ADVERTISEMENT

ಪುನಶ್ಚೇತನಕ್ಕೆ ಕಾದಿರುವ ‘ಒಪೆಕ್‌ ಸೂಪರ್‌ ಸ್ಪೇಷಾಲಿಟಿ ಆಸ್ಪತ್ರೆ’

ನಾಗರಾಜ ಚಿನಗುಂಡಿ
Published 28 ಫೆಬ್ರುವರಿ 2020, 19:30 IST
Last Updated 28 ಫೆಬ್ರುವರಿ 2020, 19:30 IST
ರಾಯಚೂರಿನ ಒಪೆಕ್‌ ಆಸ್ಪತ್ರೆ
ರಾಯಚೂರಿನ ಒಪೆಕ್‌ ಆಸ್ಪತ್ರೆ   

ರಾಯಚೂರು: ನಗರದಲ್ಲಿ ಒಪೆಕ್‌ (ಪೆಟ್ರೋಲಿಯಂ ರಫ್ತು ದೇಶಗಳ ಸಂಘ) ನೆರವಿನಿಂದ ಸರ್ಕಾರವು ಕೋಟ್ಯಂತರ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ರಾಜೀವ್‌ ಗಾಂಧಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯು ಸಮಗ್ರ ಪುನಶ್ಚೇತನಕ್ಕೆ ಕಾಯುತ್ತಿದ್ದು, ಈ ವರ್ಷದ ಬಜೆಟ್‌ನಲ್ಲಿ ಸರ್ಕಾರ ವಿಶೇಷ ಅನುದಾನ ಒದಗಿಸಬಹುದು ಎನ್ನುವ ನಿರೀಕ್ಷೆ ಇದೆ.

ಪೆಥಾಲಾಜಿ, ಕಾರ್ಡಿಯಾಲಜಿ, ನ್ಯೂರೋಲಜಿ, ಯುರೋಲಜಿ, ಗ್ಯಾಸ್ಟ್ರೋಎಂಟ್ರಾಲಜಿ, ಆಪ್ತಮಾಲಜಿ ಹಾಗೂ ಅನಸ್ತೇಸಿಯಾಗೆ ಸಂಬಂಧಿಸಿದಂತೆ ಅತ್ಯಾಧುನಿಕ ಶಸ್ತ್ರಚಿಕಿತ್ಸಾ ವಿಭಾಗಗಳಿದ್ದರೂ ತಜ್ಞ ವೈದ್ಯರನ್ನು ನೇಮಿಸಿಕೊಳ್ಳುವ ಕಾರ್ಯ ನಡೆಯುತ್ತಿಲ್ಲ. ಸಮಗ್ರ ಅಭಿವೃದ್ಧಿಗಾಗಿ ಸರ್ಕಾರ ಇದುವರೆಗೂ ಕ್ರಮ ವಹಿಸಿಲ್ಲ.

2001 ರ ಕೊನೆಯಲ್ಲಿ ಕಾರ್ಯಾರಂಭ ಮಾಡಿರುವ ಆಸ್ಪತ್ರೆಯನ್ನು ಮೊದಲು ಅಪೊಲೋ ಆಸ್ಪತ್ರೆ ಸಮೂಹದ ನಿರ್ವಹಣೆಗೆ ಒಪ್ಪಿಸಲಾಗಿತ್ತು. 350 ಹಾಸಿಗೆ ಸೌಲಭ್ಯದೊಂದಿಗೆ ಪ್ರಾರಂಭವಾದ ಆಸ್ಪತ್ರೆಯಲ್ಲಿ ಈಗ 422 ಹಾಸಿಗೆ ಸೌಲಭ್ಯಕ್ಕೆ ಹೆಚ್ಚಳವಾಗಿದೆ. ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ₹35 ಕೋಟಿ ವೆಚ್ಚ ಮಾಡಿದ್ದಲ್ಲದೆ, ವಿವಿಧ ಸೌಲಭ್ಯಗಳನ್ನು ಒದಗಿಸಲು ಕೋಟ್ಯಂತರ ಮೌಲ್ಯದ ಉಪಕರಣಗಳನ್ನು ಅಳವಡಿಸಲಾಗಿದೆ. ಆದರೆ, ಅವುಗಳಿಂದ ಈ ಭಾಗದ ರೋಗಿಗಳಿಗೆ ಯಾವುದೇ ಅನುಕೂಲ ಆಗುತ್ತಿಲ್ಲ.

ADVERTISEMENT

72 ಎಕರೆ ವ್ಯಾಪ್ತಿಯಲ್ಲಿ ನಿರ್ಮಾಣವಾದ ಸೂಪರ್‌ ಸ್ಪೇಷಾಲಿಟಿ ಆಸ್ಪತ್ರೆಯನ್ನು ಅಪೊಲೋ ಆಸ್ಪತ್ರೆ ಸಮೂಹದಿಂದ 2010 ರಲ್ಲಿ ವಾಪಸ್ ಪಡೆದುಕೊಂಡ ಬಳಿಕ, ಮತ್ತೆ ಪೂರ್ಣಪ್ರಮಾಣದಲ್ಲಿ ಅದನ್ನು ಪ್ರಾರಂಭಿಸಿಲ್ಲ. ರಿಮ್ಸ್‌ ಆಸ್ಪತ್ರೆಯ ಮೂಲಕ ನಿರ್ವಹಣೆ ಮಾಡಲಾಗುತ್ತಿದೆ. ಸದ್ಯಕ್ಕೆ ಹೃದ್ರೋಗಕ್ಕೆ ಸಂಬಂಧಿಸಿದ ವಿಭಾಗ ಮತ್ತು ಡಯಾಲಿಸಿಸ್‌ ಮಾತ್ರ ಬಳಕೆ ಮಾಡಿಕೊಳ್ಳಲಾಗುತ್ತಿದೆ. ತಜ್ಞ ವೈದ್ಯರಿಲ್ಲದೆ, ಅನೇಕ ವಿಭಾಗಗಳು ಸಮರ್ಪಕವಾಗಿ ಕಾರ್ಯನಿರ್ವಹಣೆ ಸಾಧ್ಯವಾಗುತ್ತಿಲ್ಲ.

ಕಲ್ಯಾಣ ಕರ್ನಾಟಕ ಭಾಗದ ಬಡ ರೋಗಿಗಳಿಗೆ ವರದಾನ ಆಗಬೇಕಿದ್ದ ಸರ್ಕಾರಿ ಸೂಪರ್‌ ಸ್ಪೇಷಾಲಿಟಿ ಆಸ್ಪತ್ರೆಗೆ ಸ್ವತಂತ್ರ ಅಸ್ತಿತ್ವವಿಲ್ಲದೆ, ರಿಮ್ಸ್‌ನಿಂದ ಕಳುಹಿಸುವ ರೋಗಿಗಳಿಗೆ ಚಿಕಿತ್ಸೆ ನೀಡುವ ಕೇಂದ್ರವಾಗಿದೆ. ರಾಜ್ಯ ಸರ್ಕಾರಗಳು ಸಮಗ್ರ ಪುನಶ್ಚೇತನ ಕಾರ್ಯ ಮಾಡುತ್ತಿಲ್ಲ. ಹಲವಾರು ಸಂಘ–ಸಂಸ್ಥೆಗಳು ಪ್ರತಿಭಟನೆಗಳನ್ನು ನಡೆಸಿ ಮನವಿ ಸಲ್ಲಿಸಿದರೂ ಕ್ರಮವಾಗಿಲ್ಲ.

ಡಾ.ಎ.ಬಿ.ಮಲಕರೆಡ್ಡಿ ಅವರು 2001 ರಲ್ಲಿ ಆರೋಗ್ಯ ಸಚಿವರಾಗಿದ್ದ ಅವಧಿಯಲ್ಲಿ ಅಪೊಲೋ ನಿರ್ವಹಣೆ ಸಂಬಂಧವಾಗಿ ಒಪ್ಪಂದ ಏರ್ಪಟ್ಟಿತ್ತು. ಇದೀಗ ಸರ್ಕಾರದಿಂದ ಅಂತಹ ಯಾವುದೇ ಕ್ರಮವಾಗಿಲ್ಲ. ಸಣ್ಣ ಪ್ರಮಾಣದ ರೋಗಗಳಿಂದ ಹಿಡಿದು ಎಲ್ಲ ರೀತಿಯ ರೋಗಿಗಳನ್ನು ರಿಮ್ಸ್‌ ಆಸ್ಪತ್ರೆಯಲ್ಲೇ ಸೇರ್ಪಡೆ ಮಾಡಿಕೊಳ್ಳಲಾಗುತ್ತಿದೆ. ನೇರವಾಗಿ ಒಪೆಕ್‌ ಆಸ್ಪತ್ರೆಗೆ ರೋಗಿಗಳನ್ನು ಸೇರ್ಪಡೆ ಮಾಡಿಕೊಳ್ಳುತ್ತಿಲ್ಲ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.