳು ಕಣ್ಣಿಗೆ ಕಂಡರು ಈ ಭಾಗದ ಜನ ಪ್ರತಿನಿಧಿಗಳಾದ ಮಾಜಿ ಸಚಿವ ಅಮರೇಗೌಡ ಬಯ್ಯಾಪುರ, ಎಂ.ಎಲ್.ಸಿ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗುತ್ತಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಅಪಘಾತಗಳು ಹೆಚ್ಚಾಗುತ್ತಿದ್ದು, ಮುದಗಲ್ ಪೊಲೀಸರು ಸಂಚಾರ ನಿಯಂತ್ರಿಸಲು ಹರಸಹಾಸ ಪಡುತ್ತಿದ್ದಾರೆ. ಬುಧವಾರ ಸಂತೆ ದಿನದಂದು ಮುಖ್ಯ ಬಜಾರದಲ್ಲಿ ಜನದಟ್ಟಣೆಯ ಸನ್ನಿವೇಶ ಉಸಿರು ಕಟ್ಟಿಸುವ ಸ್ಥಿತಿಯಲ್ಲಿರುತ್ತದೆ. ಕೃಷ್ಣಾ ನದಿ ತೀರದ ಗ್ರಾಮೀಣದಲ್ಲಿ ಹಲವಾರು ಪ್ರಕರಣ ನಡೆಯುತ್ತಲೆ ಇರುತ್ತವೆ. ನಿತ್ಯ ಭಾಗದ ಜನರು ನ್ಯಾಯಕ್ಕಾಗಿ ದೂರದ ಮುದಗಲ್ ಪಟ್ಟಣಕ್ಕೆ ಬರಬೇಕಾಗಿದೆ.
ಕೊನೆ ಗಾಮ ಅಂಕನಾಳ ದಿಂದ ಮುದಗಲ್ ಪಟ್ಟಣದ ಪೊಲೀಸ್ ಠಾಣೆಗೆ ಬರಬೇಕೆಂದರ 40 ಕಿ.ಮೀ. ದಾವಿಸಬೇಕಾಗಿದೆ. ಮುದಗಲ್ ಪೊಲೀಸರು ಇದನ್ನು ನಿಭಾಯಿಸುವುದ ಕಷ್ಟವಾಗುತ್ತಿದೆ. ಇವರಿಂದ ಜನರಿಗೆ ಪರಿಣಾಮಕಾರಿ ಕರ್ತವ್ಯ ನಿರ್ವಹಿಸಲು ಸಾಧ್ಯವಾಗದೇ ಇರುವುದರಿಂದ ನಾಗರಾಳ ಗ್ರಾಮಕ್ಕೆ ಪೊಲೀಸ್ ಠಾಣೆ ಅಗತ್ಯವಿದೆ ಎಂಬ ಮಾತು ವ್ಯಾಪಕವಾಗಿ ಕೇಳಿ ಬರುತ್ತಿದೆ.