
ಸಿಂಧನೂರು: ‘ತುಂಗಭದ್ರಾ ಜಲಾಶಯದ ನೀರಿನ ಅಂಕಿ-ಅಂಶಗಳ ಕುರಿತು ಅರ್ಧಮರ್ಧ ಮಾಹಿತಿ ತಿಳಿದುಕೊಂಡು ಶಾಸಕ ಹಂಪನಗೌಡ ಬಾದರ್ಲಿ ಅವರು ಮಾತನಾಡಿರುವುದು ಅಸಮಂಜಸವಾಗಿದೆ’ ಎಂದು ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಹೇಳಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ಪಕ್ಷಾತೀತವಾಗಿ ಎಲ್ಲರನ್ನೂ ಸಭೆಗೆ ಆಹ್ವಾನಿಸಲಾಗಿತ್ತು. ಆದರೆ, ಕಾಂಗ್ರೆಸ್‍ನವರು ಯಾರೂ ಬಂದಿರಲಿಲ್ಲ. ಜಲಾಶಯದಲ್ಲಿ ಈಗಿನ ನೀರಿನ ಲಭ್ಯತೆಯ ಆಧಾರದ ಮೇಲೆ ಎರಡನೇ ಬೆಳೆಗೆ ನೀರು ಹರಿಸಬಹುದು ಎಂದು ಒಗ್ಗೂಡಿ ಒತ್ತಾಯಿಸಲಾಗಿದೆ’ ಎಂದರು.
‘ಜೂ.6ರಂದು ತಯಾರಾಗಿದ್ದ ನೀರಿನ ಅಂಕಿ-ಅಂಶಗಳನ್ನೇ ಹಂಪನಗೌಡರು ತಿಳಿಸಿದ್ದಾರೆ. ಆದರೆ, ನವೆಂಬರ್ ತಿಂಗಳ ಹೊಸ ಅಂಕಿ-ಅಂಶಗಳು ಇನ್ನೂ ತಯಾರಾಗಿಲ್ಲ. ಡ್ಯಾಂ ಮತ್ತು ನೀರಿನ ಬಗ್ಗೆ ಅಪಾರ ಜ್ಞಾನ ಹೊಂದಿರುವ ಮತ್ತು ಅನುಭವಿ ರಾಜಕಾರಣಿ ಹಂಪನಗೌಡರೇ ಆತುರದಲ್ಲಿ ತಪ್ಪು ಮಾಹಿತಿ ನೀಡಿ ರೈತರನ್ನು ದಾರಿ ತಪ್ಪಿಸಿ, ಜೆಡಿಎಸ್ ಮತ್ತು ಬಿಜೆಪಿ ಪಕ್ಷದವರ ಮೇಲೆ ಗೂಬೆ ಕೂರಿಸುತ್ತಿದ್ದಾರೆ’ ಎಂದು ಆರೋಪಿಸಿದರು.
‘ಈ ಬಾರಿ ಅಧಿಕ ಮಳೆಯಾದ ಕಾರಣ ಆಂಧ್ರಪ್ರದೇಶ 24 ಟಿಎಂಸಿ ಅಡಿ, ತೆಲಂಗಾಣ 4 ಟಿಎಂಸಿ ಅಡಿ ನೀರಿನ ಪಾಲನ್ನು ಉಳಿಸಿಕೊಂಡಿದೆ. ಅದರಂತೆ ರಾಜ್ಯ ಸರ್ಕಾರ ಕರ್ನಾಟಕ ಪಾಲಿನ ನೀರನ್ನು ಉಳಿಸಿಕೊಂಡು ಕಾಳಜಿ ವಹಿಸಬೇಕಾಗಿತ್ತು. ಸದ್ಯ 12 ಸಾವಿರ ಕ್ಯೂಸೆಕ್ ಒಳಹರಿವು ಇದ್ದು, ಡಿಸೆಂಬರ್‌ವರೆಗೆ ಡ್ಯಾಂನಲ್ಲಿ ಸುಮಾರು 10-15 ಟಿಎಂಸಿ ಅಡಿ ನೀರು ಸಂಗ್ರಹವಾಗುವ ನಿರೀಕ್ಷೆಯಿದೆ. ಆಗ ಎರಡನೇ ಬೆಳೆಗೆ ನೀರು ಹರಿಸಬಹುದು’ ಎಂದು ಹೇಳಿದರು.
ಮಾಜಿ ಸಚಿವ ವೆಂಕಟರಾವ್ ನಾಡಗೌಡ ಮಾತನಾಡಿ,‘ತುಂಗಭದ್ರಾ ಬೋರ್ಡ್‌ನ ಮೇಲುಸ್ತುವಾರಿಯನ್ನು ಕೇಂದ್ರ ಸರ್ಕಾರ ನೋಡಿಕೊಳ್ಳುತ್ತದೆ. ನೀರು ನಿರ್ವಹಣೆಯಲ್ಲಿ ಎಂದಿಗೂ ಹಸ್ತಕ್ಷೇಪ ಮಾಡಿಲ್ಲ. ಕನ್ಹಯ್ಯ ನಾಯ್ಡು ಅವರು ಮೂರು ತಿಂಗಳಲ್ಲಿ ಗೇಟ್‍ಗಳನ್ನು ಕೂರಿಸಬಹುದು ಎಂದು ಹೇಳಿದ್ದಾರೆ. ಅವರ ಸಲಹೆ ಪಡೆದುಕೊಂಡೇ ನಾವು ಎರಡನೇ ಬೆಳೆಗೆ ನೀರು ಹರಿಸಿ ಎಂದು ಒತ್ತಾಯಿಸುತ್ತಿದ್ದೇವೆ’ ಎಂದರು.
ಮುಖಂಡರಾದ ಬಸವರಾಜ ನಾಡಗೌಡ, ಅಶೋಕಗೌಡ ಗದ್ರಟಗಿ, ಕೆ.ಜಿಲಾನಿಪಾಷಾ, ಜಿ.ಸತ್ಯನಾರಾಯಣ, ವೆಂಕಟೇಶ ನಂಜಲದಿನ್ನಿ, ಧರ್ಮನಗೌಡ ಮಲ್ಕಾಪುರ, ಅಲ್ಲಮಪ್ರಭು ಪೂಜಾರಿ, ನಿರುಪಾದಿ ನಾಗಲಾಪುರ, ಸಣ್ಣ ಭೀಮನಗೌಡ ಗೊರೇಬಾಳ, ಎಸ್.ಪಿ.ಟೈಲರ್, ಚಂದ್ರಶೇಖರ ಮೈಲಾರ, ರವಿಗೌಡ ಪನ್ನೂರು, ಎಸ್.ಬಿ.ರಡ್ಡಿ, ಸೈಯದ್ ಆಸೀಫ್, ಜೀವನ್ ಉಪಸ್ಥಿತರಿದ್ದರು.
ಸಚಿವ ಎನ್.ಎಸ್.ಬೋಸರಾಜ ಅವರು ಬೆಂಗಳೂರಿನಲ್ಲಿ ಉಪಮುಖ್ಯಮಂತ್ರಿ ನೇತೃತ್ವದಲ್ಲಿ ಸಭೆ ನಡೆಸಿ ಎರಡನೇ ಬೆಳೆಗೆ ನೀರು ಹರಿಸುವ ಕುರಿತು ಚರ್ಚಿಸಲಾಗುವುದು ಎಂದು ಭರವಸೆ ನೀಡಿದ ಕಾರಣ ಬೆಂಗಳೂರಿಗೆ ನಿಯೋಗ ಕೊಂಡೊಯ್ಯುವುದನ್ನು ಮುಂದೂಡಲಾಗಿದೆ
-ಕೆ.ವಿರೂಪಾಕ್ಷಪ್ಪ ಮಾಜಿ ಸಂಸದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.