ರಾಯಚೂರು: ‘ಪಂಡಿತ ತಾರಾನಾಥರು ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಭದ್ರ ಬುನಾದಿ ಹಾಕುವುದರ ಮೂಲಕ ಶಿಕ್ಷಣಕ್ಕೆ ಮಹತ್ವ ನೀಡಿದ್ದರು’ ಎಂದು ರಾಯಚೂರಿನ ಎಸ್ಎಸ್ಆರ್‌ಜಿ ಮಹಿಳಾ ಕಾಲೇಜಿನ ಉಪನ್ಯಾಸಕಿ ರಾಜೇಶ್ವರಿ ವಿರಕ್ತಮಠ ಹೇಳಿದರು.
ಇಲ್ಲಿನ ಹಮ್‌ದರ್ದ್ ಶಾಲೆ ಆವರಣದಲ್ಲಿ ತಾರಾನಾಥ ಶಿಕ್ಷಣ ಸಂಸ್ಥೆ ವತಿಯಿಂದ ನಡೆದ ಪಂಡಿತ ತಾರಾನಾಥರವರ 134ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಅವರು ಶಿಕ್ಷಣಕ್ಕೆ ಆದ್ಯತೆ ನೀಡಿ ಅಧ್ಯಾಪಕರ ಏಳಿಗೆಗಾಗಿ ಶ್ರಮಿಸಿದರು. ಜೀವನದಲ್ಲಿ ಶಿಕ್ಷಕರಾಗಿಯೇ ಮುಂದುವರಿದರು. ವೃತ್ತಿ ಜೀವನಕ್ಕೆ ಸೀಮಿತವಾಗದೆ ಹಲವು ಸಮಾಜಮುಖಿ ಕಾರ್ಯ ಮಾಡಿದ್ದಾರೆ’ ಎಂದರು.
‘ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ವ್ಯಕ್ತಿತ್ವ ರೂಪಿಸುವಂಥ ಶಿಕ್ಷಣ ನೀಡುತ್ತಿದ್ದರು. ನಿಜಾಮರ ನಿರಂಕುಶ ಆಡಳಿತ, ಜಜಮನಿ ಪದ್ಧತಿ ಪ್ರತಿಭಟಿಸಿ ಲೇಖನಗಳನ್ನು ಬರೆಯುತ್ತಿದ್ದರು. ಅದಕ್ಕಾಗಿ ಅವರನ್ನು ಗಡಿಪಾರು ಮಾಡಲಾಯಿತು’ ಎಂದು ತಿಳಿಸಿದರು.
‘ಕನ್ನಡದಲ್ಲಿ ನಾಟಕ, ಕಥೆ ಸೇರಿ ಅನೇಕ ಕೃತಿಗಳನ್ನು ರಚಿಸಿ ಕನ್ನಡ ಸಾಹಿತ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದರಿಂದ ಜನರು ಅವರನ್ನು ಪಂಡಿತ ಎಂದು ಕರೆದರು’ ಎಂದರು.
ವಕೀಲ ಅಂಬಾಪತಿ ಪಾಟೀಲ, ತಾರಾನಾಥ ಶಿಕ್ಷಣ ಸಂಸ್ಥೆಯ ಪವನಕುಮಾರ ಸುಖಾಣಿ, ಪುರುಷೋತ್ತಮದಾಸ ಇನ್ನಾಣಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಶಿಕ್ಷಕಿ ವಿಜಯಲಕ್ಷ್ಮಿ ನಿರೂಪಿಸಿದರು. ಪ್ರಾಚಾರ್ಯ ಕಾಶಪ್ಪ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.