ADVERTISEMENT

ಬೀದಿಯಲ್ಲಿ ನಡೆಯಿತು ಅಧ್ಯಕ್ಷ, ಉಪಾಧ್ಯಕ್ಷರ ಸಭೆ!

ಲಿಂಗಸುಗೂರು ಪುರಸಭೆ ಮುಖ್ಯಾಧಿಕಾರಿ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2021, 21:28 IST
Last Updated 26 ಏಪ್ರಿಲ್ 2021, 21:28 IST
ಲಿಂಗಸುಗೂರು ಪುರಸಭೆ ಕಚೇರಿ ಹೊರ ಆವರಣದಲ್ಲಿ ಪುರಸಭೆ ಅಧ್ಯಕ್ಷೆ, ಉಪಾಧ್ಯಕ್ಷ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷರು ಪುರಸಭೆಯ ಕಡತಗಳನ್ನು ಪರಿಶೀಲಿಸಿದರು
ಲಿಂಗಸುಗೂರು ಪುರಸಭೆ ಕಚೇರಿ ಹೊರ ಆವರಣದಲ್ಲಿ ಪುರಸಭೆ ಅಧ್ಯಕ್ಷೆ, ಉಪಾಧ್ಯಕ್ಷ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷರು ಪುರಸಭೆಯ ಕಡತಗಳನ್ನು ಪರಿಶೀಲಿಸಿದರು   

ಲಿಂಗಸುಗೂರು (ರಾಯಚೂರು ಜಿಲ್ಲೆ): ಇಲ್ಲಿನ ಪುರಸಭೆ ಮುಖ್ಯಾಧಿಕಾರಿ ಮತ್ತು ಅಧ್ಯಕ್ಷ, ಉಪಾಧ್ಯಕ್ಷರ ನಡುವಿನ ಆಂತರಿಕ ಭಿನ್ನಾಭಿಪ್ರಾಯ ತಾರಕಕ್ಕೇರಿದ್ದು, ಸೋಮವಾರ ಪುರಸಭೆ ಕಚೇರಿ ಹೊರ ಆವರಣದಲ್ಲಿ ಅಧ್ಯಕ್ಷೆ ನೇತೃತ್ವದಲ್ಲಿ ಸಭೆ ನಡೆಯಿತು.

ಪುರಸಭೆ ಅಧ್ಯಕ್ಷೆ ಗದ್ದೆಮ್ಮ ಯಮನೂರ ಭೋವಿ, ಉಪಾಧ್ಯಕ್ಷ ಎಂ.ಡಿ ರಫಿ, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಮೋದ ಕುಲಕರ್ಣಿ ಮತ್ತು ಕೆಲ ಸದಸ್ಯರು ಹೊರ ಆವರಣದಲ್ಲಿ ಕುರ್ಚಿ ಹಾಕಿಕೊಂಡು ಸಭೆ ನಡೆಸಿದರು.

‘ಪರಿಶಿಷ್ಟ ಜಾತಿಗೆ ಸೇರಿದ ನಾನು ಅಧ್ಯಕ್ಷೆ ಆಗಿರುವುದಕ್ಕೆ ಹೀಗೆ ಮಾಡಲಾಗುತ್ತಿದೆಯೇ, ಬೇರೆ ಕಾರಣವೇ ಗೊತ್ತಿಲ್ಲ. ಆಡಳಿತಕ್ಕೆ ಸಂಬಂಧಿತ ಮಾಹಿತಿ ನೀಡುತ್ತಿಲ್ಲ. ಕಡತಗಳಿಗೆ ನನ್ನ ಒಪ್ಪಿಗೆ ಪಡೆಯುತ್ತಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ’ ಎಂದು ಅಧ್ಯಕ್ಷೆ ಗದ್ದೆಮ್ಮ ಯಮನೂರ ಭೋವಿ ಅಸಮಾಧಾನ ವ್ಯಕ್ತಪಡಿಸಿದರು.‌

ADVERTISEMENT

‘ಮುಖ್ಯಾಧಿಕಾರಿ ವಿಜಯಲಕ್ಷ್ಮಿ ಅವರು ವಿರೋಧಪಕ್ಷದವರಂತೆ ಮತ್ತು ರಾಜಕೀಯ ಮಾಡಲು ಬಂದಂತೆ ವರ್ತಿಸುತ್ತಾರೆ. ಅವರು ನಮಗೆ ಗೌರವ ಕೊಡದ ಕಾರಣಕ್ಕೆ ನಾವು ಕಚೇರಿ ಹೊರಗೆ ಕುಳಿತು ಸಭೆ ಮಾಡಿದೆವು. ಶೀಘ್ರವೇ ಸದಸ್ಯರ ಒಪ್ಪಿಗೆ ಪಡೆದು ಪುರಸಭೆ ಕಚೇರಿಗೆ ಬೀಗಮುದ್ರೆ ಹಾಕಲಾಗುವುದು’ ಎಂದು ಉಪಾಧ್ಯಕ್ಷ ಎಂ.ಡಿ ರಫಿ ತಿಳಿಸಿದರು.

‘ಪುರಸಭೆ ಅಡಳಿತ ಪಕ್ಷದವರು ಮತ್ತು ಸದಸ್ಯರ ಜೊತೆ ಭಿನ್ನಾಭಿಪ್ರಾಯವಿಲ್ಲ. ನಿಯಮದಂತೆ ನಾನು ಕೆಲಸ ಮಾಡುತ್ತಿದ್ದೇನೆ’ ಎಂದು ಪುರಸಭೆ ಮುಖ್ಯಾಧಿಕಾರಿ ವಿಜಯಲಕ್ಷ್ಮಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.