ADVERTISEMENT

ಅತ್ಯಾಚಾರ, ಕೊಲೆ ವಿರೋಧಿಸಿ ಪ್ರತಿಭಟನೆ

ವಿವಿಧ ಸಂಘಟನೆಗಳಿಂದ ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2020, 13:50 IST
Last Updated 3 ಅಕ್ಟೋಬರ್ 2020, 13:50 IST
ಹಾಥರಸ್‌ನಲ್ಲಿ ನಡೆದ ಅತ್ಯಾಚಾರ ಘಟನೆಯನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್‌ ಮಹಿಳಾ ಘಟಕದಿಂದ ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತದಲ್ಲಿ ದೀಪ ಬೆಳಗಿಸಿ ಶುಕ್ರವಾರ ರಾತ್ರಿ ಪ್ರತಿಭಟನೆ ನಡೆಸಲಾಯಿತು 
ಹಾಥರಸ್‌ನಲ್ಲಿ ನಡೆದ ಅತ್ಯಾಚಾರ ಘಟನೆಯನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್‌ ಮಹಿಳಾ ಘಟಕದಿಂದ ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತದಲ್ಲಿ ದೀಪ ಬೆಳಗಿಸಿ ಶುಕ್ರವಾರ ರಾತ್ರಿ ಪ್ರತಿಭಟನೆ ನಡೆಸಲಾಯಿತು    

ರಾಯಚೂರು: ಉತ್ತರ ಪ್ರದೇಶದ ಹಾಥರಸ್‌ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ, ಕೊಲೆ ಘಟನೆಯನ್ನು ಖಂಡಿಸಿ, ರಾಜ್ಯ ಸರ್ಕಾರವನ್ನು ವಜಾಗೊಳಿಸುವಂತೆ ಒತ್ತಾಯಿಸಿ ರಾಯಚೂರಿನಲ್ಲಿ ವಿವಿಧ ಸಂಘಟನೆಗಳು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದವು.

ದಲಿತ ಸಂಘರ್ಷ ಸಮಿತಿ

ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ದೌರ್ಜನ್ಯ, ಅತ್ಯಾಚಾರ ಘಟನೆಗಳ ತಡೆಯುವಲ್ಲಿ ವಿಫಲವಾದ ಯೋಗಿ ಅದಿತ್ಯನಾಥ ಸರ್ಕಾರ ವಜಾಗೊಳಿಸಬೇಕು ಎಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕದ ಪದಾಧಿಕಾರಿಗಳು ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿಗೆ ಶನಿವಾರ ಮನವಿ ಸಲ್ಲಿಸಿದರು.

ADVERTISEMENT

ಉತ್ತರ ಪ್ರದೇಶದ ಯುವತಿ ಮೇಲೆ ಜರುಗಿದ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಆರೋಪಿಗಳಿಗೆ ಗಲ್ಲು ಶಿಕ್ಷೆಗೊಳಪಡಿಸಬೇಕು ಎಂದು ಆಗ್ರಹಿಸಿದರು. ಉತ್ತರ ಪ್ರದೇಶದ ಸರ್ಕಾರವನ್ನು ಕೂಡಲೇ ವಜಾಗೊಳಿಸಬೇಕು, ರಾಷ್ಟ್ರಪತಿ ಆಡಳಿತ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಎಸ್.ಪ್ರಸಾದ್, ಎಂ.ವಸಂತಕುಮಾರ, ರವೀಂದ್ರನಾಥಪಟ್ಟಿ, ಎಂ.ಈರಣ್ಣ, ಲಕ್ಷ್ಮೀದೇವಿ, ಶಾಂತರಾಜ್, ಶಿವಪ್ಪ ವಂದಲಿ, ಉರುಕುಂದಮ್ಮ, ಸಾವಿತ್ರಿ, ಎಂ.ಶರಣಬಸವ, ಅನಿಲ್‍ಕುಮಾರ, ಸಾಗರ್, ವೆಂಕಟೇಶ, ಸಾದಿಕ್ ಇದ್ದರು.

ಬಹುಜನ ಸಮಾಜ ಪಕ್ಷ

ಉತ್ತರ ಪ್ರದೇಶದ ಹಾಥರಸ್‌ನಲ್ಲಿ ಅತ್ಯಾಚಾರ ಎಸಗಿದ ಆರೋಪಿಗಳಿಗೆ ತಕ್ಷಣವೇ ಗಲ್ಲಿಗೇರಿಸುವಂತೆ ಜಿಲ್ಲಾಧಿಕಾರಿಗೆ ಬಹುಜನ ಸಮಾಜ ಪಕ್ಷ ಜಿಲ್ಲಾ ಘಟಕದಿಂದ ಶನಿವಾರ ಮನವಿ ಸಲ್ಲಿಸಲಾಯಿತು.

ಯುವತಿಯನ್ನು ಕ್ರೂರ ಮೃಗಗಳಿಗಿಂತ ವಿವರಿಸಲಾರದಷ್ಟು ಹಿಂಸೆ ಮಾಡಿ ಕೃತೃ ಎಸಗಿದ್ದಾರೆ.ಉತ್ತರ ಪ್ರದೇಶದಲ್ಲಿ ಕಾರ್ಯಾಂಗ ವ್ಯವಸ್ಥೆ ತೀರಾ ಕುಸಿದುಹೋಗಿದೆ. ಒಂದು ಕಡೆ ಕೇಂದ್ರ ಸರ್ಕಾರ ಬೇಟಿ ಬಚಾವೋ ಬೇಟಿ ಪಡಾವೋ ಅಂತಿದ್ದಾರೆ. ಆದರೆ ಅತ್ಯಾಚಾರದ ಪ್ರಕರಣಗಳು ಹೆಚ್ಚಾಗುತ್ತಿವೆ. ಮುಖ್ಯಮಂತ್ರಿ ಮುಂದುವರೆಯಬಾರದು ಎಂದು ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.

ಬಹುಜನ ಸಮಾಜ ಪಕ್ಷದ ರಾಜ್ಯ ಕಾರ್ಯದರ್ಶಿ ವೈ.ನರಸಪ್ಪ , ಎಂ ಬುಡ್ಡಪ್ಪ, ಹನುಮಂತ ಹೊಸಪೇಟೆ, ಹನುಮಂತಪ್ಪ ವಕೀಲರು, ಎಂ.ಬಸವರಾಜ ಭಂಡಾರಿ, ಜೈಭೀಮ ವಲ್ಲಭ ಸೇರಿದಂತೆ ಇನ್ನಿತರರು ಇದ್ದರು.

ಜಿಲ್ಲಾ ಕಾಂಗ್ರೆಸ್‌ ಮಹಿಳಾ ಘಟಕ: ಹಾಥರಸ್‌ನಲ್ಲಿ ನಡೆದ ಅತ್ಯಾಚಾರ ಘಟನೆಯನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್‌ ಮಹಿಳಾ ಘಟಕದಿಂದ ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ವೃತ್ತದಲ್ಲಿ ದೀಪ ಬೆಳಗಿಸಿ ಪ್ರತಿಭಟನೆ ನಡೆಸಲಾಯಿತು.

ರಾಜ್ಯ ಮಹಿಳಾ ಕಾಂಗ್ರೆಸ್ ಕಾರ್ಯಕಾರಣಿ ಸಮಿತಿ ಸದಸ್ಯ ಶಶಿಕಲಾ ಭೀಮರಾಯ, ಆದೋನಿ ಮಂಜುಳಾ, ಮಾಲಾ ಭಜಂತ್ರಿ, ಭಾರತಿ, ಖಾಸಿಂಬಿ, ರಜಿಯಾ ಪಾಟೀಲ್, ಪದ್ಮಾ ಕುರಡಿ, ರಾಜೇಶ್ವರಿ, ನಳಿನೀ ಮತ್ತಿತರರು ಇದ್ದರು.

ಕರ್ನಾಟಕ ಅಸ್ಪೃಶ್ಯ ಸಮುದಾಯಗಳ ಮಹಾಸಭಾ: ಹಾಥರಸ್‌ನಲ್ಲಿ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ತಪ್ಪಿಸ್ಥರನ್ನೆಲ್ಲ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಉತ್ತರಪ್ರದೇಶ ಸರ್ಕಾರವನ್ನು ಕೂಡಲೇ ವಜಾಗೊಳಿಸುವಂತೆ ಒತ್ತಾಯಿಸಿ ಕರ್ನಾಟಕ ಅಸ್ಪೃಶ್ಯ ಸಮುದಾಯಗಳ ಮಹಾಸಭಾದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಕೃತಿ ದಹಿಸಿ ಶನಿವಾರ ಪ್ರತಿಭಟನೆ ನಡೆಸಲಾಯಿತು.

ಮಹಿಳೆಯರಿಗೆ ರಕ್ಷಣೆ ಒದಗಿಸುವಲ್ಲಿ ಸರ್ಕಾರ ವಿಫಲವಾಗಿದೆ. ಜನರನ್ನು ರಕ್ಷಣೆ ಮಾಡಬೇಕಿದ್ದ ಪೊಲೀಸರೆ ಅಪರಾಧಿಗಳೊಂದಿಗೆ ನಿಂತಿರುವುದು ಶೋಚನೀಯ ವಿಷಯ. ಕೂಡಲೇ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ಎಂ.ವಿರೂಪಾಕ್ಷಿ, ಅಂಬಣ್ಣ ಅರೋಲಿ, ಎಂ.ಈರಣ್ಣ, ರಾಜುಪಟ್ಟಿ, ವಿಶ್ವನಾಥ ಪಟ್ಟಿ, ಎ.ವಸಂತಕುಮಾರ, ಮಹೇಶ ಮತ್ತಿತರರು ಇದ್ದರು.

ಕರ್ನಾಟಕ ಪರಿಶಿಷ್ಟ ಪಂಗಡ ವಾಲ್ಮೀಕಿ ನೌಕರರ ಒಕ್ಕೂಟ: ಉತ್ತರಪ್ರದೇಶದ ಹಾಥರಸ್‌ನಲ್ಲಿ ಅತ್ಯಾಚಾರ ನಡೆಸಿರುವ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಪರಿಶಿಷ್ಟ ಪಂಗಡ ವಾಲ್ಮೀಕಿ ನೌಕರರ ಒಕ್ಕೂಟದಿಂದ ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.

ವೆಂಕಟೇಶ ನಾಯಕ, ದೇವರಾಜ ನಾಯಕ ಮತ್ತಿತರರು ಇದ್ದರು.

ಹೈದರಾಬಾದ್‌ ಕರ್ನಾಟಕ ಸ್ಟುಡೆಂಟ್‌ ಫೆಡರೇಷನ್‌: ಉತ್ತರಪ್ರದೇಶದಲ್ಲಿ ನಡೆದ ಅತ್ಯಾಚಾರ ಘಟನೆಯನ್ನು ಖಂಡಿಸಿ ಹೈದರಾಬಾದ್ ಕರ್ನಾಟಕ ಸ್ಟುಡೆಂಟ್‌ ಫೆರೇಷನ್‌ನಿಂದ ಜಿಲ್ಲಾಡಳಿತ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.

ಮುಖ್ಯಮಂತ್ರಿ ಆದಿತ್ಯನಾಥ ಯೋಗಿ ಕೂಡಲೇ ರಾಜೀನಾಮೆ ನೀಡಬೇಕು. ಮಹಿಳೆಯರಿಗೆ ರಕ್ಷಣೆ ನೀಡದ ಸರ್ಕಾರವನ್ನು ಮುಂದುವರಿಯಲು ಬಿಡಬಾರದು ಎಂದರು. ಕಾಳಪ್ಪ, ನಾಗರಾಜ, ಚನ್ನಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.