ADVERTISEMENT

ಕೇಂದ್ರ ಸರ್ಕಾರ ರೈತ ವಿರೋಧಿ ಧೋರಣೆ: ಆರೋಪ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2021, 14:22 IST
Last Updated 5 ಫೆಬ್ರುವರಿ 2021, 14:22 IST
ರೈತ– ಕಾರ್ಮಿಕ, ಕೃಷಿ ಸಂಬಂಧಿ ಕಾಯ್ದೆಗಳ ಹಾಗೂ ಕಾರ್ಮಿಕ ಸಂಹಿತೆಗಳ ವಿರುದ್ಧ ಪ್ರಚಾರ ಜಾಥಾ ಸಮಾರೋಪ ಅಂಗವಾಗಿ ರಾಯಚೂರಿನ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರಚಾರ ಜಾಥಾ ನಡೆಯಿತು
ರೈತ– ಕಾರ್ಮಿಕ, ಕೃಷಿ ಸಂಬಂಧಿ ಕಾಯ್ದೆಗಳ ಹಾಗೂ ಕಾರ್ಮಿಕ ಸಂಹಿತೆಗಳ ವಿರುದ್ಧ ಪ್ರಚಾರ ಜಾಥಾ ಸಮಾರೋಪ ಅಂಗವಾಗಿ ರಾಯಚೂರಿನ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರಚಾರ ಜಾಥಾ ನಡೆಯಿತು   

ರಾಯಚೂರು: ರೈತ– ಕಾರ್ಮಿಕ, ಕೃಷಿ ಸಂಬಂಧಿ ಕಾಯ್ದೆಗಳ ಹಾಗೂ ಕಾರ್ಮಿಕ ಸಂಹಿತೆಗಳ ವಿರುದ್ಧ ಪ್ರಚಾರ ಜಾಥಾ ಸಮಾರೋಪ ಅಂಗವಾಗಿ ನಗರದ ಟಿಪ್ಪುಸುಲ್ತಾನ್ ಉದ್ಯಾನದಲ್ಲಿ ಬಹಿರಂಗ ಸಭೆ ನಡೆಯಿತು.

ಜನವರಿ 28 ರಿಂದ ಬೀದರ್ ನ ಬಸವಕಲ್ಯಾಣದಿಂದ ಆರಂಭವಾಗಿ ಕಲಬುರ್ಗಿ, ಯಾದಗಿರಿಯಲ್ಲಿ ಸಂಚರಿಸಿ ಶುಕ್ರವಾರ ರಾಯಚೂರಿಗೆ ತಲುಪಿ ಮುಕ್ತಾಯಗೊಂಡಿತು.

ಬಹಿರಂಗ ಸಭೆಯಲ್ಲಿ ಕರ್ನಾಟಕ ಪ್ರಾತ ರೈತ ಸಂಘದ ರಾಜ್ಯಾಧ್ಯಕ್ಷ ನಿತ್ಯಾನಂದಸ್ವಾಮಿ ಮಾತನಾಡಿ, ಕೇಂದ್ರ ಸರ್ಕಾರ ಜನ ವಿರೋಧಿ, ರೈತ ವಿರೋಧಿ ಕಾಯ್ದೆ ಜಾರಿಗೊಳಿಸಲು ಮುಂದಾಗಿದೆ. ಕೇಂದ್ರದ ನೀತಿಯಿಂದಾಗಿ ದುಡಿಯುವ ಜನರು ಬಡವರಾಗಿಯೇ ಇದ್ದು ಶ್ರೀಮಂತರು ಮತ್ತಷ್ಟು ಶ್ರೀಮಂತರು ಆಗ್ತಾ ಇದ್ದಾರೆ ಎಂದು ಆರೋಪಿಸಿದರು.

ADVERTISEMENT

ದೇಶದ ರಾಜಧಾನಿಯ ಸುತ್ತ ಎರಡುವರೆ ತಿಂಗಳಿನಿಂದ‌ ರೈತರು ಸತ್ಯಗ್ರಹ, ಹೋರಾಟವನ್ನು ಶಾಂತ ರೀತಿಯಲ್ಲಿ ನಡೆಸುತ್ತಿದ್ದಾರೆ. ಆದರೆ ಸರ್ಕಾರ ಹೋರಾಟ ಹತ್ತಿಕ್ಕಲು ರಸ್ತೆ ಮೇಲೆ‌ ತಂತಿ,ಬೇಲಿ ಹಾಕುತ್ತಿದೆ. ಅವರು ಧೃತಿಗೆಡದೇ ಮನೆ, ಕೃಷಿ ಕೆಲಸ‌ಬಿಟ್ಟು ಮತ್ತಷ್ಟು ಜನ ದೆಹಲಿಯತ್ತ ಸಾಗಿದ್ದಾರೆ.

ಪ್ರಧಾನಮಂತ್ರಿ ಜೊತೆ ಮಾತುಕತೆ ನಡೆಸಬೇಕಾದರೆ ಆಗುತ್ತಿಲ್ಲ. ಒಳ್ಳೆಯ ದಿನಗಳು ಕೊಡುತ್ತೇವೆ ಎಂದು ಹೇಳಿ ಪ್ರಧಾನಮಂತ್ರಿ ಮೋದಿ ಅವರು ಖುದ್ದಾಗಿ ಮಾತನಾಡಿಸದೇ ಅಧಿಕಾರಿಗಳನ್ನು, ಪ್ರತಿನಿಧಿಗಳಿಗೆ‌ ಕಳಿಸುತ್ತಿದ್ದು ದುರದೃಷ್ಟಕರ ಸಂಗತಿ. ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿಯಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಯ್ದೆಗಳ ಬಗ್ಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಾವಿರಾರು ಕಿಲೋ ಮೀಟರ್ ಕ್ರಮಿಸಿ ದಾರಿಯುದ್ದಕ್ಕೂ ಜನರಿಗೆ ಪ್ರಮುಖ ಸಂದೇಶ ನೀಡಲಾಗಿದೆ. ಕೇವಲ ಪ್ರಚಾರ ಮಾಡದೇ ಜನರ ಜೊತೆ ಚರ್ಚಿಸಿ ಅಭಿಪ್ರಾಯ ಸಂಗ್ರಹಿಸಲಾಗಿದೆ ಎಂದು ಹೇಳಿದರು.

ಕರ್ನಾಟಕ ಪ್ರಾಂತ ಕೂಲಿಕಾರರ ಸಂಘದ ರಾಜ್ಯ ಕಾರ್ಯದರ್ಶಿ ಚಂದ್ರಪ್ಪ ಹೊಸ್ಕೇರಾ, ದಾವಲ್ ಸಾಬ್, ಕೆ.ಜಿ. ವೀರೇಶ, ಎಚ್. ಪದ್ಮಾ, ಡಿ.ಎಸ್ ಶರಣಬಸವ,ವರಲಕ್ಷ್ಮೀ, ರಮೇಶ ಮೀರಾಪುರ, ಪ್ರಕಾಶ ಮಾನೆ ಸೇರಿದಂತೆ ವಿವಿಧ ಸಂಘಟನೆಯ ಪದಾಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.