ADVERTISEMENT

‘ಜ್ಞಾನಕ್ಕಿಂತ ಮಿಗಿಲಾದದ್ದು ಯಾವುದಿಲ್ಲ’

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಾತೆ ಸಾವಿತ್ರಿಬಾಯಿ ಫುಲೆ ಜನ್ಮ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 4 ಜನವರಿ 2019, 11:00 IST
Last Updated 4 ಜನವರಿ 2019, 11:00 IST
ರಾಯಚೂರಿನಲ್ಲಿ ಗುರುವಾರ ಏರ್ಪಡಿಸಿದ್ದ ಮಾತೆ ಸಾವಿತ್ರಿಬಾಯಿ ಫುಲೆ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಆಕಾಶವಾಣಿಯ ಪ್ರಸಾರ ನಿರ್ವಾಹಕ ವೆಂಕಟೇಶ ಬೇವಿನಬೆಂಚಿ ಮಾತನಾಡಿದರು
ರಾಯಚೂರಿನಲ್ಲಿ ಗುರುವಾರ ಏರ್ಪಡಿಸಿದ್ದ ಮಾತೆ ಸಾವಿತ್ರಿಬಾಯಿ ಫುಲೆ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಆಕಾಶವಾಣಿಯ ಪ್ರಸಾರ ನಿರ್ವಾಹಕ ವೆಂಕಟೇಶ ಬೇವಿನಬೆಂಚಿ ಮಾತನಾಡಿದರು   

ರಾಯಚೂರು: ಜಗತ್ತಿನಲ್ಲಿ ಜ್ಞಾನಕ್ಕಿಂತ ಮಿಗಿಲಾದುದ್ದು ಯಾವುದು ಇಲ್ಲ ಎಂದು ಆಕಾಶವಾಣಿಯ ಪ್ರಸಾರ ನಿರ್ವಾಹಕ ವೆಂಕಟೇಶ ಬೇವಿನಬೆಂಚಿ ಹೇಳಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಏರ್ಪಡಿಸಿದ್ದ ಮಾತೆ ಸಾವಿತ್ರಿಬಾಯಿ ಫುಲೆ ಅವರ 188ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿದ್ಯೆಯ ಬೆಳಕಿಗಾಗಿ ಪರಿತಪಿಸುತ್ತಿದ್ದ ಶೋಷಿತರ ಬಾಳಿಗೆ ಬೆಳಕಿನ ಕಿರಣಗಳನ್ನು ಮೂಡಿಸಿದ ಆಧುನಿಕ ಭಾರತದ ಮೊದಲ ಅಕ್ಷರಧಾತೆ ಸಾವಿತ್ರಿಬಾಯಿ ಫುಲೆ ಎಂದು ತಿಳಿಸಿದರು.

ADVERTISEMENT

ದೇಶದ ಇತಿಹಾಸದಲ್ಲಿ ಎಷ್ಟೋ ಸತ್ಯಗಳು ಈ ನೆಲದ ಚರಿತ್ರೆಯಲ್ಲಿ ಮುಚ್ಚಿಹೋಗಿವೆ. ಆ ಸತ್ಯದ ಇತಿಹಾಸದ ಪುಟಗಳನ್ನು ಹೊರ ತೆಗೆದಾಗಲೆ ಮುಚ್ಚಿಹೋದ ಸಾವಿತ್ರಿ ಬಾಯಿ ಅವರಂತಹ ಎಷ್ಟೋ ನೈಜ ಚರಿತ್ರೆಗಳು ಕಾಣಸಿಗುತ್ತವೆ. ಅವುಗಳನ್ನು ಹೊರ ತೆಗೆಯುವ ಕೆಲಸ ಆಗಬೇಕಾಗಿದೆ ಎಂದು ಹೇಳಿದರು.

ಸಾವಿತ್ರಿಬಾಯಿ ಫುಲೆ ಅವರು ವಿಶೇಷವಾಗಿ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಹಗಲಿರುಳು ಜೀವ ಸವಿಸಿದ್ದಾರೆ. 1848ರಲ್ಲಿ ಮೊಟ್ಟ ಮೊದಲ ಹೆಣ್ಣು ಮಕ್ಕಳಿಗಾಗಿ ಕನ್ಯಾಶಾಲೆ ಪ್ರಾರಂಬಿಸಿ ಹೆಣ್ಣು ಮಕ್ಕಳ ಎದೆಯಲ್ಲಿ ಅಕ್ಷರ ಬೀಜವನ್ನು ಹಾಕಿದ ಕ್ರಾಂತಿಕಾರಣಿಯಾಗಿದ್ದರು. ಹೆಣ್ಣುಮಕ್ಕಳ ಬಾಳನ್ನು ಹಸನು ಮಾಡಲು ಸಂಪ್ರದಾಯವಾದಿಗಳನ್ನು ವಿರೋಧ ಕಟ್ಟಿಕೊಳ್ಳಬೇಕಾಯಿತು. ಮಾನಸಿಕ, ದೈಹಿಕ ಹಲ್ಲೆಗೆ ಒಳಗಾದರೂ ಕೂಡ ಛಲಬಿಡದೇ, ಹೆಣ್ಣು ಮಕ್ಕಳಿಗೆ ವಿದ್ಯೆಯನ್ನು ಕಲಿಸಿದ ಛಲಗಾತಿ ಎಂದು ಮನವರಿಕೆ ಮಾಡಿದರು.

ಅಪಮಾನ ಅವಮಾನಗಳನ್ನು ಸಹಿಕೊಂಡೆ ಸಮಾಜದಲ್ಲಿನ ಅನಿಷ್ಟಗಳನ್ನು ದೂರ ಮಾಡಲು ಶ್ರಮಿಸಿದ ಮಹಾಮಾತೆ ಸಾವಿತ್ರಿಬಾಯಿ. 1851ರಲ್ಲಿ ದಲಿತರಿಗಾಗಿಯೇ ಮೊದಲು ಶಾಲೆಯನ್ನು ಪ್ರಾರಂಭಮಾಡಿದ ಫುಲೆ ದಂಪತಿಗಳ ನಡೆಯನ್ನು ಕಂಡು ಈ ದೇಶದ ಸಂಪ್ರದಾಯ ಸಮಾಜ ಬೆಚ್ಚಿಬಿದ್ದಿತು ಎಂದರು.

ಸಾಹಿತಿ ಜೆ.ಎಲ್. ಈರಣ್ಣ ಮಾತನಾಡಿ, ಸಾವಿತ್ರಿಬಾಯಿ ಅವರು ಹೆಣ್ಣುಮಕ್ಕಳಿಗೆ ವಿದ್ಯೆ ಕಲಿಸಲು ಶಾಲೆಗೆ ಹೋಗುವಾಗ ಅವರನ್ನು ಶಾಲೆಗೆ ಹೋಗದಂತೆ ಕುತಂತ್ರಿ ಜಾತಿವಾದಿಗಳು ಅವರ ಮೇಲೆ ಕಲ್ಲು ಸಗಣೆ ಮತ್ತು ಕೆಸರು ಎಸೆಯುತ್ತಿದ್ದರು. ದಾರಿಯಲ್ಲಿ ಮುಳ್ಳುಗಳನ್ನು ಹಾಕುತ್ತಿದ್ದರೂ ಸ್ವಾಭಿಮಾನಿ ಸಾವಿತ್ರಿಬಾಯಿಯವರು ಇದಾವುದಕ್ಕೂ ಹೆದರದೆ ತನ್ನ ಕೈಚೀಲದಲ್ಲಿ ಒಂದು ಸೀರೆಯನ್ನು ಇಟ್ಟುಕೊಂಡು ಕೊಳೆಯಾದ ಸೀರೆಯನ್ನು ತೆಗದು ಚೀಲದಲ್ಲಿ ತಂದು ಮತ್ತೊಂದು ಸೀರೆಯನ್ನು ಹಾಕಿಕೊಂಡು ಮಕ್ಕಳಿಗೆ ಪಾಠಮಾಡಿದ್ದಾರೆ ಎಂದು ಹೇಳಿದರು.

ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಪುಷ್ಪಾ ಮಾತನಾಡಿ, ಸಾವಿತ್ರಿಬಾಯಿ ಫುಲೆ ಅವರ ಚರಿತ್ರೆ ಎಷ್ಟೋ ಜನಗಳಿಗೆ ಗೊತ್ತಿಲ್ಲ. ಅವರ ಸಾಧನೆ ಅವರ ತ್ಯಾಗವನ್ನು ಎಲ್ಲರೂ ತಿಳಿದುಕೊಳ್ಳಬೇಕು ಎಂದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿ ಪ್ರಾಂಶುಪಾಲ ಡಾ.ದಸ್ತಗಿರಿ ಸಾಬ್ ದಿನ್ನಿ ಅಧ್ಯಕ್ಷತೆ ವಹಿಸಿದ್ದರು.

ಸಹಾಯಕ ಪ್ರಾಧ್ಯಾಪಕರಾದ ಇಸ್ರತ್ ಬೇಗಂ, ಡಾ.ಶಿವರಾಜಪ್ಪ, ಗೌಡಪ್ಪ, ಮಹಾಂತೇಶ ಅಂಗಡಿ, ಡಾ.ರಂಗನಾಥ ಇದ್ದರು.

ಅನ್ನಪೂರ್ಣ ಸ್ವಾಗತಿಸಿದರು. ಶೃತಿ ನಿರೂಪಿಸಿದರು. ಸುರೇಶ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.