ADVERTISEMENT

ನರೇಗಾ ಅವ್ಯವಹಾರ: ಕೇಂದ್ರ ತಂಡ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2025, 15:41 IST
Last Updated 23 ಏಪ್ರಿಲ್ 2025, 15:41 IST

ರಾಯಚೂರು: ದೇವದುರ್ಗ ತಾಲ್ಲೂಕಿನಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ಮೂವರ ಸದಸ್ಯರ ತಂಡವೊಂದನ್ನು ಕಳಿಸಿ ಪರಿಶೀಲನೆ ನಡೆಸುತ್ತಿದೆ.

ದೊಡ್ಡ ಮಟ್ಟದಲ್ಲಿ ಅವ್ಯವಹಾರ ನಡೆದಿರುವ ಕಾರಣ ಕೇಂದ್ರ ಒಂಬುಡ್ಸುಮನ್ ತಂಡದಿಂದ ಪರಿಶೀಲನೆ ನಡೆಸುವಂತೆ ಕೇಂದ್ರಕ್ಕೆ ಜಿಲ್ಲಾ ಪಂಚಾಯಿತಿಯಿಂದ ಪ್ರಸ್ತಾವ ಸಲ್ಲಿಸಬೇಕು ಎಂದು ಅಧಿಕಾರಿಗಳ ತಂಡವು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಸೂಚನೆ ನೀಡಿದೆ ಎಂದು ತಿಳಿದು ಬಂದಿದೆ.

ಬಿಜೆಪಿ ಸರ್ಕಾರದ ಅವಧಿಯಲ್ಲಿ ವೆಂಡರ್ ಹೆಸರಿನಲ್ಲಿ ಹಣ ಪಾವತಿಸಲಾಗಿದೆ. ಸಾಮಾಜಿಕ ಲೆಕ್ಕ ಪರಿಶೋಧನೆಯ ಸಂದರ್ಭದಲ್ಲಿ ಪ್ರಕರಣ ಬಯಲಿಗೆ ಬಂದಿದೆ. ಪ್ರಕರಣದಲ್ಲಿ ತಪ್ಪಿತಸ್ಥರಿಂದ ಲೋಪಗಳ ಆಧಾರ ಮೇಲೆ ಬಾಕಿ ಹಣ ₹64 ಕೋಟಿ ವಸೂಲಿ ಮಾಡುವಂತೆಯೂ ಸೂಚಿಸಿದೆ ಎನ್ನಲಾಗಿದೆ.

ಹಿಂದಿನ ಜಿಲ್ಲಾ ಪಂಚಾಯಿತಿ ಸಿಇಒ, ಉಪ ಕಾರ್ಯದರ್ಶಿ ಹಾಗೂ ಲೆಕ್ಕಾಧಿಕಾರಿಗಳು ಸರಿಯಾಗಿ ಮೇಲ್ವಿಚಾರಣೆ ಮಾಡದಿರುವುದನ್ನು ಸಹ ಲೋಪವೆಂದು ಪರಿಗಣಿಸಲಾಗಿದೆ. ಕೋಟ್ಯಂತರ ಹಣ ಮುಳುಗಿಸಿದರೂ ಪಿಡಿಒಗಳು, ತಾಲ್ಲೂಕು ಪಂಚಾಯಿತಿ ನರೇಗಾ ಸಹಾಯಕ ನಿರ್ದೇಶಕರು ಹಾಗೂ ಜಿಲ್ಲಾ ಪಂಚಾಯಿತಿ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳದಿರುವ ಬಗ್ಗೆಯೂ ತಂಡ ಅಸಮಾಧಾನ ಹೊರ ಹಾಕಿದೆ.

ADVERTISEMENT

ದೇವದುರ್ಗದಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಇಬ್ಬರು ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾದರೂ ಕ್ರಮವಾಗಿಲ್ಲ. ವರ್ಗಾವಣೆಯಾದ ಜಿಲ್ಲಾ ಪಂಚಾಯಿತಿ ಅಧಿಕಾರಿಗಳ ವಿರುದ್ಧವೂ ಕ್ರಮ ಜರುಗಿಸಿಲ್ಲ. ಪಿಡಿಒಗಳನ್ನು ಅಮಾನತುಗೊಳಿಸಿ ಬೇರೆ ಜಿಲ್ಲೆಗಳಲ್ಲಿ ಮರು ನಿಯುಕ್ತಿಗೊಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.