
ರಾಯಚೂರು: ಕರ್ನಾಟಕ ವಿಧಾನ ಮಂಡಲದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿಯ ಸಭೆಗೆ ತಪ್ಪು ಮಾಹಿತಿ ನೀಡಿದ್ದಕ್ಕೆ ರಾಯಚೂರು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡುವಂತೆ ಸಮಿತಿಯ ಅಧ್ಯಕ್ಷ ಎನ್.ಎಚ್. ಕೋನರಡ್ಡಿ ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು.
ಮಹಿಳೆಯರ, ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಹಾಗೂ ಇತರ ಇಲಾಖೆಗಳ ಯೋಜನೆಗಳ ಹಾಗೂ ಕಾರ್ಯಕ್ರಮಗಳ ಬಗ್ಗೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾರ್ಯಕ್ರಮಗಳ ಪರಿಶೀಲನೆ ನಡೆಸಿದ ಬಳಿ ಅಧಿಕಾರಿಗೆ ನೋಟಿಸ್ ನೀಡಲು ಆದೇಶಿಸಿದರು.
‘ಮಕ್ಕಳ ಕಲ್ಯಾಣ ಸಮಿತಿಯು 84 ಪ್ರಕರಣಗಳಲ್ಲಿ 66 ಪ್ರಕರಣಗಳನ್ನು ವಿಲೇವಾರಿ ಮಾಡಿದೆ. 18 ಪ್ರಕರಣಗಳು ಬಾಕಿ ಇವೆ ಎಂದು ಸಮಿತಿಗೆ ನೀಡಿದ ಬುಕ್‌ಲೆಟ್‌ನಲ್ಲಿ ಉಲ್ಲೇಖಿಸಿದ್ದೀರಿ. ಆದರೆ, ಪಿಪಿಟಿನಲ್ಲಿ ಬೇರೆ ಅಂಕಿ ಅಂಶಗಳನ್ನು ತೋರಿಸುತ್ತಿದ್ದಿರಲ್ಲ’ ಎಂದು ಅಧ್ಯಕ್ಷರು ಪ್ರಶ್ನಿಸಿದರು.
‘ವಾರದ ತರಬೇತಿ ಮುಗಿಸಿ ಸಭೆಗೆ ಆಗಮಿಸಿದ್ದರಿಂದ ಪಿಪಿಟಿಯಷ್ಟೆ ಸರಿಪಡಿಸಲಾಗಿದೆ, ಬುಕ್‌ಲೆಟ್‌ನಲ್ಲಿ ತಿದ್ದುಪಡಿ ಮಾಡಿಲ್ಲ, ತಪ್ಪಾಗಿದೆ’ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಪ್ರತಿಕ್ರಿಯಿಸಿದರು.
‘ಸಭೆಯಲ್ಲಿ ಚರ್ಚಿಸುವ ಪ್ರತಿಯೊಂದು ವಿಷಯವೂ ಕಡತಕ್ಕೆ ಹೋಗುವ ಮಹತ್ವದ
ವಿಧಾನ ಮಂಡಲದ ಸದಸ್ಯರ ಸಮಿತಿ ಸಭೆಗೆ ಹೀಗೆ ತಪ್ಪು ಮಾಹಿತಿ ನೀಡಿದರೆ ಹೇಗೆ? ನಿಮಗೆ ಜವಾಬ್ದಾರಿ ಬೇಡವಾ? ಎಂದು ಸಮಿತಿಯ ಸದಸ್ಯರಾದ ಶರಣಗೌಡ ಕಂದಕೂರ ಹಾಗೂ ಕರೆಮ್ಮ ನಾಯಕ ಅಧಿಕಾರಿಯನ್ನು ತರಾಟೆ ತೆಗೆದುಕೊಂಡರು.
‘ಮಂತ್ರಾಲಯದಿಂದ ರಾಯಚೂರು ಕಡೆಗೆ ಬರುವಾಗ ವಾಹನವೊಂದರಲ್ಲಿ ಮಕ್ಕಳನ್ನು ಕೆಲಸಕ್ಕೆ ಕರೆದೊಯ್ಯುವುದನ್ನು ಖುದ್ದು ನೋಡಿದೆ. ನೀವು, ಕ್ಷೇತ್ರ ಭೇಟಿ ಕೊಡುತ್ತೀರಾ? ಅಂತಹ ಮಕ್ಕಳನ್ನು ಪತ್ತೆ ಹಚ್ಚಿದ್ದೀರಾ? ಎಂದು ಸಮಿತಿಯ ಅಧ್ಯಕ್ಷರು ಜಿಲ್ಲಾ ಕಾರ್ಮಿಕ ಅಧಿಕಾರಿಗೆ ಕೇಳಿದರು.
‘ಗ್ಯಾರೇಜ್, ಹೋಟೆಲ್ ಇನ್ನಿತರ ಕಡೆಗೆ ಪರಿಶೀಲನೆ ನಡೆಸಿ 2023ನೇ ಸಾಲಿನಿಂದ ಇಲ್ಲಿವರೆಗೆ 53 ಪ್ರಕರಣ ದಾಖಲಿಸಿ 7 ಲಕ್ಷ ದಂಡ ವಿಧಿಸಲಾಗಿದೆ’ ಎಂದು ಕಾರ್ಮಿಕ ಅಧಿಕಾರಿ ಆರತಿ ಸಭೆಗೆ ಮಾಹಿತಿ ನೀಡಿದರು.
‘ಈ ಭಾಗದ ಜನರಿಗೆ ತಿಳಿವಳಿಕೆ ಕೊರತೆ ಇದೆ. ಮಕ್ಕಳನ್ನು ಕೆಲಸಕ್ಕೆ ಕಳುಹಿಸದೇ ಶಾಲೆಗೆ ಸೇರಿಸುವಂತ ಜನಜಾಗೃತಿ ಕಾರ್ಯಕ್ರಮಕ್ಕೆ ಹೆಚ್ಚಿನ ಒತ್ತು ಕೊಡಬೇಕು. ಜಿಲ್ಲೆಯಾದ್ಯಂತ ನಿಯಮಿತ ಕ್ಷೇತ್ರ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಸಮಿತಿಯ ಅಧ್ಯಕ್ಷರು ಕಾರ್ಮಿಕ ಅಧಿಕಾರಿಗೆ ಸೂಚನೆ ನೀಡಿದರು.
ಅಂಗನವಾಡಿ ಕಟ್ಟಡಕ್ಕೆ ಜಾಗ ಇಲ್ಲ: ಸರ್ಕಾರ ಕೊಡುವ ಹಣಕ್ಕೆ ರಾಯಚೂರು ನಗರದಲ್ಲಿ ಎಲ್ಲೂ ಜಾಗ ಸಿಗುತ್ತಿಲ್ಲ. ರಾಯಚೂರು ನಗರದಲ್ಲಿ 170 ಅಂಗನವಾಡಿಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ ಎಂದು ಶಾಸಕ ಡಾ.ಎಸ್ ಶಿವರಾಜ ಪಾಟೀಲ ಸಭೆಗೆ ತಿಳಿಸಿದರು.
ಶಾಸಕರು, ಜಿಲ್ಲಾಧಿಕಾರಿ, ಪಾಲಿಕೆಯ ಆಯುಕ್ತರು ಎಲ್ಲರೂ ಸೇರಿ ಸಭೆ ನಡೆಸಿ, ಪ್ರತಿವರ್ಷ ಇಂತಿಷ್ಟು ಅಂಗನವಾಡಿಗಳಿಗೆ ಕಟ್ಟಡ ಗುರುತಿಸಬೇಕು ಎಂದು ಗುರಿನಿಗದಿಪಡಿಸಿ ಜಾಗ ಗುರುತಿಸಲು ಕ್ರಮವಹಿಸಬೇಕು ಎಂದು ಸಮಿತಿಯ ಅಧ್ಯಕ್ಷರು ಸಲಹೆ ನೀಡಿದರು.
ದೇವದುರ್ಗ ತಾಲ್ಲೂಕಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗಳು ಖಾಲಿ ಇರದಂತೆ ಕ್ರಮವಹಿಸಬೇಕು ಎಂದು ಶಾಸಕಿ ಕರೆಮ್ಮ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಮಿತಿಯ ಸದಸ್ಯರಾದ ಶಾಂತಾರಾಮ ಬುಡ್ನಸಿದ್ದಿ, ಸಚಿವಾಲಯದ ಜಂಟಿ ಕಾರ್ಯದರ್ಶಿ ಎಂ ಮಂಜುಳಾ, ಐಜಿಪಿ ಸತೀಶಕುಮಾರ, ಬಳ್ಳಾರಿ ವಲಯದ ಎಡಿಐಜಿ ವರ್ತಿಕಾ ಕಟಿಯಾರ್, ಜಿಲ್ಲಾಧಿಕಾರಿ ನಿತೀಶ್ ಕೆ., ಜಿಪಂ ಸಿಇಒ ಈಶ್ವರ್ ಕಾಂದೂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ ಉಪಸ್ಥಿತರಿದ್ದರು.
ಅಪೌಷ್ಟಿಕತೆ ಪ್ರಮಾಣ ಕಡಿಮೆ ಮಾಡಲು ಯತ್ನಿಸಿ ಬಾಲ ಕಾರ್ಮಿಕ ಪದ್ಧತಿ ನಿರ್ಮೂಲಗೆ ಒತ್ತುಕೊಡಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಸೂಚನೆ
‘ಪ್ರಕರಣ ಶೂನ್ಯಕ್ಕಿಳಿಸಿ’
ಬಾಲ್ಯವಿವಾಹ ಪೋಕ್ಸೊ ಬಾಲಗರ್ಭಿಣಿಯರ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಜನ ಜಾಗೃತಿ ಕಾರ್ಯಕ್ರಮಗಳನ್ನು ಹೆಚ್ಚಿಸಬೇಕು ಎಂದು ಮುಖ್ಯಮಂತ್ರಿ ಉಪ ಮುಖ್ಯಮಂತ್ರಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರು ಸಮಿತಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿಸಿದರು. ‘ಜಾಗೃತಿ ಕಾರ್ಯಕ್ರಮಗಳ ಮೂಲಕ ಬಾಲ್ಯವಿವಾಹ ಪೋಕ್ಸೊ ಬಾಲ ಗರ್ಭಿಣಿಯರ ಪ್ರಕರಣಗಳು ಶೂನ್ಯಕ್ಕಿಳಿಯುವಂತೆ ಮಾಡಬೇಕು‘ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.