ADVERTISEMENT

ರಾತ್ರಿ ವೇಳೆ ಮರಳು ಸಾಗಾಣಿಕೆ ನಿಷೇಧ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2020, 9:36 IST
Last Updated 12 ಮಾರ್ಚ್ 2020, 9:36 IST
ಆರ್‌.ವೆಂಕಟೇಶಕುಮಾರ್‌
ಆರ್‌.ವೆಂಕಟೇಶಕುಮಾರ್‌   

ರಾಯಚೂರು: ಜಿಲ್ಲೆಯಾದ್ಯಂತ ರಾತ್ರಿ ವೇಳೆ ಮರಳು ಸಾಗಾಣಿಕೆ ಮಾಡುವುದನ್ನು ಇಂದಿನಿಂದಲೇ ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಈ ಆದೇಶ ಉಲ್ಲಂಘಿಸಿದವರ ಮೇಲೆ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶ್ ಕುಮಾರ ಎಚ್ಚರಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾ ಮಟ್ಟದ ಮರಳು ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ರಾತ್ರಿ 8 ಗಂಟೆಯೊಳಗೆ ಮಾತ್ರ ಮರಳು ಸಾಗಾಣಿಕೆ ಮಾಡಬೇಕು. ಮರಳು ಸಾಗಾಣಿಕೆ ಮಾಡಿರುವುದು ಕಂಡು ಬಂದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು ಟಿಪ್ಪರ್ ಅಥವಾ ಲಾರಿಗಳನ್ನು ವಶಪಡಿಸಿಕೊಳ್ಳಲಾಗುತ್ತದೆ ಎಂದರು.

ಏಪ್ರೀಲ್ 1 ರಿಂದ ಪ್ರತಿ ಭಾನುವಾರ ಮರಳು ಸಂಗ್ರಹ ಕೇಂದ್ರದಿಂದ ಮರಳು ಸಾಗಾಣಿಕೆ ಮಾಡುವುದನ್ನು ಸಂಪೂರ್ಣವಾಗಿ ಬಂದ್ ಮಾಡಲಾಗುತ್ತದೆ. ಮರಳು ಸಾಗಾಣಿಕೆ ಮಾಡುವ ಮಾಲೀಕರು ಸರ್ಕಾರದ ಆದೇಶದನ್ವಯ ಟಿಪ್ಪರ್, ಟ್ರ್ಯಾಕ್ಟರ್‌ಗಳಲ್ಲಿ ಮಾತ್ರ ಮರಳು ಸಾಗಿಸಬೇಕು. ಲಾರಿಗಳಲ್ಲಿ ಮರಳು ಸಾಗಿಸಬಾರದು. ರಾಯಲ್ಟಿ ಪಡೆಯದೇ ಮರಳು ಸಾಗಾಣಿಕೆ ಮಾಡುವವರನ್ನು ಪತ್ತೆ ಹಚ್ಚಲು ಜಿಲ್ಲೆಯ ಆಯಾ ಮರಳು ಸಂಗ್ರಹ ಕೇಂದ್ರದ ಅಡ್ಡೆ ವ್ಯಾಪ್ತಿಯಲ್ಲಿ ಚೆಕ್‌ಪೋಸ್ಟ್ ನಿರ್ಮಿಸಿ, ಸಿಸಿ ಕ್ಯಾಮೆರಾ ಅಳವಡಿಸಬೇಕು. ತಹಸೀಲ್ದಾರರು ಹಾಗೂ ಫ್ಲೈಯಿಂಗ್ ಸ್ಕೌಯಿಡ್‌ನ್ನು ನೇಮಿಸಿ ನಿಗಾ ವಹಿಸಬೇಕು ಎಂದು ಹೇಳಿದರು.

ADVERTISEMENT

ಇತ್ತೀಚಿನ ದಿನಗಳಲ್ಲಿ ದೇವದುರ್ಗ ತಾಲ್ಲೂಕಿನಲ್ಲಿ ಅಕ್ರಮ ಮರಳು ಸಾಗಾಣಿಕೆ ವ್ಯಾಪಕವಾಗಿ ನಡೆಯುತ್ತಿರುವ ಬಗ್ಗೆ ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ ದೇವದುರ್ಗದಲ್ಲಿ ಮೂರು ಕಡೆ ಚೆಕ್‌ಪೋಸ್ಟ್ ನಿರ್ಮಿಸಬೇಕು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ. ವೇದಮೂರ್ತಿ ಮಾತನಾಡಿ, ಈಗಾಗಲೇ ಹಲವು ಕಡೆ ಅಕ್ರಮ ಮರಳು ಸಂಗ್ರಹ ಕೇಂದ್ರಗಳ ಅಡ್ಡೆ ಮೇಲೆ ದಾಳಿ ಮಾಡಿ ಲಕ್ಷಾಂತರ ರೂಪಾಯಿ ಮೌಲ್ಯದ ಮರಳು ವಶಪಡಿಸಿಕೊಳ್ಳಲಾಗಿದೆ. ಸಂಪೂರ್ಣ ಅಕ್ರಮ ಮರಳು ಸಾಗಣೆ ನಿಯಂತ್ರಿಸಲು ಸಂಬಂಧಿಸಿದ ಎಲ್ಲಾ ಇಲಾಖೆಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಓ ಲಕ್ಷ್ಮೀಕಾಂತ ರೆಡ್ಡಿ ಜಿ, ಐಎಎಸ್ ಪ್ರೋಬೇಷನರಿ ಅಧಿಕಾರಿ ಯುಕೇಶ್ ಕುಮಾರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಹರಿಬಾಬು, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ವಿಜ್ಞಾನಿ ವಿಶ್ವನಾಥ, ವಿವಿಧ ತಾಲ್ಲೂಕಿನ ತಹಸೀಲ್ದಾರರು, ಪೊಲೀಸ್ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.