ADVERTISEMENT

ಜಿಲ್ಲೆಯಲ್ಲಿ ಮತ್ತೆ 16 ಜನರಿಗೆ ಕೋವಿಡ್‌ ದೃಢ

ಮತ್ತೆ ಏರಿಕೆಯಾಗುತ್ತಿದೆ ‘ಹೋಂ ಕ್ವಾರಂಟೈನ್‌’ ಮಂದಿ ಸಂಖ್ಯೆ

​ಪ್ರಜಾವಾಣಿ ವಾರ್ತೆ
Published 2 ಜೂನ್ 2020, 16:14 IST
Last Updated 2 ಜೂನ್ 2020, 16:14 IST

ರಾಯಚೂರು: ರಾಜ್ಯ ಆರೋಗ್ಯ ಇಲಾಖೆಯಿಂದ ಮಂಗಳವಾರ ಬಿಡುಗಡೆ ಮಾಡಿರುವ ವರದಿ ಪ್ರಕಾರ, ರಾಯಚೂರು ಜಿಲ್ಲೆಯಲ್ಲಿ ಮತ್ತೆ 16 ಪಾಸಿಟಿವ್‌ ದೃಢವಾಗಿದ್ದು, ಕೊರೊನಾ ಸೋಂಕಿತರ ಸಂಖ್ಯೆಯು 233 ಕ್ಕೆ ಏರಿಕೆಯಾಗಿದೆ.

ಈಗಾಗಲೇ 37 ಜನರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದ್ದು, ಒಬ್ಬರು ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ಸದ್ಯ ಒಪೆಕ್‌ ಆಸ್ಪತ್ರೆಯಲ್ಲಿ 195 ಜನರನ್ನು ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ದೇವದುರ್ಗ ಪೊಲೀಸ್‌ ಠಾಣೆಯ ಕಾನ್‌ಸ್ಟೇಬಲ್‌ವೊಬ್ಬರಿಗೆ ಕೋವಿಡ್‌ ದೃಢವಾಗಿರುವುದು ಚಿಂತೆಗೀಡು ಮಾಡಿದೆ. ಇದರಿಂದ ಠಾಣೆಯ ಪಿಎಸ್‌ಐ, ಎಎಸ್‌ಐ ಸೇರಿ 22 ಪೊಲೀಸರನ್ನು ಹೋಂ ಕ್ವಾರಂಟೈನ್‌ ಮಾಡಿ, ಆರೋಗ್ಯದ ಮೇಲೆ ನಿಗಾ ವಹಿಸಲಾಗಿದೆ.

ಕೋವಿಡ್‌ ದೃಢವಾಗಿರುವ 16 ಜನರು ಮಹಾರಾಷ್ಟ್ರದಿಂದ ಹಿಂತಿರುಗಿದವರು. ಎಲ್ಲರೂ ದೇವದುರ್ಗ ತಾಲ್ಲೂಕಿನವರು. ಇವರೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದವರ ಪೈಕಿ ಕೆಲವರನ್ನು ಸರ್ಕಾರದ ನೂತನ ಶಿಷ್ಟಾಚಾರ ಆಧರಿಸಿ ಸಾಂಸ್ಥಿಕ ಕ್ವಾರಂಟೈನ್‌ನಿಂದ ಬಿಡುಗಡೆ ಮಾಡಲಾಗಿತ್ತು. ಮಂಗಳವಾರ ಮತ್ತೆ ಮನೆಗಳಿಗೆ ಹೋಗಿ ಆ್ಯಂಬುಲೆನ್ಸ್‌ ಮೂಲಕ ಕ್ವಾರಂಟೈನ್‌ ಕೇಂದ್ರಗಳಿಗೆ ಕರೆತರಲಾಗಿದೆ.

ADVERTISEMENT

ರೈಲಿನಲ್ಲಿ ಬಂದ 98 ಜನರು: ಮಹಾರಾಷ್ಟ್ರದಿಂದ ಸೋಮವಾರ ರಾತ್ರಿ ಉದ್ಯಾನ್ ಎಕ್ಸ್‌ಪ್ರೆಸ್ ರೈಲಿನಲ್ಲಿ 64 ಜನರು ಮತ್ತು ತಿರುಪತಿಯಿಂದ ನಿಜಾಮಬಾದ್ ರೈಲು ಮುಖಾಂತರ ಆಂಧ್ರ ಪ್ರದೇಶದಿಂದ 34 ಜನರು ಸೇರಿ ಒಟ್ಟು 98 ವಲಸೆಗಾರರು ಆಗಮಿಸಿದ್ದಾರೆ.

ಎಲ್ಲರನ್ನು ಸರ್ಕಾರದ ಮಾರ್ಗಸೂಚಿ ಹಾಗೂ ಶಿಷ್ಟಾಚಾರದಂತೆ ಸ್ಟ್ಯಾಂಪಿಂಗ್ ಮತ್ತು ಹೆಲ್ತ್ ಸ್ಕ್ರೀನಿಂಗ್ ಮಾಡಿ ನಿಗದಿತ ಸಾಂಸ್ಥಿಕ ಕ್ವಾರಂಟೈನ್, ಗೃಹ ಕ್ವಾರಂಟೈನ್ ಹಾಗೂ ವಸತಿಗೃಹ ದಿಗ್ಭಂದನಕ್ಕೆ ಒಳಪಡಿಸಲಾಗಿದೆ.

ಕೋವಿಡ್-19 ಸಾಂಕ್ರಾಮಿಕ ರೋಗವನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಜಿಲ್ಲಾಡಳಿತವು ಎಲ್ಲಾ ರೀತಿಯ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಕೋವಿಡ್-೧೯ ಮುಕ್ತ ಜಿಲ್ಲೆಯನ್ನಾಗಿಸುವ ಪ್ರಯತ್ನದಲ್ಲಿ ಸಾರ್ವಜನಿಕರು ಸಹಕರಿಸಬೇಕು ಎಂದು ಜಿಲ್ಲಾಡಳಿತ ಕೋರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.