
ರಾಯಚೂರು: ‘ಆಸ್ಪತ್ರೆಗಳು ಮಹಿಳೆಯರ ಆರೋಗ್ಯ ಸುರಕ್ಷತೆಯ ಕೇಂದ್ರಗಳಾಗಿವೆ‘ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುರೇಂದ್ರ ಬಾಬು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ರಾಯಚೂರಿನ ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ ಕಾರ್ಯಕ್ರಮದಲ್ಲಿ ತಾಯಂದಿರಿಗೆ ಸಿಹಿ ವಿತರಿಸಿ ಅವರು ಮಾತನಾಡಿದರು.
‘ಪ್ರಸ್ತುತ ದಿನಗಳಲ್ಲಿ ಹೆರಿಗೆಯು ಕುಟುಂಬದ ಆರ್ಥಿಕ ತೊಂದರೆಗೆ ಕಾರಣವಾಗುತ್ತಿದೆ ಎಂಬ ನಂಬಿಕೆಯನ್ನು ದೂರಮಾಡಲು ಮತ್ತು ಮಗುವಿನ ಜನನದ ನಂತರ ಹೆಣ್ಣು–ಗಂಡು ಎಂಬ ಭೇದ ತೊಲಗಿಸಲು ಮಹಿಳೆಯ ಆರೋಗ್ಯದ ದೃಷ್ಟಿಯಿಂದ ರಾಜ್ಯ ಸರ್ಕಾರವು ಸುಸಜ್ಜಿತ ಕಟ್ಟಡ, ಅತ್ಯಾಧುನಿಕ ಪರಿಕರಗಳು, ತಜ್ಞವೈದ್ಯರ ನೇಮಕದೊಂದಿಗೆ ತಾಯಿ ಮಕ್ಕಳ ಆಸ್ಪತ್ರೆಗಳನ್ನು ಜಿಲ್ಲೆಯ ರಾಯಚೂರು, ಮಾನ್ವಿ, ಸಿಂಧನೂರಗಳಲ್ಲಿ ಪ್ರಾರಂಭಿಸಿದೆ’ ಎಂದು ತಿಳಿಸಿದರು.
‘ಹೆರಿಗೆಗೆ ಬರುವ ಗರ್ಭಿಣಿಯು ‘ಜನನಿ ಶಿಶು ಸುರಕ್ಷಾ ಯೋಜನೆ’, ಸುಮನ್, ಲಕ್ಷ್ಯ ಕಾರ್ಯಕ್ರಮಗಳಡಿ ಸುರಕ್ಷಿತ ಹೆರಿಗೆಯೊಂದಿಗೆ ಸಂತಸದಿಂದ ನಗುಮಗು ವಾಹನದಲ್ಲಿ ಮನೆಗೆ ಮರಳುವ ಸುಂದರ ಕ್ಷಣಗಳನ್ನು ಹಂಚಿಕೊಳ್ಳಲಾಗುತ್ತಿದೆ’ ಎಂದು ಹೇಳಿದರು.
‘ಜಿಲ್ಲೆಯಲ್ಲಿ ರಾಷ್ಟ್ರೀಯ ಹೆಣ್ಣು ಮಗು ದಿನದ ಸಂದರ್ಭದಲ್ಲಿ ತಾಯಿ ಮರಣಗಳ ತಡೆಯುವ ಜೊತೆಗೆ ಹೆಣ್ಣಿನ ಸುರಕ್ಷತೆಗೆ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ. ಸರ್ಕಾರದ ಯೋಜನೆಗಳ ಸದುಪಯೋಗ ಪಡೆಯುವ ಮೂಲಕ ಹೆಣ್ಣು ಮಗುವಿನ ಉನ್ನತ ಗುರಿ, ಸಾಧನೆಗೆ ಸಾಕ್ಷಿಯಾಗೋಣ’ ಎಂದು ತಿಳಿಸಿದರು.
‘ಕುಟುಂಬದಲ್ಲಿ ಹೆಣ್ಣು ಎಂಬ ಭೇದ ಮಾಡದೆ ಮಗಳಿಗೆ ಆರೋಗ್ಯ ಇಲಾಖೆಯಡಿ ಬಾಲ್ಯದಲ್ಲಿಯೇ ಸಂಫೂರ್ಣ ಲಸಿಕೆ, ಹದಿಹರೆಯದಲ್ಲಿ ರಕ್ತಹೀನತೆಯ ವಿಷಚಕ್ರ ಅಳಿಸಲು ‘ಅನಿಮಿಯಾ ಮುಕ್ತ ಪೌಷ್ಟಿಕ ಕರ್ನಾಟಕ ಯೋಜನೆಯಡಿ ಕಬ್ಬಿಣಾಂಶ ಮಾತ್ರೆಗಳ ಒದಗಿಸುವಿಕೆ, ವೈಯಕ್ತಿಕ ಆರೋಗ್ಯಕ್ಕಾಗಿ ಶುಚಿ ನ್ಯಾಪ್‌ಕಿನ್‌ಗಳ ಪೂರೈಕೆ, ಸ್ನೇಹ ಕ್ಲಿನಿಕ್ ಮೂಲಕ ಹದಿಹರೆಯದ ಸಮಸ್ಯೆಗಳಿಗೆ ಸ್ಪಂದಿಸಲಾಗುತ್ತಿದೆ’ ಎಂದು ಹೇಳಿದರು.
‘ಮದುವೆಯನ್ನು 18 ವರ್ಷ ತುಂಬಿದ ನಂತರ, 20 ವರ್ಷಗಳ ನಂತರ ಗರ್ಭವತಿಯಾಗುವಿಕೆಯ ಮಹತ್ವ ಕುರಿತು ಜಾಗೃತಿ ನೀಡಲಾಗುತ್ತಿದೆ’ ಎಂದು ತಿಳಿಸಿದರು.
‘ಜಿಲ್ಲಾಧಿಕಾರಿ ಮಾರ್ಗದರ್ಶನದಲ್ಲಿ ಜಿಲ್ಲೆಯಾದ್ಯಂತ ಸ್ಕ್ಯಾನಿಂಗ್ ಸೆಂಟರ್‌ಗಳ ನಿಗಾವಣೆಯೊಂದಿಗೆ, ಹೆಣ್ಣು ಭ್ರೂಣ ಹತ್ಯೆ ತಡೆಗಟ್ಟುವಲ್ಲಿ ಆರೋಗ್ಯ ಇಲಾಖೆಯು ನಿರಂತರ ಜಾಗೃತಿ ಮೂಲಕ, ಪುರುಷ, ಸ್ತ್ರೀ ಅನುಪಾತದ ಸಮ ಪ್ರಮಾಣಕ್ಕಾಗಿ ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ಕಾಯ್ದೆ 1994ಕ್ಕೆ ಬಲ ತುಂಬಿದ್ದು, ಭ್ರೂಣ ಹತ್ಯೆ ತಡೆಗೆ ಕಾನೂನಿನಡಿ ಕಠಿಣ ಕ್ರಮ ಕೈಗೊಳ್ಳಲಾಗಿದ್ದು, ಭ್ರೂಣ ಲಿಂಗ ಪತ್ತೆಗೆ ಮುಂದಾದವರ ಬಗ್ಗೆ ಮಾಹಿತಿ ಕೊಟ್ಟವರಿಗೆ ನೀಡುವ ಬಹುಮಾನವನ್ನು ₹ 50 ಸಾವಿರದಿಂದ ₹ 1 ಲಕ್ಷಕ್ಕೆ ಏರಿಕೆ ಮಾಡಲಾಗಿದೆ’ ಎಂದು ಹೇಳಿದರು.
ಜಿಲ್ಲಾ ಅನುಷ್ಠಾನ ಅಧಿಕಾರಿ ಡಾ.ಶಿವಕುಮಾರ ನಾರಾ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಅಮೃತ ಹುಕ್ಕೇರಿ, ಎಂಸಿಎಚ್ ಆಡಳಿತ ವೈದ್ಯಾಧಿಕಾರಿ ಡಾ.ಪ್ರಜ್ವಲ್‌ಕುಮಾರ, ಪ್ರಸೂತಿ ತಜ್ಞೆ ಡಾ.ಶಾಲಿನಿ, ಅರವಳಿಕೆ ತಜ್ಞ ಡಾ.ಸರ್ಫರಾಜ್ ಖಾಜಿ, ಮಕ್ಕಳ ತಜ್ಞ ಡಾ.ಮೋಹಿಜಾ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಎಚ್. ದಾಸಪ್ಪನವರ, ಜಿಲ್ಲಾ ಉಪ ಆರೋಗ್ಯ ಶಿಕ್ಷಣಾಧಿಕಾರಿ ಬಸ್ಸಯ್ಯ, ಮುಖ್ಯ ಶುಶ್ರೂಷಣಾಧಿಕಾರಿ ಸಲೋಮಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಸರೋಜ ಕೆ, ನಾಗರಾಜ್, ಹಿರಿಯ ಹೆಚ್‌ಐಓ ಸುರೇಶ, ಹಿರಿಯ ಪಿಎಚ್‌ಸಿಒ ಈರಮ್ಮ, ಪಿಸಿಪಿಎನ್‌ಡಿಟಿಯ ಅಮರೇಶ ಗಡ್ಡಿ, ಎಂಟಿಎಸ್ ಸಂಧ್ಯಾ, ಎಫ್‌ಡಿಎ ರಾಘವೇಂದ್ರ, ಫಾರ್ಮಸಿ ಅಧಿಕಾರಿ ಖಾಜಾಪಾಶಾ, ಲೆಕ್ಕಪರಿಶೋಧಕ ತಿಮ್ಮರಾಜು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.