ADVERTISEMENT

ಗೃಹ ನಿರ್ಮಾಣ ಕಾಮಗಾರಿ ಸ್ಥಗಿತದ ವಿರುದ್ಧ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2020, 14:10 IST
Last Updated 28 ಫೆಬ್ರುವರಿ 2020, 14:10 IST
ರಾಯಚೂರಿನಲ್ಲಿ ಶ್ರೀರಾಷ್ಟ್ರೀಯ ದಲಿತ ಸೇನಾ ನಗರ ಸಮಿತಿಯಿಂದ ಶುಕ್ರವಾರ ಧರಣಿ ನಡೆಸಲಾಯಿತು
ರಾಯಚೂರಿನಲ್ಲಿ ಶ್ರೀರಾಷ್ಟ್ರೀಯ ದಲಿತ ಸೇನಾ ನಗರ ಸಮಿತಿಯಿಂದ ಶುಕ್ರವಾರ ಧರಣಿ ನಡೆಸಲಾಯಿತು   

ರಾಯಚೂರು: ಕೊಳೆಗೇರಿ ಅಭಿವೃದ್ಧಿ ಮಂಡಳಿಯ ವಸತಿ ಯೋಜನೆಯಡಿ ನಗರದ ವಿವಿಧೆಡೆ ಕೊಳೆಗೇರಿಗಳಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡ ಕಾಮಗಾರಿ ಸ್ಥಗಿತ ಮಾಡಬಾರದು. ಹಣ ಪಾವತಿಸಲು ಉದ್ದೇಶಪೂರ್ವಕವಾಗಿ ವಿಳಂಬ ಮಾಡುತ್ತಿರುವ ಸಹಾಯಕ ಎಂಜಿನಿಯರ್‌ ವಿ.ಪಿ.ರಂಗಾವಲಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಶ್ರೀರಾಷ್ಟ್ರೀಯ ದಲಿತ ಸೇನಾ ನಗರ ಸಮಿತಿಯಿಂದ ಶುಕ್ರವಾರ ಧರಣಿ ನಡೆಸಲಾಯಿತು.

ನಗರದ ಕೊಳಚೆ ಪ್ರದೇಶಗಳಲ್ಲಿ ವಸತಿ ಯೋಜನೆಯಡಿ ಕಾಮಗಾರಿ ಆರಂಭಿಸಿ ಎರಡು ವರ್ಷಗಳಾದರೂ ಇದುವರೆಗೆ ಪೂರ್ಣಗೊಂಡಿಲ್ಲ. ಕಾಮಗಾರಿ ವೀಕ್ಷಣೆಗೆ ಒಂದು ಬಾರಿಯೂ ರಂಗಾವಲಿ ಅವರು ಬಂದಿಲ್ಲ. ಎರಡು ತಿಂಗಳಿನಿಂದ ಕಾಮಗಾರಿಗಳು ಸ್ಥಗಿತಗೊಂಡಿದ್ದು ಗುತ್ತಿಗೆದಾರರಿಗೆ ವಿಚಾರಿಸಿದರೆ ಬಿಲ್ ಪಾವತಿಯಾಗಿಲ್ಲ ಎಂದು ಹೇಳುತ್ತಿದ್ದಾರೆ. ಗುತ್ತಿಗೆದಾರರರು, ಫಲಾನುಭವಿಗಳು ಕಚೇರಿಗೆ ಹೋದರೆ ರಂಗಾವಲಿ ಅವರು ಸಂಪರ್ಕಕ್ಕೆ ಸಿಗುವುದಿಲ್ಲ. ದೂರವಾಣಿ ಸಂಪರ್ಕಕ್ಕೂ ಸಿಗದೇ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂದು ದೂರಿದರು.

ಮನೆ ನಿರ್ಮಾಣ ಕಾಮಗಾರಿ ಪೂರ್ಣವಾಗದ ಕಾರಣ ಫಲಾನುಭವಿಗಳು ಬಾಡಿಗೆ ಮನೆ, ತಾತ್ಕಾಲಿಕ ಟೆಂಟ್, ದೇವಸ್ಥಾನಗಳಲ್ಲಿ ವಾಸಿಸುತ್ತಿದ್ದಾರೆ. ಸೊಳ್ಳೆಗಳ ಕಾಟ ಹಾಗೂ ಆರೋಗ್ಯ ಸಮಸ್ಯೆಗಳನ್ನು ಜನರು ಎದುರಿಸುತ್ತಿದ್ದು ಸಹಾಯಕ ಎಂಜಿನಿಯರ್‌ ರಂಗಾವಲಿ ನಿಷ್ಕಾಳಜಿ ವಹಿಸಿ ಬಡವರ ಜೀವನ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಆರೋಪಿಸಿದರು. ಕೂಡಲೇ ಕರ್ತವ್ಯ ಲೋಪದ ಆರೋಪದ ಮೇರೆಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ADVERTISEMENT

ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಶರಣಬಸವ, ಪಿ.ಶ್ರವಣಕುಮಾರ, ಮಾರೆಪ್ಪ, ಅನಂತ,ನಾಗರಾಜ, ಚಂದ್ರ ಶೇಖರ, ಗೋಪಾಲ, ಆಂಜನೇಯ್ಯ, ಅರುಣಕುಮಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.