ರಾಯಚೂರು: ‘ನಗರ ವ್ಯಾಪ್ತಿಯ ನಿರಾಶ್ರಿತರಿಗೆ ಶಾಶ್ವತ ಸೂರು ಕಲ್ಪಿಸಲು ಮನೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಅಧಿಕಾರಿಗಳು ಗುಣಮಟ್ಟದೊಂದಿಗೆ ಮನೆಗಳನ್ನು ನಿರ್ಮಿಸುವ ಮೂಲಕ ನಿಯಮಾನುಸಾರವಾಗಿ ತ್ವರಿತಗತಿಯಲ್ಲಿ ಮನೆಗಳನ್ನು ನಿರಾಶ್ರಿತರಿಗೆ ಹಂಚಿಕೆ ಮಾಡಬೇಕು’ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವ ಎನ್.ಎಸ್. ಬೋಸರಾಜು ತಿಳಿಸಿದರು.
ನಗರ ಹೊರವಲಯದ ಯರಮರಸ್ ಬಳಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ (ಎಎಚ್‌ಪಿ) ಮಹಾನಗರ ಪಾಲಿಕೆಯ ಜಿ+3 ಮಹಡಿಯ ಮಾದರಿಯಲ್ಲಿ ನಿರ್ಮಿಸಿದ 2,419 ಮನೆಗಳಿಗೆ ಭೇಟಿ ನೀಡಿ ಪರಿಸೀಲಿಸಿದ ಬಳಿಕ ಮಾತನಾಡಿದರು.
‘ಈಗಾಗಲೇ ಮನೆಗಳ ನಿರ್ಮಾಣ ಕಾರ್ಯದಲ್ಲಿ ವಿಳಂಬವಾಗಿದೆ. ಬಡವರಿಗೆ ಸೂರಿನ ಭದ್ರತೆ ನೀಡಲು ಸರ್ಕಾರಗಳು ಮನೆಗಳನ್ನು ನಿರ್ಮಿಸುವುದಲ್ಲದೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಬ್ಸಿಡಿ ಯೋಜನೆಯಡಿ ಮನೆಗಳನ್ನು ಖರೀದಿಸಲು ಸಹ ಅವಕಾಶ ಕಲ್ಪಿಸಿವೆ. ಅರ್ಹ ನಿರಾಶ್ರಿತರು ಎಲ್ಲಾ ಸೌಲಭ್ಯಗಳೊಂದಿಗೆ ನಿರ್ಮಿಸಲಾಗಿರುವ ಮನೆಗಳನ್ನು ಪಡೆಯಬಹುದಾಗಿದೆ. ಅಧಿಕಾರಿಗಳು ನಿರಾಶ್ರಿತ ಫಲಾನುಭವಿಗಳನ್ನು ಗುರುತಿಸಿ ಮನೆಗಳನ್ನು ಹಂಚಿಕೆ ಮಾಡಬೇಕು’ ಎಂದು ತಿಳಿಸಿದರು.
‘ಒಟ್ಟು 2,419 ಮನೆಗಳ ಪೈಕಿ ಎರಡು ವಿಭಾಗಗಳಾಗಿ ವಿಂಗಡಿಸಿ ಮನೆಗಳನ್ನು ಕಟ್ಟಲಾಗಿದೆ. ಮೊದಲ ಭಾಗದಲ್ಲಿ 1,191 ಮನೆಗಳನ್ನು ನಿರ್ಮಿಸಲಾಗಿದೆ. ಎರಡನೇ ವಿಭಾಗದಲ್ಲಿ 1,228 ಮನೆಗಳನ್ನು ನಿರ್ಮಿಸಲಾಗಿದೆ. ತ್ವರಿತಗತಿಯಲ್ಲಿ ನಿರ್ಮಾಣ ಕಾಮಗಾರಿಯನ್ನು ಮುಗಿಸಿ ಹಂಚಿಕೆ ಪ್ರಕ್ರಿಯೆ ಪ್ರಾರಂಭಿಸಲಾಗುವುದು’ ಎಂದು ಸಚಿವರಿಗೆ ಮಾಹಿತಿ ನೀಡಿದರು.
ಮಹಾನಗರ ಪಾಲಿಕೆ ಆಯುಕ್ತ ಜುಬಿನ್ ಮೊಹಾಪಾತ್ರ, ರಾಯಚೂರು ಉಪ ವಿಭಾಗಾಧಿಕಾರಿ ಗಜಾನನ ಬಾಳೆ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್, ಭೂದಾಖಲೆಗಳ ನಿರ್ದೇಶಕರು, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮಹೇಶಕುಮಾರ, ತಾಲ್ಲೂಕು ಭೂದಾಖಲೆಗಳ ಸಹಾಯ ನಿರ್ದೇಶಕ ಬಾಳಪ್ಪ, ವಿಮಾನ ನಿಲ್ದಾಣದ ಎಂಜಿನಿಯರ್ ಪ್ರವೀಣ, ಕಾಂಗ್ರೆಸ್ ಮುಖಂಡ ಕೆ.ಶಾಂತಪ್ಪ, ಅಮರೇಗೌಡ ಹಂಚಿನಾಳ, ರುದ್ರಪ್ಪ ಅಂಗಡಿ ಹಾಗೂ ಸಣ್ಣ ನರಸರಡ್ಡಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.