ಮುದಗಲ್: ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್ ನಿಷೇಧ ಇದ್ದು, ಪಟ್ಟಣದಲ್ಲಿ ಪುರಸಭೆ ಅಧಿಕಾರಿಗಳು ಎರಡು ಬಾರಿ ದಾಳಿ ಮಾಡಿ 81 ಕೆ.ಜಿ ಪ್ಲಾಸ್ಟಿಕ್ ವಶ ಪಡಿಸಿಕೊಂಡಿದ್ದರೂ ಪ್ಲಾಸ್ಟಿಕ್ ಬಳಕೆ ಎಗ್ಗಿಲ್ಲದೆ ಸಾಗಿದೆ.
ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಎಲ್ಲೆಂದರಲ್ಲಿ ಸಾಗುವಾಗ ತ್ಯಾಜ್ಯದ ರಾಶಿಗಳಲ್ಲಿ ಬಹುಪಾಲು ನಿಷೇಧಿತ ಪ್ಲಾಸ್ಟಿಕ್‌ಗಳೇ ಇರುತ್ತವೆ. ಮಣ್ಣಿನಲ್ಲಿ ಕರಗದ, 40 ಮೈಕ್ರಾನ್‌ಗಿಂತ ಕಡಿಮೆ ಸಾಮರ್ಥ್ಯದ ನಿಷೇಧಿತ ಪ್ಲಾಸ್ಟಿಕ್ ಬ್ಯಾಗ್‌ಗಳನ್ನು ಅಂಗಡಿಗಳಲ್ಲಿ ಬಳಸಲಾಗುತ್ತಿದೆ. ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್‌ಗಳ ಬಳಕೆ ನಿಯಂತ್ರಿಸದೆ ಅಧಿಕಾರಿಗಳು ಕೈಕಟ್ಟಿ ಕುಳಿತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಮುದಗಲ್ ಪಟ್ಟಣದಲ್ಲಿ 123ಕ್ಕೂ ಹೆಚ್ಚು ಅಂಗಡಿಗಳು ಇವೆ. ಇವುಗಳಲ್ಲಿ 50 ಅಂಗಡಿಗಳು ಪುರಸಭೆಯಿಂದ ಪರವಾನಗಿ ಪಡೆದಿವೆ. ಮುದಗಲ್ ಹೋಬಳಿಯಲ್ಲಿ ಮಾಂಸ, ಮೀನು ಮಾರುಕಟ್ಟೆ, ಹೂವು, ತರಕಾರಿ ಮತ್ತು ಹಣ್ಣಿನ ಅಂಗಡಿಗಳಲ್ಲಿ ನಿಷೇಧಿತ ಪ್ಲಾಸ್ಟಿಕ್ ಕ್ಯಾರಿಬ್ಯಾಗ್‌ಗಳಲ್ಲಿ ಸಾಮಗ್ರಿ ಕಟ್ಟಿಕೊಡಲಾಗುತ್ತಿದೆ. ಕಿರಾಣಿ ಅಂಗಡಿ, ಹೋಟೆಲ್‌ಗಳು, ಫಾಸ್ಟ್‌ಫುಡ್‌ಗಳಲ್ಲಿಯೂ ತಿನಿಸುಗಳನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಕೊಡುತ್ತಾರೆ.
ಪ್ಲಾಸ್ಟಿಕ್ ಉತ್ಪನ್ನಗಳಾದ ಸ್ಟ್ರಾ, ಲೋಟಗಳು, ಹಾಳೆ, ಪ್ಲೇಟ್‌ಗಳು ಸೇರಿದಂತೆ ಬಗೆಬಗೆಯ ಸಾಮಗ್ರಿಗಳನ್ನು ಬಹಿರಂಗವಾಗಿ ಅಂಗಡಿಗಳಲ್ಲಿ ಮಾರಾಟ ಮಾಡುತ್ತಿದ್ದರೂ ಅಧಿಕಾರಿಗಳು ಕ್ರಮಕ್ಕೆ ಮುಂದಾಗುತ್ತಿಲ್ಲ. ಪುರಸಭೆ ಅಧಿಕಾರಿಗಳು ವರ್ಷಕ್ಕೆ ಒಂದೆರಡು ಬಾರಿ ಕಾಟಾಚಾರಕ್ಕೆ ಎಂಬಂತೆ ಕಾರ್ಯಾಚರಣೆ ನಡೆಸಿ, ಕೆಲವರಿಗೆ ದಂಡ ಹಾಕಿ ಕೈ ತೊಳೆದುಕೊಳ್ಳುತ್ತಾರೆ.
ಗ್ರಾಮೀಣ ಪ್ರದೇಶದಲ್ಲಿ ಪಂಚಾಯಿತಿ ಅಧಿಕಾರಿಗಳಿಂದ ಯಾವುದೇ ದಾಳಿ ನಡೆಯುತ್ತಿಲ್ಲ. ಸುತ್ತಲಿನ ನಾಗರಾಳ, ನಾಗಲಾಪುರ, ಆಮದಿಹಾಳ, ಖೈರವಾಡಗಿ ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ ಪ್ಲಾಸ್ಟಿಕ್ ಬಳಕೆ ಹೆಚ್ಚುತ್ತಿದ್ದು, ರಸ್ತೆ ಬದಿಗಳಲ್ಲಿ, ಇಕ್ಕೆಲಗಳಲ್ಲಿ ಎಲ್ಲಿ ನೋಡಿದರೂ ಬಳಸಿ ಬಿಸಾಡಿದ ಪ್ಲಾಸ್ಟಿಕ್ ವಸ್ತುಗಳು ಕಂಡುಬರುತ್ತವೆ.
ಸಾರ್ವಜನಿಕರು ಸಾಮಗ್ರಿಗಳನ್ನು ಖರೀದಿಸಲು ಬರುವ ವೇಳೆ ಬಹುತೇಕರು ಕೈಚೀಲ ತರುವುದಿಲ್ಲ. ಅನಿವಾರ್ಯವಾಗಿ ಪ್ಲಾಸ್ಟಿಕ್ ಕೈಚೀಲಗಳಲ್ಲಿ ಸಾಮಗ್ರಿಗಳನ್ನು ತುಂಬಿ ಕೊಡುತ್ತೇವೆ ಎಂದು ಹೆಸರು ಹೇಳಲು ಇಚ್ಛಿಸದ ವ್ಯಾಪಾರಿ ಹೇಳುತ್ತಾರೆ.
ರಸ್ತೆ ಬದಿಯಲ್ಲಿರುವ ಹೋಟೆಲ್‌ಗಳಲ್ಲಿ ಚಹಾ, ನೀರು, ಜೂಸ್ ಕೂಡ ಪ್ಲಾಸ್ಟಿಕ್ ಲೋಟಗಳಲ್ಲಿ ನೀಡುತ್ತಾರೆ. ಬೇರೆಯವರು ಬಳಕೆ ಮಾಡುತ್ತಾರೆ ಎಂಬ ಕಾರಣಕ್ಕೆ ಕೆಲ ಗ್ರಾಹಕರು ಸ್ಟೀಲ್ ಲೋಟಗಳ ಬದಲು ಪ್ಲಾಸ್ಟಿಕ್ ಲೋಟಗಳನ್ನು ಕೇಳಿ ಪಡೆಯುತ್ತಾರೆ.
‘ಪ್ಲಾಸ್ಟಿಕ್ ಚೀಲ ಕೊಡದಿದ್ದರೆ ವ್ಯಾಪಾರ ಆಗುವುದಿಲ್ಲ ಎನ್ನುವ ಭಾವನೆ ಬಹುತೇಕ ಅಂಗಡಿ ವ್ಯಾಪಾರಿಗಳಲ್ಲಿ ಮನೆ ಮಾಡಿದೆ. ಸ್ವಲ್ಪವೇ ಸಾಮಗ್ರಿ ಇದ್ದರೂ ಪ್ಲಾಸ್ಟಿಕ್ ಬ್ಯಾಗಿನಲ್ಲಿ ಕೊಡಿ ಎಂದು ಕೇಳುತ್ತಾರೆ’ ಎಂದು ವ್ಯಾಪಾರಿಯೊಬ್ಬರು ತಿಳಿಸಿದರು.
ಎಲ್ಲೆಂದರಲ್ಲಿ ಬಿಸಾಡಿದ ಪ್ಲಾಸ್ಟಿಕ್ ತಿನ್ನುವ ಜಾನುವಾರು ಅನಾರೋಗ್ಯಕ್ಕೆ ತುತ್ತಾಗುತ್ತಿವೆ. ರಸ್ತೆ ಬದಿಯಲ್ಲಿ ಬಿಸಾಡಿದ ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಬೆಂಕಿಹಚ್ಚಿದ ವೇಳೆ ಸುತ್ತಲಿನ ಪರಿಸರ ಕೆಲ ಸಮಯ ವಿಷಮಯವಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.