ADVERTISEMENT

ಪುನರುತ್ಥಾನವಾದ ತುಂಗಭದ್ರಾ ಸರ್ಕಾರಿ ಶಾಲೆ

ನಾಲ್ಕು ಕೋಣೆಗಳು, ಶೌಚಾಲಯಗಳನ್ನು ನಿರ್ಮಿಸಿದ ಓಸಾಟ್‌ ಸಂಸ್ಥೆ

ನಾಗರಾಜ ಚಿನಗುಂಡಿ
Published 18 ನವೆಂಬರ್ 2019, 19:45 IST
Last Updated 18 ನವೆಂಬರ್ 2019, 19:45 IST
ರಾಯಚೂರು ತಾಲ್ಲೂಕು ತುಂಗಭದ್ರಾ ಗ್ರಾಮದ ಸರ್ಕಾರಿ ಶಾಲಾ ಕೋಣೆಯು 2009 ರ ಪ್ರವಾಹದಿಂದ ಹಾಳಾಗಿದ್ದ ಚಿತ್ರಣ (ಸಂಗ್ರಹಚಿತ್ರ)
ರಾಯಚೂರು ತಾಲ್ಲೂಕು ತುಂಗಭದ್ರಾ ಗ್ರಾಮದ ಸರ್ಕಾರಿ ಶಾಲಾ ಕೋಣೆಯು 2009 ರ ಪ್ರವಾಹದಿಂದ ಹಾಳಾಗಿದ್ದ ಚಿತ್ರಣ (ಸಂಗ್ರಹಚಿತ್ರ)   

ರಾಯಚೂರು: ತಾಲ್ಲೂಕಿನ ಗಡಿಭಾಗದ ತುಂಗಭದ್ರಾ ಗ್ರಾಮದ ಸರ್ಕಾರಿ ಶಾಲೆಯು 2009 ರ ಪ್ರವಾಹದಲ್ಲಿ ಸಂಪೂರ್ಣ ನಾಶವಾಗಿತ್ತು. ‘ಒನ್‌ ಸ್ಕೂಲ್‌ ಆಟ್‌ ಎ ಟೈಮ್‌–ಓಸಾಟ್‌’ ಸರ್ಕಾರೇತರ ಸಂಸ್ಥೆಯು ಶಾಲಾ ಮಕ್ಕಳ ಸಂಕಷ್ಟಕ್ಕೆ ಸ್ಪಂದಿಸಿ ಶಾಲೆಯನ್ನು ಪುನರುತ್ಥಾನಗೊಳಿಸಿದೆ.

ನಾಲ್ಕು ನೂತನ ಕೋಣೆಗಳನ್ನು, ಶೌಚಾಲಯಗಳನ್ನು ನಿರ್ಮಿಸಿದ್ದಲ್ಲದೆ ಹಲವು ಮೂಲ ಸೌಕರ್ಯಗಳನ್ನು ಅಭಿವೃದ್ಧಿಗೊಳಿಸಿ ಪಾಠ, ಪ್ರವಚನಕ್ಕೆ ಅನುಕೂಲ ಮಾಡಿದೆ. ಗಮನಾರ್ಹ ಸಂಗತಿಯೆಂದರೆ, 2009ರ ಪ್ರವಾಹದಲ್ಲಿ ನಾಶವಾಗಿದ್ದ ಶಾಲೆಯನ್ನು ಮತ್ತೆ ನಿರ್ಮಿಸುವ ಕಾಮಗಾರಿ ಆರಂಭಿಸುವುದಕ್ಕೆ ಒಂಭತ್ತು ವರ್ಷಗಳಾಗಿವೆ. ಶಾಲೆಗಾಗಿ ಮೀಸಲಿದ್ದ ಭೂಮಿಯ ದಾಖಲೆಗಳನ್ನು ಸಂಗ್ರಹಿಸಿ, ಸ್ಥಳೀಯವಾಗಿ ಎದುರಾದ ತೊಂದರೆಗಳನ್ನೆಲ್ಲ ಪರಿಹರಿಸಿಕೊಳ್ಳಲು ಸಂಸ್ಥೆಯ ಪ್ರತಿನಿಧಿಗಳು ಸಾಕಷ್ಟು ಶ್ರಮವಹಿಸಿದ್ದಾರೆ. 2019 ರ ಜನವರಿಯಲ್ಲಿ ಶಾಲಾಕೋಣೆಗಳ ಕಟ್ಟಡ ನಿರ್ಮಾಣವನ್ನು ಆರಂಭಿಸಿ, 10 ತಿಂಗಳುಗಳಲ್ಲಿ ಸಂಪೂರ್ಣಗೊಳಿಸಿದ್ದಾರೆ.

ಯುಎಸ್‌ಎ ಸಿಲಿಕಾನ್‌ ಸೇಜ್‌ ಬಿಲ್ಡರ್ಸ್‌ ಕಂಪೆನಿಯ ಸಂಜೀವ ಆಚಾರ್ಯ, ಐಐಟಿ ಮುಂಬೈನ 92 ಸ್ನೇಹಿತರ ತಂಡ, ಬೆಂಗಳೂರಿನ ಮಂಜುಳಾ, ನವದೆಹಲಿಯ ಭಾರತೀಯ ಕೊಳಾಯಿ ಸಂಘದಿಂದ ಆರ್ಥಿಕ ನೆರವು ಪಡೆದು ನೂತನ ಶಾಲಾ ಕಟ್ಟಡ ನಿರ್ಮಾಣವನ್ನು ಓಸಾಟ್‌ ಮಾಡಿದೆ. ಪ್ರವಾಹದಿಂದ ಶಾಲಾ ಕೋಣೆಗಳು ಹಾಳಾಗಿದ್ದನ್ನು ಸ್ವಯಂ ಗಮನಿಸಿದ ಓಸಾಟ್‌ ನೆರವು ಒದಗಿಸಿದೆ.

ADVERTISEMENT

ಶಾಲಾ ನಿರ್ಮಾಣಕ್ಕೆ ಅಗತ್ಯವಾದ ಭೂ ದಾಖಲೆಗಳನ್ನು ಪಡೆಯುವುದಕ್ಕಾಗಿ ಐಪಿಎಸ್‌ ಅಧಿಕಾರಿ ಜಿ.ರಾಧಿಕಾ ಹಾಗೂ ಎಐಜಿಪಿ ಅವರ ಸಹಾಯವನ್ನು ಪಡೆಯಬೇಕಾದ ಜಟೀಲ ಸನ್ನಿವೇಶವನ್ನು ಸಂಸ್ಥೆಯು ನಿಭಾಯಿಸಿದೆ. ₹40 ಲಕ್ಷ ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಲಾಗಿದೆ.

‘ದೇವಸ್ಥಾನ ನಿರ್ಮಾಣಕ್ಕೆ ವಹಿಸುವ ಶ್ರದ್ಧೆಯನ್ನು ಶಾಲೆಗಳನ್ನು ನಿರ್ಮಾಣ ಮಾಡುವುದಕ್ಕೂ ಕೊಡಬೇಕಾಗಿದೆ. ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರಕಿಸಬೇಕು ಎನ್ನುವ ಸದುದ್ದೇಶ ಇಟ್ಟುಕೊಂಡು ಸಂಸ್ಥೆಯ ಮೂಲಕ ಅನುಕೂಲ ಮಾಡಿಕೊಡಲಾಗುತ್ತಿದೆ’ ಎನ್ನುತ್ತಾರೆ ಸಂಸ್ಥೆಯ ಸಂಸ್ಥಾಪಕ ಸದಸ್ಯ ಶ್ರೀವತ್ಸಾ ದುಗ್ಲಾಪುರ ಅವರು.

‘ಪ್ರವಾಹದಿಂದ ಹಾನಿ ಅನುಭವಿಸಿದ ಶಾಲಾ ಮಕ್ಕಳಿಗಾಗಿ ಅನುಕೂಲ ಮಾಡಿಕೊಡುತ್ತಿರುವುದು ತುಂಗಭದ್ರಾ ಗ್ರಾಮದ್ದು 28ನೇ ಯೋಜನೆಯಾಗಿದೆ. ಈಚೆಗೆ ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ಹಲವೆಡೆ ಮತ್ತೆ ಪ್ರವಾಹದಿಂದ ನೂರಾರು ಶಾಲೆಗಳು ಹಾಳಾಗಿವೆ. ಈಗಾಗಲೇ ಸಂಸ್ಥೆಯು ಕೆಲವು ತಾಣಗಳನ್ನು ಗುರುತಿಸಿದ್ದು, 10 ಕಡೆ ಶಾಲಾ ಕಟ್ಟಡ ನಿರ್ಮಾಣ ಆರಂಭಿಸಿದೆ’ ಎಂದು ತಿಳಿಸಿದರು.

ಮಕ್ಕಳ ಕಲಿಕೆಗೆ ಅನುಕೂಲವಾಗುವಂತೆ, ಶಾಲೆಯ ಗೋಡೆಗಳು ಹಾಗೂ ಆವರಣದ ಗೋಡೆಗಳ ಮೇಲೆ ವಿಜ್ಞಾನ, ಗಣಿತ, ಇಂಗ್ಲಿಷ್‌ ಹಾಗೂ ಕನ್ನಡ ಭಾಷೆಗೆ ಸಂಬಂಧಿಸಿದಂತೆ ಎದ್ದುಕಾಣುವ ರೀತಿಯಲ್ಲಿ ಬಣ್ಣದ ಚಿತ್ರಗಳನ್ನು ಬಿಡಿಸಲಾಗಿದೆ. ಇದರಿಂದ ಮಕ್ಕಳ ಸಾಮಾನ್ಯ ಜ್ಞಾನ ವೃದ್ಧಿಸಲಿದೆ.

ಒನ್‌ ಸ್ಕೂಲ್‌ ಆಟ್‌ ಎ ಟೈಮ್‌ (ಓಸಾಟ್‌) ಸರ್ಕಾರೇತರ ಸಂಸ್ಥೆಯನ್ನು ಅಮೆರಿಕದಲ್ಲಿರುವ ಅನಿವಾಸಿ ಭಾರತೀಯರು 2003 ರಲ್ಲಿ ಆರಂಭಿಸಿದ್ದಾರೆ. ಸಮುದಾಯ ಒಳಿತಿಗಾಗಿ ಶಿಕ್ಷಣಕ್ಕೆ ಅನುಕೂಲ ಮಾಡಿಕೊಡುತ್ತಿದೆ. ಇವರೆಗೂ ದೇಶದಲ್ಲಿ 28 ಗ್ರಾಮಗಳಲ್ಲಿ ಶಾಲೆಗಳನ್ನು ನಿರ್ಮಿಸಿಕೊಟ್ಟಿದ್ದು, 22 ಕರ್ನಾಟಕದ್ದು ಎಂಬುದು ವಿಶೇಷ. ಈ ವರ್ಷ ಮತ್ತೆ ಪ್ರವಾಹದಿಂದ ಹಾನಿಯಾಗಿದ್ದ 10 ಗ್ರಾಮಗಳಲ್ಲಿ ಶಾಲಾ ಕಟ್ಟಡಗಳನ್ನು ನಿರ್ಮಿಸುತ್ತಿದ್ದಾರೆ. ಸಂಸ್ಥಾಪಕ ಸದಸ್ಯರಾದ ಶ್ರೀವತ್ಸಾ ದುಗ್ಲಾಪುರ ಹಾಗೂ ವಾದಿರಾಜ ಭಟ್‌ ಅವರು ಅಮೆರಿಕದಿಂದ ಭಾರತಕ್ಕೆ ಹಿಂತಿರುಗಿದ ಬಳಿಕ ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.