ಸಿಂಧನೂರು: ಕೇಂದ್ರದ ಎನ್‍ಡಿಎ ಮತ್ತು ರಾಜ್ಯ ಕಾಂಗ್ರೆಸ್ ಸರ್ಕಾರ ಮೇಲಿಂದ ಮೇಲೆ ಪೆಟ್ರೋಲ್, ಡೀಸೆಲ್, ಗ್ಯಾಸ್ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುತ್ತಿರುವುದನ್ನು ವಿರೋಧಿಸಿ ಸಿಪಿಐಎಂಎಲ್ ಲಿಬರೇಷನ್ ತಾಲ್ಲೂಕು ಘಟಕದಿಂದ ಸ್ಥಳೀಯ ಮಿನಿವಿಧಾನಸೌಧ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಲಾಯಿತು. ರಾಷ್ಟ್ರಪತಿಗೆ ಬರೆದ ಮನವಿಯನ್ನು ತಹಶೀಲ್ದಾರ್‌ಗೆ ಸಲ್ಲಿಸಲಾಯಿತು.
‘ಪೆಟ್ರೋಲ್ ಇಂದಿನ ದರ ₹102.92, ಡೀಸೆಲ್ ದರ ₹91.02 ಇದ್ದು, ಪ್ರತಿ ಲೀಟರ್‌ಗೆ ₹2 ಹೆಚ್ಚಿಸಲಾಗಿದೆ. ಮನಬಂದಂತೆ ಇಂಧನ ಬೆಲೆ ಹೆಚ್ಚಿಸುವುದರಿಂದ ಸಾರಿಗೆ, ಸರಕು ಸಾಗಣೆ, ವ್ಯಾಪಾರ ವಹಿವಾಟು, ಕೃಷಿ, ಕೈಗಾರಿಕೆ ಸೇರಿ ಇನ್ನಿತರೆ ವಲಯಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇದರಿಂದ ಜನಸಾಮಾನ್ಯರು ಮತ್ತಷ್ಟು ಸಂಕಷ್ಟ ಎದುರಿಸುವಂತಾಗಿದೆ’ ಎಂದು ಸಿಪಿಐಎಂಎಲ್ ಲಿಬರೇಶನ್ ಮುಖಂಡ ಬಸವರಾಜ ಕೊಂಡೆ ದೂರಿದರು.
‘ರೈತರು, ಕಾರ್ಮಿಕರು ಹಾಗೂ ಜನಸಾಮಾನ್ಯರಿಗೆ ಮಾರಕವಾಗಿರುವ ನೀತಿಗಳನ್ನು ಕೈಬಿಡಬೇಕು ಹಾಗೂ ಇಂಧನ ಬೆಲೆ ಏರಿಕೆಯನ್ನು ಸರ್ಕಾರಗಳು ಇಳಿಸಬೇಕು. ವಕ್ಫ್ ತಿದ್ದುಪಡಿ ಕಾಯ್ದೆ ರದ್ದುಗೊಳಿಸಬೇಕು’ ಎಂದು ಆಗ್ರಹಿಸಿದರು.
ಸಿಪಿಐಎಂಎಲ್ ಲಿಬರೇಶನ್ ಮುಖಂಡರಾದ ಆರ್.ಎಚ್. ಕಲಮಂಗಿ, ಶ್ರೀನಿವಾಸ ಬುಕ್ಕನಹಟ್ಟಿ, ಅಜ್ಜು, ಸಾದಿಕ್, ಹುಸೇನ್, ರಹೀಮ್, ಬಸವರಾಜ ಅರಳಹಳ್ಳಿ, ಹುಸೇನಪ್ಪ, ರಮೇಶ್, ಯಮನೂರಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.