ADVERTISEMENT

ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಿ: ದೊಡ್ಡ ಬಸವರಾಜ 

ಪ್ರಾಯಪೂರ್ವ ಬಾಲಕಿಯರಿಗೆ ಪೌಷ್ಟಿಕ ಆಹಾರ, ಕಾರ್ಯಕರ್ತೆಯರಿಗೆ ಸಮವಸ್ತ್ರ ವಿತರಣೆ

​ಪ್ರಜಾವಾಣಿ ವಾರ್ತೆ
Published 17 ಜೂನ್ 2025, 14:21 IST
Last Updated 17 ಜೂನ್ 2025, 14:21 IST
ಸಿಂಧನೂರಿನ ಸ್ತ್ರೀಶಕ್ತಿ ಒಕ್ಕೂಟ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಾಯಪೂರ್ವ ಬಾಲಕಿಯರಿಗೆ ಪೂರಕ ಪೌಷ್ಟಿಕ ಆಹಾರದ ಕಿಟ್‍ಗಳನ್ನು ಶಾಸಕ ಹಂಪನಗೌಡ ಬಾದರ್ಲಿ ಸೇರಿ ಗಣ್ಯರು ವಿತರಣೆ ಮಾಡಿದರು
ಸಿಂಧನೂರಿನ ಸ್ತ್ರೀಶಕ್ತಿ ಒಕ್ಕೂಟ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಾಯಪೂರ್ವ ಬಾಲಕಿಯರಿಗೆ ಪೂರಕ ಪೌಷ್ಟಿಕ ಆಹಾರದ ಕಿಟ್‍ಗಳನ್ನು ಶಾಸಕ ಹಂಪನಗೌಡ ಬಾದರ್ಲಿ ಸೇರಿ ಗಣ್ಯರು ವಿತರಣೆ ಮಾಡಿದರು   

ಸಿಂಧನೂರು: ‘ಬಾಲಕಿಯರು ಆಹಾರ ಸೇವನೆಗೆ ನಿರ್ಲಕ್ಷ್ಯ ವಹಿಸದೆ ಆರೋಗ್ಯ ರಕ್ಷಣೆಗಾಗಿ ಪೌಷ್ಟಿಕ ಆಹಾರ ಸೇವನೆಗೆ ಆದ್ಯತೆ ನೀಡಬೇಕು’ ಎಂದು ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡ ಬಸವರಾಜ ಸಲಹೆ ನೀಡಿದರು.

ಇಲ್ಲಿಯ ಸ್ತ್ರೀಶಕ್ತಿ ಒಕ್ಕೂಟ ಭವನದಲ್ಲಿ ಸಿಂಧನೂರು ಮತ್ತು ತುರ್ವಿಹಾಳ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಯಿಂದ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಪ್ರಾಯಪೂರ್ವ ಬಾಲಕಿಯರಿಗೆ ಪೂರಕ ಪೌಷ್ಟಿಕ ಆಹಾರದ ಕಿಟ್‍ಗಳ ವಿತರಣೆ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಸಮವಸ್ತ್ರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಇಲಾಖೆಯಿಂದ ಸಿಗುವ ಎಲ್ಲ ಸೌಲಭ್ಯಗಳನ್ನು ಮಹಿಳೆಯರು ಮತ್ತು ಮಕ್ಕಳಿಗೆ ತಪ್ಪದೆ ತಲುಪಿಸಬೇಕು. ಮಹಿಳಾ ಮತ್ತು ಮಕ್ಕಳ ಹಕ್ಕುಗಳ ರಕ್ಷಣೆ ನಮ್ಮೆಲ್ಲರ ಹೊಣೆ’ ಎಂದು ಹೇಳಿದರು.

ADVERTISEMENT

ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿ,‘ಮಹಿಳೆಯರಿಗೆ ಕೌಶಲ ತರಬೇತಿ ನೀಡಿ ಆರ್ಥಿಕ ಸ್ವಾವಲಂಬನೆಗೆ ಪ್ರೋತ್ಸಾಹ ನೀಡಬೇಕು. ಮುಂದಿನ ತಿಂಗಳಿನಿಂದಲೇ ತರಬೇತಿ ಆರಂಭವಾಗಲಿದೆ. ತರಬೇತಿಗೆ ಅಗತ್ಯಕ್ಕನುಗುಣವಾಗಿ ಅನುದಾನ ನೀಡಲಾಗುವುದು. ಸ್ವಸಹಾಯ ಗುಂಪುಗಳನ್ನು ರಚಿಸಿಕೊಂಡು ತರಬೇತಿ ಪಡೆಯಲು ಮುಂದಾಗಬೇಕು’ ಎಂದರು.

ಸಾಂಕೇತಿಕವಾಗಿ ಕಿಶೋರಿಯರಿಗೆ ಪೂರಕ ಪೌಷ್ಟಿಕ ಆಹಾರದ ಕಿಟ್ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಸಹಾಯಕಿಯರಿಗೆ ಸಮವಸ್ತ್ರ ವಿತರಿಸಿದರು. ‌

ಸ್ತ್ರೀಶಕ್ತಿ ಒಕ್ಕೂಟದ ಅಧ್ಯಕ್ಷೆ ಶ್ರೀದೇವಿ ಶ್ರೀನಿವಾಸ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಲಿಂಗನಗೌಡ, ಅಶೋಕ, ಟಿಎಪಿಸಿಎಂಎಸ್ ಅಧ್ಯಕ್ಷ ಶರಣಪ್ಪ ರಡ್ಡೇರ್, ಸ್ತ್ರೀಶಕ್ತಿ ಒಕ್ಕೂಟದ ಕಾರ್ಯದರ್ಶಿ ಗೌರಮ್ಮ, ಖಜಾಂಚಿ ಲೂದ್ ಮೇರಿ, ಅಂಗನವಾಡಿ ಫೆಡರೇಶನ್ ಅಧ್ಯಕ್ಷೆ ಗಿರಿಜಮ್ಮ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.