ADVERTISEMENT

ರಾಯಚೂರು | 25 ಪಂಚಾಯಿತಿಗಳಿಗೆ ಕಾಯಂ ಪಿಡಿಒಗಳಿಲ್ಲ

ಜಾಲಹಳ್ಳಿ ಗ್ರಾ.ಪಂಗೆ ಎರಡು ವರ್ಷಗಳಿಂದ ಪಿಡಿಒ ಇಲ್ಲ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2025, 8:02 IST
Last Updated 5 ಆಗಸ್ಟ್ 2025, 8:02 IST
ಜಾಲಹಳ್ಳಿ ಪಟ್ಟಣದಲ್ಲಿರುವ ಗ್ರಾ.ಪಂ ಕಚೇರಿಯ ಹೊರನೋಟ
ಜಾಲಹಳ್ಳಿ ಪಟ್ಟಣದಲ್ಲಿರುವ ಗ್ರಾ.ಪಂ ಕಚೇರಿಯ ಹೊರನೋಟ   

ಜಾಲಹಳ್ಳಿ: ದೇವದುರ್ಗ ತಾಲ್ಲೂಕಿನಲ್ಲಿಯೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಜಾಲಹಳ್ಳಿ ಕಳೆದ ಎರಡು ವರ್ಷಗಳಿಂದ ಗ್ರಾಮ ಪಂಚಾಯಿತಿಗೆ ಕಾಯಂ ಪಿಡಿಒ ಇಲ್ಲ. ತಾಲ್ಲೂಕು ಆಡಳಿತ ನಿರ್ಲಕ್ಷ್ಯಕ್ಕೆ ಗ್ರಾಮೀಣ ಜನತೆ ಹಿಡಿ ಶಾಪ ಹಾಕುತ್ತಿದ್ದಾರೆ.

ಹಿಂದಿನ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಇಲ್ಲಿನ ಸಮಸ್ಯೆ ಅರಿತು ಸ್ಥಳೀಯ ಗ್ರಾಮ ಪಂಚಾಯಿತಿಯನ್ನು ಮೇಲ್ದರ್ಜೆಗೆ ಏರಿಸಿ ಪಟ್ಟಣ ಪಂಚಾಯಿತಿಯಾಗಿ ಮಾಡಿತ್ತು. ಆದರೆ, ಮೇಲ್ದರ್ಜೆಗೆ ಮುನ್ನ ನಿಯಮಾವಳಿ ಪಾಲಿಸದಿರುವ ಹಾಗೂ ನರೇಗಾ ಯೋಜನೆ ಕೈಬೀಡುವುದರಿಂದ ಸ್ಥಳೀಯ ಕೂಲಿಕಾರ್ಮಿಕರಿಗೆ ತೊಂದರೆ ಉಂಟಾಗುತ್ತದೆ ಎನ್ನುವ ಕಾರಣ ನೀಡಿ ಸ್ಥಳೀಯ ಕೆಲ ನಿವಾಸಿಗಳು ಕಲಬುರಗಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಿ ತಡೆ ತಂದರು. ಮರಳಿ ಗ್ರಾಮ ಪಂಚಾಯಿತಿಯಾದ್ದರಿಂದ ಅಲ್ಲಿಂದ ಇಲ್ಲಿಯವರೆಗೆ ಕಾಯಂ ಪಿಡಿಒ ನೀಡದೇ ತಾಲ್ಲೂಕು ಆಡಳಿತ ಬರೀ ಎರವಲು ಸೇವೆಗೆ ನಿಯೋಜನೆ ಮಾಡುತ್ತಾ ಬಂದಿದೆ.

ಇದರಿಂದ ಪಟ್ಟಣದಲ್ಲಿ ಬೆಳೆಯುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಸ್ಥಳೀಯ ಗ್ರಾಮ ಪಂಚಾಯಿತಿಯಿಂದ ಯಾವುದೇ ಸೌಲಭ್ಯ ನೀಡಲು ಸಾಧ್ಯವಾಗದೇ ತೊಂದರೆ ಅನುಭವಿಸುವಂತಾಗಿದೆ.

ADVERTISEMENT

ದೇವದುರ್ಗ ತಾಲ್ಲೂಕಿನಲ್ಲಿ ನರೇಗಾ ಯೋಜನೆಯಡಿ ದೊಡ್ಡ ಭ್ರಷ್ಟಾಚಾರ ನಡೆದಿದೆ ಎಂದು ವಿಧಾನ ಪರಿಷತ್ ಸದಸ್ಯರು ಪ್ರಶ್ನೆ ಎತ್ತಿದ ಹಿನ್ನೆಲೆಯಲ್ಲಿ ತನಿಖೆಯಾಗಿ ಇಬ್ಬರು ಅಧಿಕಾರಿಗಳು ಸೇರಿ 33 ಪಿಡಿಒಗಳು ಅಮಾನತು ಆಗಿದ್ದರು. 12 ಜನ ಎಂಜಿನಿಯರ್‌ಗಳನ್ನು ನೇಮಿಸಿಕೊಂಡ ಸಂಸ್ಥೆಗೆ ಮರಳಿಸಲಾಗಿತ್ತು.

25 ಗ್ರಾ.ಪಂಗಳಿಗೆ ಪಿಡಿಒಗಳಿಲ್ಲ: ನರೇಗಾ ಯೋಜನೆಯಡಿ ನಡೆದಿರುವ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಮಟ್ಟದ ಸಾಮಾಜಿಕ‌ ಲೆಕ್ಕ ಪರಿಶೋಧನಾ ತಂಡ ತನಿಖೆ ಕೈಗೊಂಡು ವರದಿ ಸಲ್ಲಿಸಿದ ಹಿನ್ನೆಲೆಯಲ್ಲಿ ಬಹುತೇಕ ಪಿಡಿಒಗಳು ಅಮಾನತುಗೊಂಡು ತಾಲ್ಲೂಕು ಖಾಲಿ ಮಾಡಿದರು. ಆದರೆ, ಅವರನ್ನು ಕೆಲವೇ ತಿಂಗಳಲ್ಲಿ ಬೇರೆ ಜಿಲ್ಲೆಯಲ್ಲಿ ನಿಯೋಜನೆ ಮಾಡಲಾಗಿದೆ. ಇತ್ತ ದೇವದುರ್ಗ ತಾಲ್ಲೂಕಿನಲ್ಲಿ ಖಾಲಿಯಾಗಿರುವ ಸ್ಥಾನಗಳಿಗೆ ಹೊಸ ಪಿಡಿಒಗಳನ್ನು ನೇಮಕ ಮಾಡಲಿಲ್ಲ. ಇದರಿಂದ ತಾಲ್ಲೂಕಿನ 33 ಗ್ರಾಮ ಪಂಚಾಯಿತಿಗಳಲ್ಲಿ 25 ಪಿಡಿಒ ಹುದ್ದೆಗಳು ಖಾಲಿ ಇವೆ! ಉಳಿದ 8 ಜನ ಪಿಡಿಒಗಳಿಗೆ 33 ಪಂಚಾಯಿತಿಗಳ ಉಸ್ತುವಾರಿ ವಹಿಸಲಾಗಿದೆ.

‘ಯಾವುದೇ ಸರ್ಕಾರಿ ಸಭೆಯಲ್ಲಿ ಕನಿಷ್ಠ ಸಂಖ್ಯೆಯ ಅಧಿಕಾರಿಗಳು, ಚುನಾಯಿತ ಸದಸ್ಯರು ಇಲ್ಲವಾದರೆ, ಕ್ರಿಯಾಯೋಜನೆಯ ಪಟ್ಟಿಯೇ ಅನುಮೋದನೆಗೊಳ್ಳುವುದಿಲ್ಲ. ಇಂತಹ ಸ್ಥಿತಿಯಲ್ಲಿ ಗ್ರಾಮೀಣಾಭಿವೃದ್ಧಿಗೆ ಅಗತ್ಯವಾಗಿ ಬೇಕಾಗಿರುವ ಪಿಡಿಒಗಳನ್ನು ನೇಮಕ ಮಾಡಿಕೊಳ್ಳದಿದ್ದರೆ, ತಾಲ್ಲೂಕಿನ ಅಭಿವೃದ್ಧಿ ಹೇಗೆ ಸಾಧ್ಯ’ ಎಂದು ಎನ್ನುವುದು ಜನಪ್ರತಿನಿಧಿಗಳ ಪ್ರಶ್ನೆಯಾಗಿದೆ.

‘ತಾಲ್ಲೂಕಿನಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜನ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ನೀಡದ ಕಾರಣ ಈ ರೀತಿಯಾಗಿ ಸೇಡು ತೀರಿಸಿಕೊಳ್ಳಲಾಗುತ್ತಿದೆ’ ಎಂದು ಹೆಸರು ಹೇಳಲು ಇಚ್ಛಿಸದ ಮುಖಂಡರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

‘ಜನರಿಗೆ ಸಮಸ್ಯೆ ಆಗದಂತೆ ಕ್ರಮ’:

‘ದೇವದುರ್ಗ ತಾಲ್ಲೂಕಿನ 33 ಗ್ರಾಮ ಪಂಚಾಯಿತಿಗಳಲ್ಲಿ 8 ಗ್ರಾ.ಪಂಗಳಿಗೆ ಮಾತ್ರ ಕಾಯಂ ಪಿಡಿಒಗಳು ಇದ್ದಾರೆ. ಉಳಿದ 25 ಪಂಚಾಯಿತಿಗಳಿಗೆ ಕಾಯಂ ಪಿಡಿಒಗಳು ಇಲ್ಲದ್ದರಿಂದ ಸಮಸ್ಯೆ ಆಗಿದೆ. ಇರುವಂತಹ ಅಧಿಕಾರಿಗಳ ಮೂಲಕ ಜನರಿಗೆ ಯಾವುದೇ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಲಾಗುತ್ತಿದೆ’ ಎಂದು ದೇವದುರ್ಗ ತಾಲ್ಲೂಕು ಪಂಚಾಯಿತಿ ಇಒ ಬಸವರಾಜ ಹಟ್ಟಿ ತಿಳಿಸಿದರು. ‘ರಾಜ್ಯಮಟ್ಟದಲ್ಲಿ ನೇಮಕ ಪ್ರಕ್ರಿಯೆ ನಡೆಯುತ್ತಿದ್ದು ಶೀಘ್ರವೇ ಜಿಲ್ಲೆಗೆ ಪಿಡಿಒಗಳು ಬರುತ್ತಾರೆ. ಆ ಸಂದರ್ಭದಲ್ಲಿ ನಮ್ಮ ತಾಲ್ಲೂಕಿನ ಎಲ್ಲಾ ಪಂಚಾಯಿತಿಗಳಿಗೆ ನಿಯೋಜನೆ ಮಾಡಬಹುದು’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.