ರಾಯಚೂರು: ಇಲ್ಲಿನ ಪಿಕಾರ್ಡ್ ಬ್ಯಾಂಕ್ ಮೇಲೆ ಸ್ವಯಂಪ್ರೇರಿತ ದೂರು ದಾಖಲಿಸಬೇಕು ಹಾಗೂ ಮಳಿಗೆಯಲ್ಲಿ (ಕ್ಷೌರಿಕ) ಕಟಿಂಗ್ ಶಾಪ್ ನಡೆಸಲು ಅನುಮತಿ ಕೊಡಿಸಬೇಕು ಎಂದು ಒತ್ತಾಯಿಸಿ ಹಡಪದ ಸಮಾಜ ಸೇವಾ ಸಂಘದ ಪದಾಧಿಕಾರಿಗಳು ಮಂಗಳವಾರ ನಗರದ ಕನಕದಾಸ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿಯಮಿತ ಆಡಳಿತ ಮಂಡಳಿ ಮಳಿಗೆ ಹರಾಜು ಪ್ರಕಟಣೆ ಹೊರಡಿಸಿ, ಕಟಿಂಗ್ ಶಾಪ್ ತೆರೆಯಲು ಅವಕಾಶ ನೀಡುವುದಿಲ್ಲ ಎನ್ನುವ ಷರತ್ತು ವಿಧಿಸುವ ಮೂಲಕ ಸರ್ಕಾರದ ಆಸ್ತಿಯನ್ನು ಮನಬಂದಂತೆ ದುರುಪಯೋಗ ಮಾಡಿಕೊಳ್ಳಲು ಮುಂದಾಗಿದ್ದಾರೆ. ಅಲ್ಲದೇ ಕ್ಷೌರಿಕ ವೃತ್ತಿಯನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿದರು.
ಸರ್ಕಾರದ ಮಳಿಗೆಯಲ್ಲಿ ಕ್ಷೌರ ಸೇವೆ ಮಾಡಲು ನೀರಾಕರಿಸಿದ್ದು, ವೃತ್ತಿಗೆ ಅವಮಾನ ಮಾಡಿದ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನ ಆಡಳಿತ ಮಂಡಳಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮಳಿಗೆ ಬಾಡಿಗೆ ನೀಡಬೇಕು. ₹10 ಸಾವಿರ ಮುಂಗಡ ಹಣ, ₹3 ಸಾವಿರ ಬಾಡಿಗೆ ವಿಧಿಸಬೇಕು ಎಂದು ಒತ್ತಾಯಿಸಿದರು.
ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಗದ್ದೆಪ್ಪ, ಅಮರಪ್ಪ ಅಮೀನಗಡ, ಶರಣಬಸವ, ಮುತ್ತಣ್ಣ, ಭೀಮಣ್ಣ, ಧನಂಜಯ, ಗುಂಡಪ್ಪ, ತಿಪ್ಪಣ್ಣ, ನಾಗರಾಜ, ಮಹಾದೇವ, ಅಯ್ಯಪ್ಪ, ಬೂದೆಪ್ಪ, ಅಮರೇಶ, ದೇವೇಂದ್ರಪ್ಪ, ಪ್ರಭು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.